ನವದೆಹಲಿ: ದೇಶದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (DRDO) ದೇಶೀಯವಾಗಿಯೇ ಹೊಸ ರೈಫಲ್ ತಯಾರಿಸಿದೆ. ಕೇವಲ 100 ದಿನಗಳಲ್ಲಿ ದೇಶೀಯವಾಗಿಯೇ ರೈಫಲ್‌ಅನ್ನು ಅಭಿವೃದ್ಧಿಪಡಿಸಲಾಗಿದ್ದು, ಇದರಿಂದ ಪ್ಯಾರಾ ಮಿಲಿಟರಿ ಪಡೆಗಳಿಗೆ ಭಾರಿ ಅನುಕೂಲವಾಗಲಿದೆ. ಡಿಆರ್‌ಡಿಒದ ಆರ್ಮನೆಂಟ್ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಎಷ್ಟಾಬ್ಲಿಶ್‌ಮೆಂಟ್ (ARDE) ಅಂಗ ಸಂಸ್ಥೆಯು ಹೈದರಾಬಾದ್ ಮೂಲದ ಖಾಸಗಿ ಕಂಪನಿ ಜತೆಗೂಡಿ ದ್ವಿಪಾ ಅರ್ಮರ್ ಇಂಡಿಯಾ ಪ್ರವೈಟ್ ಲಿಮಿಟೆಡ್ ಜತೆಗೂಡಿ ರೈಫಲ್‌ಅನ್ನು ತಯಾರಿಸಿದೆ. ಇದಕ್ಕೆ ಉಗ್ರಂ (Ugram Rifle) ಎಂದು ಹೆಸರಿಡಲಾಗಿದೆ.
ರೈಫಲ್ ಮೂಲಕ 7.62 ಎಂಎಂ ಗುಂಡುಗಳನ್ನು ಹಾರಿಸಬಹುದಾಗಿದ್ದು, ಪ್ಯಾರಾ ಮಿಲಿಟರಿಯಲ್ಲಿ ಈಗಾಗಲೇ ಬಳಸುತ್ತಿರುವ ಇನ್ಸಾಸ್ (INSAS) ಮಾದರಿಯ ರೈಫಲ್‌ಗಳ ಮೂಲಕ 5.52 ಎಂಎಂ ಗುಂಡುಗಳನ್ನು ಮಾತ್ರ ಹಾರಿಸಬಹುದಾಗಿದೆ. ಹಾಗಾಗಿ, ಉಗ್ರಂ ರೈಫಲ್‌ಅನ್ನು ಅತಿ ಆಕ್ರಮಣಕಾರಿ ಎಂದು ಬಣ್ಣಿಸಲಾಗಿದೆ. ದೇಶದ ಸೇನೆ ಹಾಗೂ ಪೊಲೀಸರನ್ನು ಗಮನದಲ್ಲಿಟ್ಟುಕೊಂಡು ಉಗ್ರಂ ರೈಫಲ್‌ಅನ್ನು ತಯಾರಿಸಲಾಗಿದ್ದು, ಅಂತಾರಾಷ್ಟ್ರೀಯ ಗುಣಮಟ್ಟ ಹೊಂದಿದೆ ಎಂದು ತಿಳಿದುಬಂದಿದೆ.
DRDO launches indigenous assault rifle 'Ugram' for armed forces
— ANI Digital (@ani_digital) January 9, 2024
Read @ANI Story | https://t.co/ONGA8CLxrA#DRDO #Rifle #Ugram pic.twitter.com/8Jv571Gy0r
ಉಗ್ರಂ ರೈಫಲ್ ನಾಲ್ಕು ಕೆ.ಜಿ ತೂಕ ಹೊಂದಿದ್ದು, ಸುಮಾರು 500 ಮೀಟರ್ ರೇಂಜ್ ಇದೆ. ಆಟೋಮ್ಯಾಟಿಕ್ ಹಾಗೂ ಸಿಂಗಲ್ ಮೋಡ್‌ನಲ್ಲಿ 20 ಸುತ್ತುಗಳವರೆಗೆ ಗುಂಡು ಹಾರಿಸಬಹುದಾಗಿದೆ. ಸೇನೆಗೆ ಬೇಕಾಗುವ ಶಸ್ತ್ರಾಸ್ತ್ರಗಳ ಸಂಗ್ರಹಣೆ, ಲಭ್ಯತೆಯನ್ನು ದೃಢಪಡಿಸುವ ಜನರಲ್ ಸ್ಟಾಫ್ ಕ್ವಾಲಿಟೇಟಿವ್ ರಿಕ್ವೈರ್‌ಮೆಂಟ್ಸ್ (GSQR) ಬೇಡಿಕೆಯ ಮೇರೆಗೆ ಇದನ್ನು 100 ದಿನಗಳಲ್ಲಿಯೇ ಅಭಿವೃದ್ಧಿಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ದೇಶೀಯವಾಗಿಯೇ ರೈಫಲ್ ಅಭಿವೃದ್ಧಿಪಡಿಸಿರುವ ಕಾರಣ ಮೇಕ್ ಇನ್ ಇಂಡಿಯಾ ಅಭಿಯಾನಕ್ಕೂ ಉತ್ತೇಜನ ಸಿಗಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Vijayanagara News: ನಾಗರಿಕ ಬಂದೂಕು ತರಬೇತಿಗೆ ಅರ್ಜಿ ಆಹ್ವಾನ
“ಕೇವಲ 100 ದಿನಗಳಲ್ಲಿಯೇ ರೈಫಲ್‌ಅನ್ನು ತಯಾರಿಸಲಾಗಿದೆ. ಸುಮಾರು ಎರಡು ವರ್ಷಗಳ ಹಿಂದೆಯೇ ರೈಫಲ್ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿತ್ತು. ಈಗ ಇದು ಸಾಕಾರವಾಗಿದೆ. ಎಆರ್‌ಡಿಇ ಇದರ ವಿನ್ಯಾಸವನ್ನು ಮಾಡಿದ್ದು, ಖಾಸಗಿ ಕಂಪನಿಯು ತಯಾರಿಸಿದೆ. ಸದ್ಯ, ರೈಫಲ್‌ಅನ್ನು ಪ್ರಾಯೋಗಿಕವಾಗಿ ಬಳಸಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸೇನೆ ಹಾಗೂ ಪೊಲೀಸ್ ಪಡೆಗಳಿಗೆ ವಿನಿಯೋಗ ಮಾಡುವ ಚಿಂತನೆ ಇದೆ. ರೈಫಲ್ ಸಾಮರ್ಥ್ಯ ಹಾಗೂ ದಕ್ಷತೆಯ ಆಧಾರದ ಮೇಲೆ ಉತ್ಪಾದನೆ ಹೆಚ್ಚಿಸಲಾಗುವುದು” ಎಂದು ಎಆರ್‌ಡಿಇ ನಿರ್ದೇಶಕ ಅಂಕತಿ ರಾಜು ಮಾಹಿತಿ ನೀಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ