Site icon Vistara News

ರಾಹುಲ್‌ ಗಾಂಧಿಯನ್ನು ‘ಮಂಕುದಿಣ್ಣೆ’ ಎಂದ ಎಸ್‌ಪಿ ನಾಯಕ; ‘ಇಂಡಿಯಾ’ದಲ್ಲಿ ಬಿಕ್ಕಟ್ಟು ಕಂಡೆಯಾ!

Rahul Gandhi

New Rift In INDIA Bloc; SP Leader Calls Rahul Gandhi 'Crazy Dimwit'

ಲಖನೌ/ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಶತಾಯ ಗತಾಯ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್‌ ಸೇರಿ 26 ಪಕ್ಷಗಳು ಒಗ್ಗೂಡಿ ಇಂಡಿಯಾ ಒಕ್ಕೂಟವನ್ನು (INDIA Bloc) ರಚಿಸಿವೆ. ಆದರೆ, ಲೋಕಸಭೆ ಚುನಾವಣೆ ಬಿಡಿ, ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗೂ ಮೊದಲೇ ಇಂಡಿಯಾ ಒಕ್ಕೂಟದಲ್ಲಿ ಬಿಕ್ಕಟ್ಟು ಉಲ್ಬಣವಾಗುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಇಂಡಿಯಾ ಒಕ್ಕೂಟ ಸೇರಿರುವ ಸಮಾಜವಾದಿ ಪಕ್ಷದ ನಾಯಕ ಐ.ಪಿ. ಸಿಂಗ್‌ (I P Singh) ಅವರು ರಾಹುಲ್‌ ಗಾಂಧಿ (Rahul Gandhi) ಅವರನ್ನು “ಮಂಕುಬುದ್ಧಿಯವ” (Crazy Dimwit) ಎಂದು ಕರೆದಿದ್ದಾರೆ.

ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಹಾಗೂ ಸಮಾಜವಾದಿ ಪಕ್ಷದ ಮಧ್ಯೆ ಬಿಕ್ಕಟ್ಟು ಉಂಟಾಗಿರುವ ಮಧ್ಯೆಯೇ ರಾಹುಲ್‌ ಗಾಂಧಿ ಅವರ ಮೇಲೆ ವೈಯಕ್ತಿಕ ಹೇಳಿಕೆಗಳ ಮೂಲಕ ಸಮಾಜವಾದಿ ಪಕ್ಷದ ನಾಯಕ ದಾಳಿ ಮಾಡಿದ್ದಾರೆ. “ರಾಹುಲ್‌ ಗಾಂಧಿ ಒಬ್ಬ ಮಂಕುದಿಣ್ಣೆ. ಅವರು 2019ರ ಲೋಕಸಭೆ ಚುನಾವಣೆಯಲ್ಲಿ ಚೌಕಿದಾರ್‌ ಚೋರ್‌ ಹೈ ಎಂಬ ಹುಸಿ ಅಭಿಯಾನ ಆರಂಭಿಸಿದರು. ಈಗ ಅವರು ಮೊಹಬ್ಬತ್‌ ಕಿ ದುಖಾನ್‌ ತೆಗೆದಿದ್ದೇನೆ ಎನ್ನುತ್ತಿದ್ದಾರೆ. ಖುದ್ದು ವರುಣ್‌ ಗಾಂಧಿ ಅವರನ್ನೇ ಸೇರದವರು ಏನು ‘ಪ್ರೀತಿಯ ಅಂಗಡಿ’ ತೆಗೆಯುತ್ತಾರೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ನಿತೀಶ್‌ ಕುಮಾರ್‌ಗೆ ಒಗ್ಗಟ್ಟಿನ ಕ್ರೆಡಿಟ್‌

ಇಂಡಿಯಾ ಒಕ್ಕೂಟದ ರಚನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ ಐ.ಪಿ.ಸಿಂಗ್‌ ಕ್ರೆಡಿಟ್‌ ಕೊಟ್ಟಿದ್ದಾರೆ. “ಇಂಡಿಯಾ ಒಕ್ಕೂಟ ರಚನೆಯಲ್ಲಿ ನಿತೀಶ್‌ ಕುಮಾರ್‌ ಅವರ ಪಾತ್ರ ಮಹತ್ತರವಾಗಿದೆ. ಆದರೀಗ ಎಲ್ಲ ಪಕ್ಷಗಳನ್ನು ಒಗ್ಗೂಡಿಸುವ ಬದಲು ಕಾಂಗ್ರೆಸ್‌ ಬಿರುಕು ಮೂಡಿಸುತ್ತಿದೆ. ಒಕ್ಕೂಟದಲ್ಲಿಯೇ ಕಾಂಗ್ರೆಸ್‌ ಕುತಂತ್ರ ಮಾಡುತ್ತಿದೆ” ಎಂದು ಹೇಳಿದ್ದಾರೆ. ” ಕಾಂಗ್ರೆಸ್‌ನ ಏಳು ತಲೆಮಾರುಗಳು ಕೂಡ ಸಮಾಜವಾದಿ ಪಕ್ಷಕ್ಕೆ ಏನೂ ಮಾಡಿಕೊಳ್ಳಲು, ಧಕ್ಕೆಯುಂಟು ಮಾಡಲು ಸಾಧ್ಯವಾಗಿಲ್ಲ. ಇನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಮಕ್ಕಳೇ ಇಲ್ಲ. ಯಾರೂ ನಮ್ಮನ್ನು ಹಣಿಯಲು ಸಾಧ್ಯವಿಲ್ಲ” ಎಂದಿದ್ದಾರೆ.

ಇದನ್ನೂ ಓದಿ: Poster War: ‘ರಾಹುಲ್‌ ಗಾಂಧಿ ಆಧುನಿಕ ಕಾಲದ ರಾವಣ’ ಎಂದ ಬಿಜೆಪಿ; ಕಾಂಗ್ರೆಸ್ ತಿರುಗೇಟು

ಮಧ್ಯಪ್ರದೇಶದಲ್ಲಿ ಸೀಟು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಹಾಗೂ ಸಮಾಜವಾದಿ ಪಕ್ಷದ ಮಧ್ಯೆ ಬಿರುಕು ಮೂಡಿದೆ. ಇಂಡಿಯಾ ಒಕ್ಕೂಟ ರಾಷ್ಟ್ರ ಮಟ್ಟದಲ್ಲಿ ಮಾತ್ರ ಎಂದೂ, ಮಧ್ಯಪ್ರದೇಶದಲ್ಲಿ ಸೀಟು ಹಂಚಿಕೆ ಇಲ್ಲವೆಂದೂ ಈಗಾಗಲೇ ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ತಿಳಿಸಿದ್ದಾರೆ. ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ ನೀಡಿದ ಹೇಳಿಕೆ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಈಗಾಗಲೇ ಇಂಡಿಯಾ ಒಕ್ಕೂಟದ ನಾಯಕರಲ್ಲಿ ಭಿನ್ನಮತ ಭುಗಿಲೆದ್ದಿದೆ. ಇದರ ಬೆನ್ನಲ್ಲೇ ಸಮಾಜವಾದಿ ಪಕ್ಷದ ನಾಯಕ ನೀಡಿದ ಹೇಳಿಕೆಯು ಒಗ್ಗಟ್ಟಿನಲ್ಲಿ ಬಿರುಕು ಮೂಡಿರುವುದಕ್ಕೆ ಸಾಕ್ಷಿ ಎಂದೇ ಹೇಳಲಾಗುತ್ತಿದೆ.

Exit mobile version