Site icon Vistara News

Ram Mandir: ಅಯೋಧ್ಯೆ ರಾಮಮಂದಿರದ ಗರ್ಭಗುಡಿ ಹೇಗಿದೆ? ಇಲ್ಲಿವೆ ನೂತನ ಫೋಟೊಗಳು

New Pictures of Ram Mandir construction in Ayodhya released

New Pictures of Ram Mandir construction in Ayodhya released

ಅಯೋಧ್ಯೆ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ (Ram Mandir) ನಿರ್ಮಾಣದ ಕಾರ್ಯವು ಭರದಿಂದ ಸಾಗುತ್ತಿದೆ. ಹಬ್ಬ-ಹರಿದಿನಗಳಂದು ಸಾವಿರಾರು ಭಕ್ತರ ಆಗಮನದ ಮಧ್ಯೆಯೂ ನಿರ್ಮಾಣದ ಕಾರ್ಯವು ಸುಗಮವಾಗಿ ಸಾಗುತ್ತಿದೆ. ಅದರಲ್ಲೂ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿಗಳಾದ ಚಂಪತ್‌ ರಾಯ್‌ ಅವರು ರಾಮಮಂದಿರದ ಗರ್ಭಗುಡಿಯ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾನ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗುತ್ತದೆ. 2024ರ ಮಕರ ಸಂಕ್ರಮಣದ ದಿನ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಮಾಡಲು ತೀರ್ಮಾನಿಸಲಾಗಿದೆ. ಹಾಗಾಗಿ, ಗರ್ಭಗುಡಿಯ ನಿರ್ಮಾಣ ಕಾರ್ಯ ಕ್ಷಿಪ್ರವಾಗಿ ನಡೆಯುತ್ತಿದೆ. ಹೀಗೆ ನಿರ್ಮಾಣ ಹಂತದಲ್ಲಿರುವ ಗರ್ಭಗುಡಿಯ ಫೋಟೊವನ್ನು ಚಂಪತ್‌ ರಾಯ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಹೀಗಿದೆ ಗರ್ಭಗುಡಿ

ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗುತ್ತಿದೆ. ಸುಮಾರು 1,800 ಕೋಟಿ ರೂ. ವ್ಯಯವಾಗಲಿದೆ ಎಂದು ತಿಳಿದುಬಂದಿದೆ. ಈಗಾಗಲೇ ಶೇ.70ರಷ್ಟು ನಿರ್ಮಾಣ ಕಾರ್ಯವು ಪೂರ್ಣಗೊಂಡಿದೆ. ಜನವರಿಯಲ್ಲಿಯೇ ರಾಮಮಂದಿರಕ್ಕೆ ಚಾಲನೆ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೇ ಈಗಾಗಲೇ ಘೋಷಣೆ ಮಾಡಿದ್ದಾರೆ.

ಭರದಿಂದ ಸಾಗುತ್ತಿರುವ ನಿರ್ಮಾಣ

ಅಯೋಧ್ಯೆ ರಾಮಮಂದಿರದ ಕುರಿತು ಶತಮಾನಗಳಿಂದ ಸೃಷ್ಟಿಯಾಗಿದ್ದ ವಿವಾದದ ಕುರಿತು ಸುಪ್ರೀಂ ಕೋರ್ಟ್‌ 2019ರ ನವೆಂಬರ್‌ 9ರಂದು ಐತಿಹಾಸಿಕ ತೀರ್ಪು ನೀಡಿದೆ. ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿಯೇ ಮಂದಿರ ನಿರ್ಮಾಣಕ್ಕೆ ಕೋರ್ಟ್‌ ಅನುಮತಿ ನೀಡಿದೆ. ಅದರಂತೆ, ಪ್ರಧಾನಿ ನರೇಂದ್ರ ಮೋದಿ ಅವರು 2020ರ ಆಗಸ್ಟ್‌ 5ರಂದು ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದಾರೆ.

ಮೈಸೂರಿನಿಂದಲೂ ಎರಡು ಶಿಲೆ ರವಾನೆ

ಶ್ರೀ ರಾಮಮಂದಿರ ಸಂಕೀರ್ಣ ನಿರ್ಮಾಣಕ್ಕಾಗಿ ದೇಶದ ವಿವಿಧ ಭಾಗಗಳಿಂದ ಕಲ್ಲುಗಳನ್ನು ಅಯೋಧ್ಯೆಗೆ ತರಿಸಿ, ಕರಸೇವಕಪುರಂ ಕಾರ್ಯಾಗಾರದಲ್ಲಿ ಸಂಗ್ರಹಿಸಿ ಇಡಲಾಗಿದೆ. ಅದಾದ ಮೇಲೆ ಕೂಡ ನೇಪಾಳ, ಮೈಸೂರಿನಿಂದ ತಲಾ ಎರಡು ಶಿಲೆಗಳನ್ನು ತರಿಸಲಾಗಿದೆ. ಇನ್ನೂ 10 ಕಲ್ಲುಗಳನ್ನು ಇಲ್ಲಿಗೆ ತರುವುದು ಬಾಕಿಯಿದ್ದು, ತಂದಾದ ಮೇಲೆ ವೈಜ್ಞಾನಿಕವಾಗಿ ಪರಿಶೀಲನೆ ನಡೆಸಲಾಗುವುದು ಎಂದು ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕೆಲ ತಿಂಗಳ ಹಿಂದೆ ಮಾಹಿತಿ ನೀಡಿದೆ. ಮೈಸೂರಿನಿಂದ ಇನ್ನೂ ಹಲವು ಶಿಲೆಗಳನ್ನು ಅಯೋಧ್ಯೆಗೆ ಕಳುಹಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Ayodhya Ram Temple: ರಾಮಮಂದಿರ ನಿರ್ಮಾಣಕ್ಕೆ ಮೈಸೂರಿನ ಶಿಲೆಗಳು; ಈಗಾಗಲೇ ಅಯೋಧ್ಯೆ ತಲುಪಿವೆ 2 ಕಲ್ಲುಗಳು

Exit mobile version