Site icon Vistara News

New Year 2023 | ಗಣ್ಯರಿಂದ ದೇಶದ ಜನರಿಗೆ ಹೊಸ ವರ್ಷದ ಶುಭಾಶಯ; ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ, ರಾಹುಲ್​ ಗಾಂಧಿ ಟ್ವೀಟ್​

New Year Wishes From PM Modi and President Murmu

ನವ ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್​ ಧನಕರ್​, ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸೇರಿ ಹಲವು ಪ್ರಮುಖರು ಇಂದು ದೇಶದ ಜನರಿಗೆ ಹೊಸವರ್ಷದ ಶುಭಾಶಯ ಕೋರಿದ್ದಾರೆ. ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ‘ನಿಮ್ಮೆಲ್ಲರ ಪಾಲಿಗೆ 2023 ಅದ್ಭುತವಾಗಿರಲಿ. ಭರವಸೆ, ಸಂತೋಷ ಮತ್ತು ಯಶಸ್ಸು ನಿಮ್ಮದಾಗಲಿ. ಪ್ರತಿಯೊಬ್ಬರೂ ಅತ್ಯುತ್ತಮ ಆರೋಗ್ಯ ಹೊಂದಲಿ’ ಎಂದು ಹಾರೈಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಟ್ವೀಟ್ ಮಾಡಿ ‘ದೇಶದ ಎಲ್ಲ ನಾಗರಿಕರಿಗೆ ಮತ್ತು ವಿದೇಶದಲ್ಲಿರುವ ಎಲ್ಲ ಭಾರತೀಯರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. 2023ನೇ ವರ್ಷ ಎಲ್ಲರ ಬಾಳಲ್ಲಿ ಹೊಸ ಸ್ಫೂರ್ತಿ ತುಂಬಲಿ. ಗುರಿ ಕಟ್ಟಿಕೊಡಲಿ ಮತ್ತು ಯಶಸ್ಸು ತಂದುಕೊಡಲಿ. ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಅಂತರ್ಗತ ಅಭಿವೃದ್ಧಿಗೆ ನಾವೆಲ್ಲರೂ ನಮ್ಮನ್ನು ನಾವು ಅರ್ಪಿಸಿಕೊಳ್ಳುವ ಸಂಕಲ್ಪ ಮಾಡೋಣ’ ಎಂದು ಹೇಳಿದ್ದಾರೆ.

ಉಪರಾಷ್ಟ್ರಪತಿ ಜಗದೀಪ್​ ಧನಕರ್​ ಅವರು ಟ್ವೀಟ್ ಮಾಡಿ ‘ಎಲ್ಲರಿಗೂ 2023ರ ನೂತನ ವರ್ಷದ ಶುಭ ಹಾರೈಕೆಗಳು ಮತ್ತು ಅಭಿನಂದನೆಗಳು. ಭಾರತವನ್ನು ಅಭಿವೃದ್ಧಿ ಮತ್ತು ಸಮೃದ್ಧಿಯ ಉತ್ತುಂಗಕ್ಕೆ ಕೊಂಡೊಯ್ಯೋಣ ಎಂಬ ಹೊಸ ಸಂಕಲ್ಪವನ್ನು ನಾವೆಲ್ಲರೂ ಮಾಡೋಣ. ಶಾಂತಿ, ಆರೋಗ್ಯ, ಸಾಮರಸ್ಯ ಸ್ಥಾಪಿಸಲು ನಾವೆಲ್ಲರೂ ಒಟ್ಟಾಗಿ ಪ್ರಯತ್ನಿಸೋಣ ಎಂದಿದ್ದಾರೆ.

ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತಮ್ಮ ಭಾರತ್ ಜೋಡೋ ಯಾತ್ರೆಯ ಫೋಟೋಗಳನ್ನು ಕೊಲ್ಯಾಜ್​ ಮಾಡಿ, ರಚಿಸಲಾದ ವಿಡಿಯೊವೊಂದನ್ನು ಶೇರ್​ ಮಾಡಿಕೊಂಡು ‘2023ರಲ್ಲಿ ದೇಶದ ಪ್ರತಿ ದಾರಿಗಳು, ಗ್ರಾಮಗಳು, ನಗರಗಳೆಲ್ಲವೂ ಪ್ರೀತಿಯ ಮಳಿಗೆಗಳಾಗಿ ಪರಿವರ್ತನೆಗೊಳ್ಳಲಿ’ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಹಾಗೇ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದು ಹೇಳಿದ್ದಾರೆ.

ಇನ್ನು ಕೇಂದ್ರ ಸಚಿವರಾದ ರಾಜನಾಥ್​ ಸಿಂಗ್​, ಅಮಿತ್​ ಶಾ, ನಿತಿನ್​ ಗಡ್ಕರಿ, ಹರ್ದೀಪ್​ ಸಿಂಗ್​ ಪುರಿ, ಮನ್ಸುಖ್ ಮಾಂಡವಿಯಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ಉತ್ತರಾಖಂಡ್​ ಸಿಎಂ ಪುಷ್ಕರ್ ಸಿಂಗ್​ ಧಮಿ ಸೇರಿ ಹಲವು ಪ್ರಮುಖ ರಾಜಕಾರಣಿಗಳು, ವಿವಿಧ ಕ್ಷೇತ್ರಗಳ ಗಣ್ಯರು ದೇಶದ ಜನರಿಗೆ ಹೊಸವರ್ಷದ ಶುಭಾಶಯ ಕೋರುತ್ತಿದ್ದಾರೆ.

ಇದನ್ನೂ ಓದಿ: New Year 2023 | ಇಂದು ಅಯೋಧ್ಯೆಗೆ 50 ಲಕ್ಷ ಮಂದಿ ಭೇಟಿ ಸಾಧ್ಯತೆ! ಭದ್ರತೆ ಹೇಗಿದೆ?

Exit mobile version