ನವದೆಹಲಿ: ಅತ್ಯಾಚಾರದಿಂದಾಗಿ ಗರ್ಭಿಣಿಯಾದ ಅಪ್ರಾಪ್ತರಿಗೆ (minor rape victims) ನೆರವು ಒದಗಿಸುವ ಯೋಜನೆಯನ್ನು (New scheme) ಕೇಂದ್ರ ಸರ್ಕಾರವು ಜಾರಿಗೆ ತಂದಿದೆ. ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾದ ಬಾಲಕಿಯರನ್ನು ಕುಟುಂಬಗಳು ತ್ಯಜಿಸಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅಂಥ ಸಂತ್ರಸ್ತರಿಗೆ ಆಶ್ರಯ, ಆಹಾರ ಮತ್ತು ಕಾನೂನು ನೆರವು ಒದಗಿಸಲು ಕೇಂದ್ರ ಸರ್ಕಾರ (Central Government) ಮುಂದಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ (Women and Child Development Minister Smriti Irani) ಅವರು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು, ನಿರ್ಭಯಾ ಸ್ಕೀಮ್‌ನಡಿ ಈ ಹೊಸ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಯಾವುದೇ ಮಾರ್ಗವಿಲ್ಲದ ಗರ್ಭಿಣಿ ಅಪ್ರಾಪ್ತ ಸಂತ್ರಸ್ತರಿಗೆ ಮೂಲಸೌಕರ್ಯ ಮತ್ತು ಆರ್ಥಿಕ ಬೆಂಬಲವನ್ನು ಖಾತರಿಪಡಿಸುವ ಗುರಿಯನ್ನು ಈ ಯೋಜನೆಯು ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
ಹೆಚ್ಚುವರಿಯಾಗಿ ಮಿಷನ್ ವಾತ್ಸಲ್ಯ ಯೋಜನೆಯ ಆಡಳಿತ ರಚನೆಯನ್ನು ಪರಿಷ್ಕರಿಸಿದ್ದೇವೆ. ಅಪ್ರಾಪ್ತ ಸಂತ್ರಸ್ತರಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಮತ್ತು ಮಕ್ಕಳ ಆರೈಕೆ ಸಂಸ್ಥೆಗಳ ಸಹಯೋಗದೊಂದಿಗೆ ಬೆಂಬಲವನ್ನು ಒದಗಿಸುತ್ತಿದ್ದೇವೆ ಎಂದು ಕೇಂದ್ರ ಸಚಿವ ಸ್ಮೃತಿ ಇರಾನಿ ಅವರು ತಿಳಿಸಿದರು. ಮಿಷನ್ ವಾತ್ಸಲ್ಯ ಯೋಜನೆಯನ್ನು ಕೇಂದ್ರ ಸರ್ಕಾರವು 2021ರಲ್ಲಿ ಜಾರಿಗೆ ತಂದಿತ್ತು. ಮಕ್ಕಳ ರಕ್ಷಣೆ ಹಾಗೂ ಕಲ್ಯಾಣವು ಈ ಯೋಜನೆಯ ಗುರಿಯಾಗಿದೆ.
ಹೊಸ ಯೋಜನೆಯಡಿಯಲ್ಲಿ 18 ವರ್ಷ ವಯಸ್ಸಿನ ಹುಡುಗಿಯರಿಗೆ ಮಕ್ಕಳ ಆರೈಕೆ ಸಂಸ್ಥೆಗಳ ಮಟ್ಟದಲ್ಲಿ ಮತ್ತು 23 ವರ್ಷಗಳ ನಂತರದ ಆರೈಕೆ ಸೌಲಭ್ಯಗಳಲ್ಲಿ ಮಹಿಳೆಯರಿಗಾಗಿ ನೆರವು ಒದಗಿಸಲಾಗುತ್ತದೆ. ಈ ಅಪ್ರಾಪ್ತ ಸಂತ್ರಸ್ತರಿಗೆ ಕಾನೂನು ನೆರವು ಜೊತೆಗೆ ಕೋರ್ಟ್ ಕಲಾಪಗಳಲ್ಲಿ ಭಾಗವಹಿಸಲು ಸುರಕ್ಷಿತ ಸಾರಿಗೆಯ ವ್ಯವಸ್ಥೆಯನ್ನೂ ಈ ಯೋಜನೆಯಡಿ ಕಲ್ಪಿಸಲಾಗುತ್ತದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ತಿಳಿಸಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.