Site icon Vistara News

New Year 2024: ಭಾರತ ಬಡರಾಷ್ಟ್ರ ಅಂದೋರ‍್ಯಾರು? ಹೋಟೆಲ್‌ನಲ್ಲಿ ಒಂದು ರಾತ್ರಿಗೆ 7 ಲಕ್ಷ ರೂ. ಕೊಡಲೂ ರೆಡಿ!

New Year Hotel

New Year 2024: Hotel Rates Soar To New Heights; Rs 7 Lakh Per Night

ನವದೆಹಲಿ: ಸಡಗರ-ಸಂಭ್ರಮದಿಂದ ಹೊಸ ವರ್ಷವನ್ನು (New Year 2024) ಸ್ವಾಗತಿಸಲು ದೇಶದ ಜನ ಸಿದ್ಧರಾಗಿದ್ದಾರೆ. ಡಿಸೆಂಬರ್‌ 31ರ ಮಧ್ಯರಾತ್ರಿ ಕೇಕ್‌ ಕತ್ತರಿಸಿ, ಪಾರ್ಟಿ ಮಾಡಿ, ಹಾಡು, ನೃತ್ಯದ ಮೂಲಕ ಹೊಸ ವರ್ಷಕ್ಕೆ ಕಾಲಿಡಲು ಸಕಲ ಸಿದ್ಧತೆ ನಡೆಯುತ್ತಿವೆ. ಇದರ ಬೆನ್ನಲ್ಲೇ, ದೇಶದ ಬಹುತೇಕ ಪ್ರವಾಸಿ ತಾಣಗಳಲ್ಲಿ ಜನರೇ ತುಂಬಿ ತುಳುಕುತ್ತಿದ್ದು, ಹೋಟೆಲ್‌, ಲಾಡ್ಜ್‌ಗಳ ಬೆಲೆ (Hotel Price) ಗಗನಕ್ಕೇರಿದೆ. ಕೆಲವೊಂದು ಹೋಟೆಲ್‌ಗಳಲ್ಲಿ ಒಂದು ರಾತ್ರಿಗೆ 7 ಲಕ್ಷ ರೂ. ನಿಗದಿಪಡಿಸಿದರೂ ರೂಮ್‌ ಸಿಗುತ್ತಿಲ್ಲ ಎಂದು ತಿಳಿದುಬಂದಿದೆ. ಅಷ್ಟರಮಟ್ಟಿಗೆ ಡಿಸೆಂಬರ್‌ 31ರ ರಾತ್ರಿಗೆ ಬೆಲೆ ಬಂದಿದೆ.

ದೆಹಲಿ, ಜೈಪುರ, ಉದಯಪುರ ಸೇರಿ ದೇಶದ ಪ್ರಮುಖ ನಗರಗಳಲ್ಲಿರುವ ಲೀಲಾ ಪ್ಯಾಲೇಸ್‌ ಹೋಟೆಲ್ಸ್‌ ಹಾಗೂ ರೆಸಾರ್ಟ್ಸ್‌ಗಳಲ್ಲಂತೂ ಒಂದು ರಾತ್ರಿಗೆ ಲಕ್ಷಾಂತರ ರೂ. ನಿಗದಿಪಡಿಸಲಾಗಿದೆ. ಪ್ರಮುಖ ಪ್ರವಾಸಿ ತಾಣವಾದ ಉದಯಪುರದಲ್ಲಿ ಲೀಲಾ ಪ್ಯಾಲೇಸ್‌ ಹೋಟೆಲ್‌ನಲ್ಲಿ ಡಿಸೆಂಬರ್‌ 31ರಂದು ತಂಗಲು 1.06 ಲಕ್ಷ ರೂ. ನಿಗದಿಪಡಿಸಲಾಗಿದೆ. ಆದರೂ, ಹೋಟೆಲ್‌ನ ಎಲ್ಲ ರೂಮ್‌ಗಳು ಈಗಾಗಲೇ ಬುಕ್‌ ಆಗಿವೆ ಎಂದು ಕಂಪನಿಯ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ.

ಉದಯಪುರದಲ್ಲಿರುವ ಲೀಲಾ ಪ್ಯಾಲೇಸ್‌ ಹೋಟೆಲ್‌.

ಒಂದು ರಾತ್ರಿಗೆ 7 ಲಕ್ಷ ರೂ.

ಡಿಸೆಂಬರ್‌ 31ರ ಒಂದು ರಾತ್ರಿ ತಂಗಲು ರಾಜಸ್ಥಾನದ ಹೋಟೆಲ್‌ 7 ಲಕ್ಷ ರೂ. ನಿಗದಿಪಡಿಸಿದೆ. ರಾಜಸ್ಥಾನದಲ್ಲಿರುವ ಸಿಕ್ಸ್‌ ಸೆನ್ಸಸ್‌ ಫೋರ್ಟ್‌ ಬಾರ್ವರ ಹೋಟೆಲ್‌ನಲ್ಲಿರುವ ಮಹಾರಾಜ ರೂಮ್‌ಗಳಿಗೆ (ಮಹಾರಾಜ ಸೂಟ್)‌ ಏಳು ಲಕ್ಷ ರೂ. ನಿಗದಿಪಡಿಸಿದೆ. ಆದರೂ ಎಲ್ಲ ರೂಮ್‌ಗಳನ್ನು ಬುಕ್‌ ಮಾಡಲಾಗಿದೆ. ಗೋವಾದಲ್ಲಿರುವ ಡಬಲ್‌ ಟ್ರೀ, ಗೋವಾ ರೆಸಾರ್ಟ್‌ ಕಾಂಡೋಲಿಮ್‌ ಸೇರಿ ಹಲವು ಐಷಾರಾಮಿ ಹೋಟೆಲ್‌ಗಳಲ್ಲೂ ಒಂದು ರಾತ್ರಿ ಕಳೆಯಲು ಲಕ್ಷಾಂತರ ರೂ. ಪಾವತಿಸಲಾಗುತ್ತಿದೆ. ದೇಶ-ವಿದೇಶಗಳ ಪ್ರವಾಸಿಗರು ಲಕ್ಷಾಂತರ ರೂ. ಪಾವತಿಸಿ ಹೋಟೆಲ್‌ನಲ್ಲಿ ಪಾರ್ಟಿ ಮಾಡಲು ಸಿದ್ಧರಾಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: New Year 2024: ಹೊಸ ವರ್ಷದಲ್ಲಿ ಭಾರತ-ಚೀನಾ ಯುದ್ಧ; ನಾಸ್ಟ್ರಾಡಾಮಸ್‌ ಭವಿಷ್ಯ ಏನು?

ಉತ್ತರ ಪ್ರದೇಶದ ಆಗ್ರಾ, ಗೋವಾ, ಅಂಡೋಮಾನ್‌ ನಿಕೋಬಾರ್‌ ದ್ವೀಪಗಳಲ್ಲಿ ಪ್ರವಾಸಿಗರು ತುಂಬಿ ತುಳುಕುತ್ತಿದ್ದಾರೆ. ವೀಕೆಂಡ್‌ ಕೂಡ ಇರುವುದರಿಂದ ಕೋಟ್ಯಂತರ ಜನ ಪ್ರವಾಸಕ್ಕೆ ತೆರಳಿದ್ದಾರೆ. ಇದರಿಂದಾಗಿ ಹೋಟೆಲ್‌, ಲಾಡ್ಜ್‌ಗಳಲ್ಲಿ ಒಂದು ರಾತ್ರಿಗೆ ಲಕ್ಷಾಂತರ ರೂ. ಪಾವತಿಸುವಂತಾಗಿದೆ. ಆದರೂ, ಜನ ದುಡ್ಡಿನ ಮುಖ ನೋಡದೆ ಐಷಾರಾಮಿ ಹೋಟೆಲ್‌ಗಳಲ್ಲಿ ಪಾರ್ಟಿ ಮಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಹೊಸ ವರ್ಷವು ಸಂಭ್ರಮಾಚರಣೆಯ ಜತೆಗೆ ಪ್ರವಾಸೋದ್ಯಮ, ಹೋಟೆಲ್‌ ಉದ್ಯಮದ ಬೆಳವಣಿಗೆಗೂ ಕಾರಣವಾಗುಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version