Site icon Vistara News

ಅಮಾನತುಗೊಂಡ ಜೈಲು ಅಧೀಕ್ಷಕನಿಗೆ ಸತ್ಯೇಂದ್ರ ಜೈನ್​ ಸೆಲ್​​ನಲ್ಲಿ ಏನು ಕೆಲಸ? ವೈರಲ್​ ಆಯ್ತು ಹೊಸ ವಿಡಿಯೊ

New video of Satyendar Jain Viral

ದೆಹಲಿ: ಭ್ರಷ್ಟಾಚಾರ ಆರೋಪದಡಿ ತಿಹಾರ್​ ಜೈಲು ಸೇರಿರುವ ದೆಹಲಿ ಸಚಿವ ಸತ್ಯೇಂದ್ರ ಜೈನ್​ರಿಗೆ ಜೈಲಿನಲ್ಲಿ ವಿಶೇ ಉಪಚಾರ ಸಿಗುತ್ತಿದೆ. ಅವರಲ್ಲಿ ಕೈದಿಯಾಗಿದ್ದರೂ ಎಲ್ಲ ರೀತಿಯ ಸೌಲಭ್ಯಗಳೂ ಸಿಗುತ್ತಿದ್ದು, ಅತ್ಯಂತ ಆರಾಮದಾಯಕವಾಗಿ ಇದ್ದಾರೆ ಎಂದು ಬಿಜೆಪಿ ಆರೋಪಿಸುತ್ತಿದೆ. ಇತ್ತೀಚೆಗೆ ಸತ್ಯೇಂದ್ರ ಜೈನ್​​ಗೆ ಜೈಲಿನಲ್ಲಿ ಕೈದಿಯೊಬ್ಬ ಮಸಾಜ್​ ಮಾಡುತ್ತಿರುವ ವಿಡಿಯೊ, ಜೈನ್​ ಅವರು ಜೈಲಲ್ಲಿ ಕುಳಿತು ವೈವಿಧ್ಯಮಯ ತಿನಿಸುಗಳನ್ನು ಸವಿಯುತ್ತಿರುವ ವಿಡಿಯೊಗಳು ವೈರಲ್ ಆಗಿ ಈ ಆರೋಪಕ್ಕೆ ಪುಷ್ಟಿ ನೀಡಿದ್ದವು. ಹೀಗೆ ಮಸಾಜ್​ ಮಾಡಿಸಿಕೊಂಡ ವಿಡಿಯೊ ವೈರಲ್ ಆದ ಬೆನ್ನಲ್ಲೇ ಅಲ್ಲಿನ ಜೈಲು ಅಧೀಕ್ಷಕ ಅಮಾನತುಗೊಂಡಿದ್ದರು. ಈಗ ಸತ್ಯೇಂದ್ರ ಜೈನ್​ ಅವರು ಅದೇ ಜೈಲು ಅಧೀಕ್ಷಕನೊಟ್ಟಿಗೆ, ತಮ್ಮ ಸೆಲ್​​ನಲ್ಲಿಯೇ ಕುಳಿತು ಮಾತನಾಡಿದ ದೃಶ್ಯ ವೈರಲ್ ಆಗಿದೆ.

‘ಸತ್ಯೇಂದ್ರ ಜೈನ್​ ಅವರ ಸೆಲ್​​ನ್ನು ಇಬ್ಬರು ವ್ಯಕ್ತಿಗಳು ಮೊದಲು ಸ್ವಚ್ಛಗೊಳಿಸುತ್ತಾರೆ. ಅದರಲ್ಲಿ ಒಬ್ಬನ ಕುತ್ತಿಗೆಯಲ್ಲಿ ಅದೇನೋ ಐಡಿ ಕಾರ್ಡ್​ ಇದೆ. ಇಡೀ ಕೋಣೆಯನ್ನು ನೀರಿನಿಂದ ಒರೆಸುತ್ತಾರೆ. ಬಳಿಕ ಎರಡು ಚಾಪೆ ಹಾಸಿ, ಅಲ್ಲಿಂದ ಹೋಗುತ್ತಾರೆ. ಅದಾದ ನಂತರ ಮತ್ತೆ ಮೂವರು ಆ ಕೋಣೆಗೆ ಬರುತ್ತಾರೆ. ಅವರೊಂದಿಗೆ ಸತ್ಯೇಂದ್ರ ಜೈನ್​ ಮಾತುಕತೆ ನಡೆಸುತ್ತ ಕೂರುತ್ತಾರೆ. ಅಷ್ಟರಲ್ಲಿ ಈ ಅಮಾನತುಗೊಂಡ ಪೊಲೀಸ್​ ಅಧಿಕಾರಿ ಅಜಿತ್​ ಕುಮಾರ್​ ಬರುತ್ತಾರೆ. ಆಗ ಇವರೆಲ್ಲ ಎದ್ದು ಹೋಗುತ್ತಾರೆ. ಸತ್ಯೇಂದ್ರ ಜೈನ್ ಮತ್ತು ಅಜಿತ್​ ಕುಮಾರ್​​ ಮಾತುಕತೆ ಮುಂದುವರಿಯುತ್ತದೆ’ -ಇವಿಷ್ಟು ದೃಶ್ಯಗಳು ವಿಡಿಯೊದಲ್ಲಿ ನೋಡಲು ಸಿಗುತ್ತವೆ.

ಹೀಗೆ ಸತ್ಯೇಂದ್ರ ಜೈನ್​ ಜೈಲಲ್ಲಿ ಇದ್ದರೂ ಯಾವುದೇ ಸೌಕರ್ಯಗಳಿಂದ ವಂಚಿತರಾಗಿಲ್ಲ ಎಂಬುದನ್ನು ಸಾಕ್ಷೀಕರಿಸುವ ವಿಡಿಯೊಗಳು ವೈರಲ್ ಆಗುತ್ತಿರುವ ಬೆನ್ನಲ್ಲೇ ಬಿಜೆಪಿಯ ವಾಗ್ದಾಳಿಯೂ ಹೆಚ್ಚುತ್ತಿದೆ. ಅದರಲ್ಲೂ ಈಗ ಅಜಿತ್​ ಕುಮಾರ್​ ಅಮಾನತುಗೊಂಡ ಬಳಿಕವೂ ಬಂದು ಜೈನ್​ರನ್ನು ಭೇಟಿಯಾಗಿದ್ದು ಇನ್ನಷ್ಟು ಟೀಕೆಗೆ ಗುರಿಯಾಗಿದೆ. ಇನ್ನು ಒಂದೇ ಸಮನೆ ವ್ಯಂಗ್ಯ ಮಾಡುತ್ತಿರುವ ಬಿಜೆಪಿಗೆ ತಿರುಗೇಟು ನೀಡಿರುವ ಆಪ್​ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್​ ‘ಆಪ್​ನ ಅಭಿವೃದ್ಧಿ ಕೆಲಸಗಳನ್ನು ನೋಡಿ ಹೆದರಿರುವ ಬಿಜೆಪಿ ಇಂಥ ವಿಡಿಯೊಗಳನ್ನು ಇಟ್ಟುಕೊಂಡು ಹುರುಳಿಲ್ಲದ ಆರೋಪ ಮಾಡುತ್ತಿದೆ. ನಾವು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆ ಪಕ್ಷಕ್ಕೆ ತಕ್ಕ ಉತ್ತರ ಕೊಡುತ್ತೇವೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Satyendra Jain | ಜೈಲಲ್ಲಿ ಮಸಾಜ್‌ ಬೆನ್ನಲ್ಲೇ ವಜಾಗೊಂಡ ಜೈಲಧಿಕಾರಿ ಜತೆ ಸತ್ಯೇಂದ್ರ ಜೈನ್‌ ಮಾತು, ಹೊಸ ವಿಡಿಯೊ ವೈರಲ್

Exit mobile version