Site icon Vistara News

New year 2023 | ಹೊಸವರ್ಷದ ಪ್ರವಾಸಕ್ಕೆ ಪರ್ಫೆಕ್ಟ್‌ ಆಯ್ಕೆ ಈ ಮುದ್ದಾದ ತಾಣಗಳು!

goa

ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಹೊಸವರ್ಷ ಬಂದು ಬಿಟ್ಟಿದೆ. ಅರೆ, ಇಷ್ಟು ಬೇಗ ಒಂದು ವರ್ಷ ಕಳೆದೇ ಹೋಯಿತಲ್ಲ ಎಂಬ ದುಗುಡ ಒಂದೆಡೆಯಾದರೆ, ಈ ಹೊಸ ವರ್ಷವನ್ನಾದರೂ ಅಂದುಕೊಂಡ ಕೆಲಸಗಳನ್ನು, ಕನಸುಗಳನ್ನು ನನಸಾಗಿಸಬೇಕು ಎಂಬ ಯೋಚನೆ ಇನ್ನೊಂದೆಡೆ. ಹಾಗಾಗಿ ಹೊಸ ವರ್ಷವನ್ನು ಗೌಜಿ ಗದ್ದಲಗಳಿಂದ ದೂರ, ಪ್ರಕೃತಿಯ ಮಡಿಲಲ್ಲಿ ಪ್ರಶಾಂತವಾಗಿ ಆಚರಿಸಬೇಕೆಂಬ ಆಸೆ ಇದ್ದರೆ, ಒಂದಿಷ್ಟು ಹೊಸ ನೆನಪುಗಳ ಜೊತೆ ಹೊಸವರ್ಷಕ್ಕೊಂದು ಚಂದದ ಚಾಲನೆ ಕೊಡಬೇಕೆಂದಿದ್ದರೆ, ಈ ಎಲ್ಲ ಜಾಗಗಳಲ್ಲಿ ತಿರುಗಾಡಿ ಬರಲು ಪ್ಲಾನ್‌ ಮಾಡಬಹುದು!

೧. ಕೂನೂರ್:‌ ಜನಜಂಗುಳಿಯ ಊಟಿ ನೋಡಿ ನೋಡಿ ಬೋರಾಗಿದ್ದರೆ, ಕೊಂಚ ಈಚೆ ಬರಬಹುದು. ನಿಮ್ಮದೇ ಕಾರು ತೆಗೆದುಕೊಂಡು ಹೊಸವರ್ಷಕ್ಕೆ ಎಲ್ಲಾದರೂ ಹೋಗಿ ಬರಬೇಕು ಎಂಬ ಆಸೆಯಿದ್ದರೆ, ಮೈಸೂರು ರಸ್ತೆಯೆಡೆಗೆ ಕಾರು ತಿರುಗಿಸಿ ಸೀದಾ ಕೂನೂರಿನೆಡೆಗೆ ಸಾಗಬಹುದು. ಊಟಿಯದ್ದೇ ಸೊಬಗಾದರೂ ಒಂದಿಷ್ಟು ಕಡಿಮೆ ಮಂದಿಯಿರುವ ಪ್ರಶಾಂತ ನೀಲಗಿರಿ ಬೆಟ್ಟಗಳ ಹಸಿರಿನ ನಡುವೆ ಬೆಚ್ಚಗೆ ಮಲಗಿರುವ ಈ ತಣ್ಣನೆಯ ಊರೇ ನೋಡಲು ಚಂದ. ಹೊಸವರ್ಷಕ್ಕೆ ಇನ್ನೂ ಪಳಪಳನೆ ಹೊಳೆವ ಈ ಊರಿನ ಮೌನದ ದಾರಿಗಳಲ್ಲಿ ಮುಂಜಾವಿನಲ್ಲಿ ವಾಕಿಂಗ್‌ ಮಾಡಿ ಬಂದರೆ ಸಿಗುವುದು ಸ್ವರ್ಗ ಸುಖ!

೨. ಕಸೋಲ್: ಗೋವಾದ ಪಾರ್ಟಿಯ ಇಡೀ ಮೂಡನ್ನು ಹಿಮಾಲಯದ ಚಂದದ ಪರಿಸರದ ಹಿನ್ನೆಲೆಯಲ್ಲಿ ಜೋಡಿಸಿದರೆ ಹೇಗಿದ್ದೀತು ಆಲೋಚಿಸಿ. ಈ ಕಲ್ಪನೆಯೇ ರಮ್ಯವಾಗಿದೆ ಅನಿಸಿದರೆ, ನೀವು ಕಸೋಲ್‌ಗೆ ಹೋಗಬೇಕು. ಹಿಮಾಚಲ ಪ್ರದೇಶದ ಪಾರ್ವತೀ ಕಣಿವೆಯಲ್ಲಿರುವ ಕಸೋಲ್‌ ಎಂಬ ಪುಟ್ಟ ಪಟ್ಟಣ ಹಿಮಾಲಯದ ಹಳ್ಳಿಯೊಂದರ ಬೆರಗನ್ನೂ ಪಟ್ಟಣದ ಸೊಬಗನ್ನೂ ಪ್ರವಾಸಿಗರ ಗೌಜನ್ನೂ ಸಮಪ್ರಮಾಣದಲ್ಲಿ ಕಲಸಿಟ್ಟ ಪಾಕ. ಇಲ್ಲಿನ ಪಾರ್ವತೀ ನದೀ ತೀರದಲ್ಲಿ ನಡುಗುವ ಚಳಿಯಲ್ಲಿ ಟೆಂಟ್ನಲ್ಲಿ ಕೂತು ಪ್ರಕೃತಿಯ ಮಡಿಲ ಸುಖ ಅನುಭವಿಸಿದವರ ಅನುಭವ ಪದಗಳಿಗೆ ದಕ್ಕೀತೇ ಹೇಳಿ!

೩. ಉದಯಪುರ: ರಾಜಸ್ಥಾನದ ಉದಯಪುರ ಸೇರಿದಂತೆ ಎಲ್ಲ ನಗರಗಳೂ ಚಳಿಗಾಲದಲ್ಲಿ ನೋಡಬಹುದಾದ ಭಾರತದ ಬೆಸ್ಟ್‌ ತಾಣಗಳು. ಬೇಸಿಗೆಯ್ಲಿ ನಿಗಿನಿಗಿ ಕೆಂಡದಂತಿರುವ ಈ ಜಾಗಗಳು ಚಳಿಗಾಲದಲ್ಲಿ ತಂಪು ತಂಪು. ಉದಯಪುರ ಎಂಬ ಅರಮನೆಗಳ ನಗರಿಯ ಕೋಟೆ ಕೊತ್ತಲಗಳನ್ನು ಚಂದದ ವಿದ್ಯುದ್ದೀಪಗಳ ಅಲಂಕಾರದಲ್ಲಿ ನೋಡುವುದು ಕಣ್ಣಿಗೆ ಇನ್ನೂ ಹಿತ. ಹಾಗಾಗಿ ಹೊಸವರ್ಷ ಇದಕ್ಕೆ ಪರ್ಫೆಕ್ಟ್‌ ಟೈಮ್.‌

೪. ಮೆಕ್ಲೋದ್ಗಂಜ್‌/ಧರ್ಮಶಾಲಾ: ಹಿತವಾದ ಚಳಿಯಲ್ಲಿ ಗಡಗಡ ನಡುಗುತ್ತ ಬುದ್ಧಂ ಶರಣಂ ಗಚ್ಛಾಮಿ ಎಂದು ಶಾಂತಿಯ ಗಂಟೆಯ ಸದ್ದಿಗೆ ಹೊಸವರ್ಷವನ್ನು ಆಚರಿಸಬೇಕೆಂದಿದ್ದರೆ, ಹಿಮಾಚಲ ಪ್ರದೇಶದ ಮೆಕ್ಲೋದ್‌ಗಂಜ್‌/ ಧರ್ಮಶಾಲಾಕ್ಕೆ ಹೋಗಬೇಕು. ಇಲ್ಲಿನ ಬೌದ್ಧ ದೇಗುಲಗಳಲ್ಲಿ, ಸರೋವರದ ತೀರದಲ್ಲಿ, ಬೆಟ್ಟ ಕಣಿವೆಗಳಲ್ಲಿ ಅಲೆದಾಡಲು ಹೊಸವರ್ಷಕ್ಕಿಂತ ಸುಸಮಯ ಇನ್ನೊಂದೆಲ್ಲಿದೆ!

೫. ಅಂಡಮಾನ್:‌ ನೀಲಿಹಸಿರ ಸಮುದ್ರ, ಬಿಳಿಯಾದ ಮರಳದಂಡೆಗಳು, ಸ್ವಚ್ಛ ನೀಲಿ ಆಕಾಶ… ಮನಸ್ಸು ಹಕ್ಕಿಯಾಗಲು ಇನ್ನೇನು ಬೇಕು. ಅಂಡಮಾನ್‌ ಅಂಥಾ ಜಾಗ! ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ದ್ವೀಪವಿದು. ಐಷಾರಾಮಿ ರೆಸಾರ್ಟುಗಳಿಂದ ಹಿಡಿದು ಎಲ್ಲ ಬಗೆಯ ಸಾಹಸೀ ಕ್ರೀಡೆಗಳ ರುಚಿ ನೋಡಲು ಇದು ಬೆಸ್ಟ್‌ ಜಾಗ. ಎಷ್ಟೇ ಝಗಮಗಿಸುವ ಪಾರ್ಟಿ ಸಂಭ್ರಮವಿದ್ದರೂ, ಸದಾ ಶಾಂತಿಯಿಂದಲೇ ಇರುವ ಮುದ್ದಾದ ದ್ವೀಪವೂ ಹೌದು. ಹಾಗಾಗಿ ಅಂಡಮಾನ್‌ ಕೂಡಾ ಹೊಸವರ್ಷದ ಸಂಭ್ರಮಕ್ಕೆ ತಕ್ಕ ಜಾಗ.

ಅಯ್ಯೋ, ಸರಿಯಾಗಿ ಪ್ಲಾನ್‌ ಮಾಡಿಯೇ ಇಲ್ಲ, ಮೊದಲೇ ಮಾಡಬೇಕಿತ್ತು ಅಂತನಿಸುತ್ತಿದೆಯೇ? ಇನ್ನೂ ಕಾಲ ಮಿಂಚಿಲ್ಲ. ಧೈರ್ಯ ಮಾಡಿ, ದಿಢೀರ್‌ ಬ್ಯಾಕ್‌ಪ್ಯಾಕ್‌ ರೆಡಿಮಾಡಿ, ಹೊರಟುಬಿಡಿ. ಅಂದುಕೊಳ್ಳದೆ ಮಾಡುವ ಪ್ರಯಾಣಗಳೇ ನಿಜವಾದ ಸಂತೋಷಗಳನ್ನು ತರುತ್ತದೆ ನೆನಪಿಡಿ. ಯಾರಿಗ್ಗೊತ್ತು, ಜೀವನದಲ್ಲಿ ಮರೆಯಲಾಗದ ಹೊಸವರ್ಷವೊಂದು ನಿಮಗಾಗಿ ಕಾದು ಕುಳಿತಿರಬಹುದು!

Exit mobile version