Site icon Vistara News

New Parliament House : ಹೊಸ ಸಂಸತ್‌ ಭವನದಲ್ಲಿ ಮಿಂಚಲಿವೆ 5000 ಬಗೆಯ ಕಲಾಕೃತಿಗಳು

#image_title

ನವದೆಹಲಿ: ಹೊಸ ಸಂಸತ್‌ ಭವನದ (New Parliament House) ಕಾಮಗಾರಿ ಭರದಿಂದ ನಡೆಯುತ್ತಿದೆ. ಈ ಕಟ್ಟಡ ಸಂಪೂರ್ಣವಾಗಿ ಸಿದ್ಧವಾದ ನಂತರ ಹಲವಾರು ವಿಶೇಷತೆಗಳಿಗೆ ಸಾಕ್ಷಿಯಾಗಲಿದೆ. ಈ ಕಟ್ಟಡದಲ್ಲಿ ಭಾರತದ ಸನಾತನ ಪರಂಪರೆ ಮತ್ತು ವಾಸ್ತ್ರ ಶಾಸ್ತ್ರ ಪ್ರತಿಬಿಂಬಿಸುವ ನಿಟ್ಟಿನಲ್ಲಿ ಸುಮಾರು 5000 ಕಲಾಕೃತಿಗಳನ್ನೂ ನಿರ್ಮಿಸಿ, ಪ್ರದರ್ಶಿಸಲಾಗುವುದು ಎಂದು ವರದಿಯೊಂದು ಹೇಳಿದೆ.

ಇದನ್ನೂ ಓದಿ: Parliament Budget session: ರಾಹುಲ್, ಅದಾನಿ ಗಲಾಟೆ, ಸಂಸತ್ ಕಲಾಪ ಮತ್ತೆ ಮುಂದೂಡಿಕೆ
ಕಟ್ಟಡದ 65,000 ಮೀಟರ್‌ ಜಾಗದಲ್ಲಿ ಚಿತ್ರಕಲೆಗಳು, ಗೋಡೆ ಫಲಕಗಳು, ಕಲ್ಲಿನ ಶಿಲ್ಪಗಳು, ಲೋಹದ ವಸ್ತುಗಳು ಸೇರಿ ತರೇವಾರು ಕಲಾಕೃತಿಗಳನ್ನು ಪ್ರದರ್ಶನಕ್ಕಿಡಲಾಗುವುದು. ಹಾಗೆಯೇ ಕಟ್ಟಡದ ಆರು ಪ್ರವೇಶದ್ವಾರಗಳಿಗೆ ಶುಭಕರ ಪ್ರಾಣಿಗಳನ್ನು ತೋರಿಸವಂತಹ ರಕ್ಷಕ ಪ್ರತಿಮೆಗಳನ್ನೂ ನಿರ್ಮಿಸಲಾಗುವುದು. ಪ್ರಾಣಿಗಳನ್ನು ಭಾರತೀಯ ಸಂಸ್ಕೃತಿಯಲ್ಲಿ ಅವುಗಳ ಪ್ರಾಮುಖ್ಯತೆ, ವಾಸ್ತು ಶಾಸ್ತ್ರ, ಬುದ್ಧಿವಂತಿಕೆ, ವಿಜಯ, ಶಕ್ತಿ ಮತ್ತು ಯಶಸ್ಸಿನ ಗುಣಲಕ್ಷಣಗಳ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.‌

ಉತ್ತರ ದಿಕ್ಕಿನ ಪ್ರವೇಶದ್ವಾರದಲ್ಲಿ ಆನೆಯ ಪ್ರತಿಮೆ ನಿರ್ಮಿಸಲಾಗುವುದು. ಆನೆ ಬುದ್ಧಿವಂತಿಕೆ, ಸಂಪತ್ತು, ಬುದ್ಧಿಶಕ್ತಿ ಮತ್ತು ಸ್ಮರಣೆಯನ್ನು ಪ್ರತಿನಿಧಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಉತ್ತರ ದಿಕ್ಕು ಬುಧನೊಂದಿಗೆ ಸಂಬಂಧ ಹೊಂದಿದೆ ಹಾಗೂ ಹೆಚ್ಚಿನ ಬುದ್ಧಿಶಕ್ತಿಯ ಮೂಲವಾಗಿದೆ. ದಕ್ಷಿಣದ ಪ್ರವೇಶದ್ವಾರದಲ್ಲಿ ಅಶ್ವ (ಕುದುರೆ) ಪ್ರತಿಮೆ ನಿರ್ಮಿಸಲಾಗುವುದು. ಕುದುರೆ ಸಹಿಷ್ಣುತೆ, ಶಕ್ತಿ ಮತ್ತು ವೇಗದ ಸಂಕೇತವಾಗಿದೆ. ಪೂರ್ವ ಪ್ರವೇಶದ್ವಾರದಲ್ಲಿ ಗರುಡ (ಹದ್ದು) ಪ್ರತಿಮೆ ನಿರ್ಮಿಸಲಾಗುವುದ. ಇದು ಜನರ ಆಕಾಂಕ್ಷೆಗಳನ್ನು ಸಂಕೇತಿಸುತ್ತದೆ. ವಾಸ್ತು ಶಾಸ್ತ್ರದಲ್ಲಿ ಪೂರ್ವವು ಉದಯಿಸುವ ಸೂರ್ಯನೊಂದಿಗೆ ಸಂಬಂಧಿಸಿದೆ ಮತ್ತು ವಿಜಯವನ್ನು ಪ್ರತಿನಿಧಿಸುತ್ತದೆ.


ಈಶಾನ್ಯ ದಿಕ್ಕಿನ ಪ್ರವೇಶದ್ವಾರಕ್ಕೆ ಹಂಸವನ್ನು ಪ್ರತಿಮೆ ಮಾಡಲಾಗುವುದು ಇದು ವಿವೇಚನೆ ಮತ್ತು ಬುದ್ಧಿವಂತಿಕೆಯನ್ನು ಪ್ರತಿನಿಧಿಸುತ್ತದೆ. ಉಳಿದ ಪ್ರವೇಶದ್ವಾರಗಳಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಪ್ರತಿನಿಧಿಸುವ ಮಕರ ಮತ್ತು ಶಾರ್ದೂಲ ಅನ್ನು ಪ್ರತಿಮೆ ಮಾಡಲಾಗುವುದು ಎಂದು ಮೂಲಗಳು ಮಾಹಿತಿ ಕೊಟ್ಟಿವೆ.

ಅಷ್ಟೇ ಅಲ್ಲದೆ ಹೊಸ ಕಟ್ಟಡದಲ್ಲಿ ಸ್ವಾತಂತ್ರ್ಯ ಹೋರಾಟ ಮತ್ತು ಸಂವಿಧಾನ ರಚನೆಯಲ್ಲಿ ತೊಡಗಿಸಿಕೊಂಡ ವ್ಯಕ್ತಿಗಳ ಗ್ರಾನೈಟ್ ಪ್ರತಿಮೆಗಳು, ಎರಡು ಸದನಗಳಿಗೆ ತಲಾ ನಾಲ್ಕು ಗ್ಯಾಲರಿಗಳು ಸೇರಿ ಹಲವಾರು ರೀತಿಯ ವಿಶೇಷತೆಗಳನ್ನು ಮಾಡಲಾಗುವುದು.‌

ಸಂಸತ್‌ ಕಟ್ಟಡಕ್ಕೆ ಬಳಸಲಾಗುವ ಎಲ್ಲ ಕಲಾಕೃತಿಗಳನ್ನು ಹೊಸದಾಗಿ ರಚಿಸಲಾಗುತ್ತಿದೆ. ಸಾವಿರಕ್ಕೂ ಹೆಚ್ಚು ಕುಶಲಕರ್ಮಿಗಳು ಮತ್ತು ಕಲಾವಿದರು ಕಲಾಕೃತಿಗಳ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಟ್ಟಡದ ಒಳಗೆ, ಪ್ರತಿ ಗೋಡೆಯು ಬುಡಕಟ್ಟು ಮತ್ತು ಮಹಿಳಾ ನಾಯಕರ ಕೊಡುಗೆಗಳನ್ನು ಪ್ರತಿಬಿಂಬಿಸುವ ಥೀಮ್‌ ಹೊಂದಿರುತ್ತದೆ. 5000 ವರ್ಷಗಳ ಭಾರತೀಯ ನಾಗರಿಕತೆಯನ್ನು ಎತ್ತಿ ತೋರಿಸುವಂತಿರಲಿದೆ ಎಂದು ತಿಳಿಸಲಾಗಿದೆ.

Exit mobile version