ಮುಂಬಯಿ: ಅದು ಐದು ವರ್ಷ ಉಳಿಯಬೇಕಾದ ಸರಕಾರ ಆಗಿರಲೇ ಇಲ್ಲ. ಇವತ್ತಲ್ಲ ನಾಳೆ, ಒಂದಲ್ಲ ಒಂದು ಕಾರಣಕ್ಕೆ ಅದು ಉರುಳಿ ಹೋಗಲೇಬೇಕಿತ್ತು. ಆದರೆ, ಅದನ್ನು ಜನನಿಬಿಡ ಪ್ರದೇಶದಲ್ಲಿರುವ ದೊಡ್ಡ ಕಟ್ಟಡವೊಂದನ್ನು ಅತ್ಯಂತ ಜತನದಿಂದ ಉರುಳಿಸುತ್ತಾರಲ್ಲ. ಆ ರೀತಿ ಯಾರಿಗೂ ಗೊತ್ತಾಗದಂತೆ ನೆಲಸಮ ಮಾಡಲು ಹಲವು ಅವಕಾಶಗಳಿದ್ದವು. ಆದರೆ, ಇಲ್ಲಿ ಬುಲ್ಡೋಜರ್ ತಂದು ಗುದ್ದಿಸಿ ಪುಡಿ ಮಾಡಲಾಗಿದೆ. ಕೆಲವರಿಗೆ ಗಾಯಗಳೂ ಆಗಿವೆ!
ರಾಜಕಾರಣದಲ್ಲಿ ಕೆಲವೊಮ್ಮೆ ಅಧಿಕಾರಕ್ಕಾಗಿ ಅಸಹಜ, ಅಸ್ವಾಭಾವಿಕ ಮೈತ್ರಿಗಳು ಅತ್ಯಂತ ಸಹಜ. ಆದರೆ, ಈಗೀಗ ಜೀವನಪೂರ್ತಿ ಜತೆಯಾಗಿ ಬಾಳುತ್ತೇವೆ ಎಂದು ಪ್ರತಿಜ್ಞೆ ಮಾಡಿ ಮದುವೆಯಾದ ಸಂಬಂಧಗಳೇ ಉಳಿಯುವುದಿಲ್ಲ. ಹಾಗಿರುವಾಗ ಅವಸರಕ್ಕೆ ಸೃಷ್ಟಿಯಾದ ರಾಜಕೀಯ ಸಂಬಂಧಗಳಿಗೆ ದೀರ್ಘ ಕಾಲ ಜೋತು ಬೀಳುವ ಅನಿವಾರ್ಯತೆ ಇರುವುದಿಲ್ಲ. ಹಾಗೆ ಜೋತು ಬೀಳುವುದು ಕೂಡಾ ಅಪಾಯಕಾರಿಯೆ.
ಮಹಾರಾಷ್ಟ್ರದಲ್ಲಿ ಆಗಿದ್ದು ಅದೇ
2019ರ ಅಕ್ಟೋಬರ್ 21ರಂದು ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಾಗ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ ಮತ್ತು ಶಿವಸೇನೆ ನಿಚ್ಚಳ ಬಹುಮತವನ್ನೇ ಪಡೆದಿತ್ತು. 152 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ 106 ಸ್ಥಾನಗಳಲ್ಲಿ ಗೆದ್ದಿದ್ದರೆ, 121 ಸ್ಥಾನಗಳಲ್ಲಿ ಕಣಕ್ಕಿಳಿದಿದ್ದ ಶಿವಸೇನೆ 56 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಅತ್ಯಂತ ಸಹಜವಾಗಿ ಬಿಜೆಪಿ ಮುಂದಾಳುತ್ವದಲ್ಲಿ ಸರಕಾರ ರಚನೆಗೆ ಬೇಕಾದ ಶಕ್ತಿ (ಮ್ಯಾಜಿಕ್ ನಂ. 145) ಜಮೆಯಾಗಿತ್ತು. ಆದರೆ, ಅಧಿಕಾರ ಹಂಚಿಕೆಯ ವಿಚಾರದಲ್ಲಿ ಹುಟ್ಟಿದ ಜಗಳದಿಂದಾಗಿ ಸರಕಾರವೇ ರಚನೆಯಾಗದೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಒಂದು ತಿಂಗಳ ರಾಷ್ಟ್ರಪತಿ ಆಡಳಿತದ ಬಳಿಕವೂ ಬಿಕ್ಕಟ್ಟು ಬಗೆಹರಿಯದೆ ಇದ್ದಾಗ ಅದಕ್ಕೊಂದು ಜರ್ಕ್ ಕೊಟ್ಟಿದ್ದು ದೇವೇಂದ್ರ ಫಡ್ನವಿಸ್. ಮಾಜಿ ಮುಖ್ಯಮಂತ್ರಿ ಫಡ್ನವಿಸ್ ಅವರು ಎನ್‌ಸಿಪಿಯನ್ನು ಒಡೆದು ಅಜಿತ್ ಪವಾರ್ ಅವರ ಟೀಮ್‌ನ ಬೆಂಬಲ ಪಡೆದು ನವೆಂಬರ್ 23ರಂದು ರಾತ್ರೋರಾತ್ರಿ ಸರಕಾರವನ್ನು ರಚಿಸಿದರು. ರಾಜ್ಯಪಾಲರ ಸಹಾಯ ಹಸ್ತ, ಕೇಂದ್ರ ಸರಕಾರದ ಕೃಪಾಕಟಾಕ್ಷದ ನೆರವಿನಿಂದ ಮಹಾರಾಷ್ಟ್ರದಲ್ಲಿ ಸರಕಾರ ರಚನೆಯಾಯಿತು. ಅಲ್ಲಿಯವರೆಗೆ ನಿದ್ದೆಯಲ್ಲಿದ್ದ ಎನ್‌ಸಿಪಿ ಬೆಚ್ಚಿ ಬಿದ್ದಿತು. ಬಂಧುವೇ ಆಗಿರುವ ಅಜಿತ್ ಪವಾರ್ ಮೋಸ ಮಾಡಿದರು ಎಂದು ಶರದ್ ಪವಾರ್ ಅಲವತ್ತುಕೊಂಡರು. ನಿಜವೆಂದರೆ, ಅಜಿತ್ ಮೋಸ ಮಾಡಿದ್ದು ತಮಗಲ್ಲ ಬಿಜೆಪಿಗೆ ಎಂದು ಗೊತ್ತಾಗಿದ್ದು ನವೆಂಬರ್ 26ರಂದು! ಸರಕಾರ ರಚನೆಗೆ ಬೆಂಬಲ ನೀಡುವುದಾಗಿ ಬಿಜೆಪಿಗೆ ಎಂದು ಯೊಂದಿಗೆ ಸೇರಿಕೊಂಡ ಅಜಿತ್ ಪವಾರ್ ಉಪಮುಖ್ಯಮಂತ್ರಿಯೇ ಆದರು. ತನ್ನ ಮೇಲಿದ್ದ 20,000 ಕೋಟಿ ರೂ.ಗಳ ಹಗರಣದಲ್ಲಿ ರಾತ್ರೋ ರಾತ್ರಿ ಕ್ಲೀನ್ ಚಿಟ್ ಪಡೆದು ಪರಿಶುದ್ಧರಾದರು. ಮೂರೇ ದಿನದ ಅಂತರದಲ್ಲಿ ನಡೆದ ವಿಶ್ವಾಸ ಮತ ಯಾಚನೆಯಲ್ಲಿ ದೇವೇಂದ್ರ ಫಡ್ನವಿಸ್‌ಗೆ ಕೈ ಕೊಟ್ಟು ಮರಳಿ ಎನ್‌ಸಿಪಿ ಸೇರಿಕೊಂಡರು. ಫಡ್ನವಿಸ್ ಸರಕಾರ ಉರುಳಿತು.
1984ರಲ್ಲಿ ಜತೆಯಾದ ಬಳಿಕ ಬಿಜೆಪಿ- ಶಿವಸೇನೆ ಹಲವು ಬಾರಿ ಜತೆಗೂಡಿ ಸರಕಾರ ರಚಿಸಿದರೂ ಬಿಜೆಪಿ ಹಿರಿಯಣ್ಣನಾಗಿ ಅಧಿಕಾರ ನಡೆಸಿದ್ದು 2014ರಲ್ಲಿ. ಅದಾದ ಬಳಿಕ ಶಿವಸೇನೆಗೆ ಬಿಜೆಪಿಯ ಮುಂದೆ ತಾನು ಮಂಕಾಗಬಹುದೆಂಬ ಆತಂಕ ಸೃಷ್ಟಿಯಾಗಲು ಶುರುವಾಗಿತ್ತು. ಅದೇ ಕಾರಣಕ್ಕೆ 2019ರ ಚುನಾವಣೆಯಲ್ಲಿ ಗೆದ್ದರೂ ಅಧಿಕಾರ ಹಂಚಿಕೆಯೇ ಕಗ್ಗಂಟಾಯಿತು.
ಹುಟ್ಟಿಕೊಂಡಿತು ಹೊಸ ಮೈತ್ರಿ!
ತನ್ನನ್ನು ಕಡೆಗಣಿಸುತ್ತಿರುವ ಬಿಜೆಪಿಗೆ ಪಾಠ ಕಲಿಸಲೇಬೇಕೆಂಬ ಹಠದಲ್ಲಿ ಶಿವಸೇನೆ ಯಾರೂ ನಂಬಲು ಸಾಧ್ಯವೇ ಇಲ್ಲದ ಮೈತ್ರಿಯೊಂದಕ್ಕೆ ಮುಂದಾಯಿತು. ತಾನು ಬದುಕಿನುದ್ದಕ್ಕೂ ಪ್ರತಿ ಹೆಜ್ಜೆಯಲ್ಲೂ ವಿರೋಧಿಸಿಕೊಂಡು ಬಂದಿದ್ದ, ಸಾಕಷ್ಟು ದಬ್ಬಾಳಿಕೆ, ದೌರ್ಜನ್ಯಗಳಿಗೆ ಕಾರಣವೂ ಆಗಿದ್ದ ಕಾಂಗ್ರೆಸ್ ಮತ್ತು ಎನ್‌ಸಿಪಿ ಜತೆಗೆ ಮೈತ್ರಿ ಮಾಡಿಕೊಳ್ಳುವ ಅಚ್ಚರಿಯ ಹೆಜ್ಜೆ ಇಟ್ಟಿತು. ನಿಜವೆಂದರೆ, ಇಂಥಹುದೊಂದು ಪ್ರಸ್ತಾಪವನ್ನು ತಂದಿಟ್ಟಿದ್ದು ಶರದ್ ಪವಾರ್. ಇಂಥಹುದೊಂದು ಮೈತ್ರಿ ಸಾಧ್ಯವೆಂದು ಕಾಂಗ್ರೆಸ್‌ನ್ನು ಮನವೊಲಿಸಿ ಶಿವಸೇನೆಯ ಮುಂದೆ ಉಡುಗೊರೆಯ ತಟ್ಟೆ ಇಟ್ಟರು. ಹಲವು ವರ್ಷಗಳಿಂದ ಅಧಿಕಾರವಿಲ್ಲದೆ ಕಂಗಾಲಾಗಿದ್ದ ಕಾಂಗ್ರೆಸ್ ಮತ್ತು ಎನ್‌ಸಿಪಿಗೂ ಇಂಥಹುದೊಂದು ಅವಕಾಶ ಬೇಕಿತ್ತು. ಶಿವಸೇನೆ ಒಪ್ಪಿದ್ದು ಅದಕ್ಕೆ ಖುಷಿಯಾಯಿತು. ರಾಜಕಾರಣದಲ್ಲಿ ಹೀಗೂ ಆಗಬಹುದೇ ಎಂಬ ಸೋಜಿಗ ದೇಶಕ್ಕೂ ಆಯಿತು. ನಿಜವೆಂದರೆ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಶಿವಸೇನೆಯು ಬಿಜೆಪಿಗಿಂತಲೂ ಚೆನ್ನಾಗಿ ಎನ್‌ಸಿಪಿ ಮತ್ತು ಕಾಂಗ್ರೆಸ್ ಜತೆಗೇ ಬೆರೆತುಕೊಂಡಿತು! ಈ ಮೈತ್ರಿ ಹೇಗಿತ್ತೆಂದರೆ ಮುಂದಿನ ಚುನಾವಣೆಗಳಲ್ಲಿ ಈ ಮೂರೂ ಪಕ್ಷಗಳು ಜತೆಗೂಡಿಯೇ ಸ್ಪರ್ಧೆ ಮಾಡಿಬಿಡಬಹುದೇ ಎಂಬಷ್ಟು ಆತ್ಮೀಯತೆ ಬೆಳೆದಿತ್ತು.
ಆದರೆ ತಳಮಟ್ಟದಲ್ಲಿ ಹಾಗಿರಲಿಲ್ಲ!
ಮೈತ್ರಿ ಸರಕಾರ ಎನ್ನುವುದು ರಾಜಕಾರಣಿಗಳು ತಮ್ಮ ಅಧಿಕಾರಕ್ಕಾಗಿ ಮಾಡಿಕೊಳ್ಳುವ ತಾತ್ಕಾಲಿಕ ವ್ಯವಸ್ಥೆ. ಆದರೆ, ತಳಮಟ್ಟದಲ್ಲಿ ಈ ಬಂಧ ಬೆಸೆಯುವುದು ಅಷ್ಟು ಸುಲಭವಲ್ಲ. ಈ ನಡುವೆ, ಕೆಲವೊಂದು ಸ್ಥಳೀಯ ಚುನಾವಣೆಗಳನ್ನು ಕಾಂಗ್ರೆಸ್-ಎನ್‌ಸಿಪಿ- ಶಿವಸೇನೆ ಜತೆಗೂಡಿ ಎದುರಿಸಿದವರಾದರೂ ಹೀಗೇ ಅದರೆ ಮುಂದೊಂದು ದಿನ ಶಿವಸೇನೆಯ ಅಸ್ತಿತ್ವವೇ ನಾಶವಾಗಬಹುದು ಎಂಬ ಆತಂಕ ಕಾರ್ಯಕರ್ತರಲ್ಲಿ ಹುಟ್ಟಿಕೊಂಡಿತ್ತು. ಅದನ್ನು ಚೆನ್ನಾಗಿ ಗ್ರಹಿಸಿದ್ದು ಉದ್ಧವ್ ಠಾಕ್ರೆ ಅಲ್ಲ, ಏಕನಾಥ್ ಶಿಂಧೆ!
ಶಿವಸೇನೆ ತನ್ನ ಸಹಜ, ಸ್ವಾಭಾವಿಕ ಸ್ನೇಹಿತ, ಬಾಳ್ ಠಾಕ್ರೆ ಅವರ ಹಿಂದುತ್ವ ಸಿದ್ಧಾಂತಕ್ಕೆ ಬದ್ಧವಾದ ಬಿಜೆಪಿಯನ್ನು ಬಿಟ್ಟು ಕಡುವೈರಿಗಳಾದ ಕಾಂಗ್ರೆಸ್ ಮತ್ತು ಎನ್‌ಸಿಪಿ ಜತೆ ಅನೈತಿಕ ಮೈತ್ರಿ ಮಾಡಿಕೊಂಡ ಅಧಿಕಾರ ರಾಜಕಾರಣ ಆಂತರಿಕವಾಗಿ ಶಿವಸೈನಿಕರನ್ನು ಘಾಸಿಗೊಳಿಸಿತ್ತು. ಹೀಗಾಗಿ ಶಿವಸೇನೆ ಈ ಮೈತ್ರಿಯನ್ನು ಆದಷ್ಟು ಬೇಗ ಕಡಿದುಕೊಳ್ಳಬೇಕು ಎನ್ನುವ ಒತ್ತಡ ಒಳಗೊಳಗೆ ಹೆಚ್ಚಿತ್ತು. ಆದರೆ, ಮುಖ್ಯಮಂತ್ರಿ ಗಾದಿಯಲ್ಲಿ ಕುಳಿತ ಬಾಳ್ ಠಾಕ್ರೆ ಅವರಿಗೆ ಇದ್ಯಾವುದೂ ಕೇಳಿಸಲೇ ಇಲ್ಲ. ಜೀವನದಲ್ಲಿ ಮೊದಲ ಬಾರಿ ಸಿಕ್ಕಿದ ಅಧಿಕಾರದ ರುಚಿಯೋ, ಅಧಿಕಾರದಲ್ಲಿ ಕಳೆದುಹೋದ ಪರಿಯೋ ಅಂತೂ ಶಾಸಕರ ಒಳ ಕುದಿಯೂ ಅವರಿಗೆ ಅರ್ಥವಾಗಲಿಲ್ಲ. ಆದರೆ, ಬಾಳ್ ಠಾಕ್ರೆ ಕಾಲದಿಂದಲೂ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಜನದನಿಗೆ ಕಿವಿಗೊಟ್ಟಿದ್ದ ಶಿಂಧೆಗೆ ನೆಲದ ನಾಡಿಯ ಅರಿವಿತ್ತು. ಹಾಗಾಗಿಯೇ ಅವರು ಶಿವಸೇನೆಯ ಮೂಲವಾದ ಹಿಂದುತ್ವದ ಅಸ್ಮಿತೆಯನ್ನು ಆಧಾರವಾಗಿಟ್ಟು ಒಳಗೊಳಗೆ ಬಲೆ ನೇಯ್ದರು!
ಈ ಕೆಲಸ ಉದ್ಧವ್ ಠಾಕ್ರೆಯೇ ಮಾಡಬೇಕಿತ್ತು!
ನಿಜವೆಂದರೆ ರಾಜಕಾರಣದಲ್ಲಿ ಅಸ್ವಾಭಾವಿಕವಾದ ಮೈತ್ರಿಗಳು, ರಾಜಕೀಯ ಅನಿವಾರ್ಯತೆಗಾಗಿ ಹುಟ್ಟಿಕೊಂಡ ವಿರೋಧಿ ಸಿದ್ಧಾಂತಗಳ ಕೂಟ ಹೆಚ್ಚು ಕಾಲ ಬಾಳುವುದು ಕೆಲವು ಪಕ್ಷಗಳಿಗೆ ಅಪಾಯಕಾರಿಯೇ. ಅದರಲ್ಲೂ ಶಿವಸೇನೆಯಂಥ ಹಿಂದುತ್ವವೇ ಜೀವಾಳವಾಗಿರುವ ಪಕ್ಷಗಳು ದೀರ್ಘ ಕಾಲ ಪರಮ ವಿರೋಧಿ ಧೋರಣೆಯ ಕಾಂಗ್ರೆಸ್ ಮತ್ತು ಎನ್‌ಸಿಪಿಗಳ ಜತೆ ಮೈತ್ರಿ ಮಾಡಿಕೊಳ್ಳುವುದು ಸೇನೆಯ ಅಸ್ತಿತ್ವಕ್ಕೇ ಅಪಾಯಕಾರಿ. ಇದಕ್ಕೆ ಕಾರಣಗಳು ಹಲವು.
ಒಂದೊಮ್ಮೆ ಮಹಾ ವಿಕಾಸ ಅಘಾಡಿ ಸರಕಾರ ಐದು ವರ್ಷ ಪೂರ್ಣಗೊಳಿಸಿದರೆ ಮುಂದಿನ ಚುನಾವಣೆಯನ್ನು ಶಿವಸೇನೆ ಹೇಗೆ ಎದುರಿಸುತ್ತದೆ ಎನ್ನುವುದು ದೊಡ್ಡ ಪ್ರಶ್ನೆ. ಮೈತ್ರಿಯನ್ನು ಮುಂದುವರಿಸಿದರೆ ಈ ಮೂರೂ ಪಕ್ಷಗಳು ಹೇಗೆ ಸೀಟು ಹಂಚಿಕೆ ಮಾಡಿಕೊಳ್ಳುತ್ತವೆ? ಶಿವಸೇನೆ ಕಳೆದ ಬಾರಿ ಸ್ಪರ್ಧಿಸಿದ್ದ 121 ಕ್ಷೇತ್ರಗಳಲ್ಲಿ ಪ್ರತಿಯೊಂದರಲ್ಲೂ ಕಾಂಗ್ರೆಸ್, ಎನ್‌ಸಿಪಿ ಸಮಾನ ಶತ್ರು. ಹಾಗಿರುವಾಗ ಮುಂದಿನ ಚುನಾವಣೆಯಲ್ಲಿ ಅದು ಕಾಂಗ್ರೆಸ್ ಪರವೋ, ಎನ್‌ಸಿಪಿ ಪರವೋ ಹೇಗೆ ಮತ ಯಾಚನೆ ಮಾಡುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಕತ್ತಿ, ದೊಣ್ಣೆ ಹಿಡಿದು ಬಡಿದಾಡುವ ಶಿವಸೇನೆ ಕಾರ್ಯಕರ್ತರು ತಮ್ಮ ಕ್ಷೇತ್ರದಲ್ಲಿ ಶಿವಸೇನೆ ಸ್ಪರ್ಧಿಸದೆ ಇದ್ದರೆ ಕಾಂಗ್ರೆಸ್, ಇಲ್ಲವೇ ಎನ್‌ಸಿಪಿಗೆ ಹೇಗೆ ಮತ ಹಾಕುತ್ತಾರೆ? ಆಗ ಅವರು ಸಹಜವಾಗಿಯೇ ಹಿಂದುತ್ವದ ಪ್ರಬಲ ಆರಾಧಕ ಬಿಜೆಪಿಯತ್ತ ಸಾಗುವುದು ನಿಶ್ಚಿತ. ಹೀಗಾಗಿ ಶಿವಸೇನೆಗೆ ತನ್ನ ಕೇಡರ್ ಬೇಸನ್ನು ಉಳಿಸಿಕೊಳ್ಳಲು ಎನ್‌ಸಿಪಿ, ಕಾಂಗ್ರೆಸ್ ಜತೆಗಿನ ಮೈತ್ರಿ ಮುರಿದುಕೊಳ್ಳುವುದು ಅನಿವಾರ್ಯವೇ ಆಗಿರುತ್ತದೆ.
ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಅರಿವಿತ್ತು!
ಕರ್ನಾಟಕದಲ್ಲಿ 2018ರಲ್ಲಿ ಚುನಾವಣೆ ಜೋಶ್‌ನಲ್ಲಿ ಕಾಂಗ್ರೆಸ್ ಅವಸರಕ್ಕೆ ಬಿದ್ದು ಅಧಿಕಾರಕ್ಕಾಗಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿತ್ತು. ಆ ಕ್ಷಣಕ್ಕೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಅದರ ಪ್ಲ್ಯಾನ್ ರಾಷ್ಟ್ರ ಮಟ್ಟದಲ್ಲೂ ಪ್ರಶಂಸೆಗೆ ಒಳಗಾಗಿತ್ತು. ಆದರೆ, ಇದರಿಂದ ಪಕ್ಷದ ಮೇಲೆ ದೀರ್ಘಕಾಲೀನವಾಗಿ ಆಗಬಹುದಾದ ಪರಿಣಾಮಗಳ ಬಗ್ಗೆ ಸಿದ್ಧರಾಮಯ್ಯರಂಥ ನಾಯಕರಿಗೆ ಸ್ಪಷ್ಟವಾದ ಅರಿವು ಇತ್ತು. ಹೀಗಾಗಿ ಅಧಿಕಾರದಲ್ಲಿ ಜತೆಯಾಗಿದ್ದರೂ ಕಾರಣ ಸಿಕ್ಕಿದಾಗಲೆಲ್ಲ ತಾವು ಬೇರೆ ಬೇರೆ ಎನ್ನುವುದನ್ನು ನಿರೂಪಿಸುತ್ತಲೇ ಹೋದರು. ಕೊನೆಗೆ ಸರಕಾರದ ಪತನಕ್ಕೂ ನಾನಾ ಕಾರಣಗಳು ಜತೆಗೂಡಿದವು. ಅಂತಿಮವಾಗಿ ಸರಕಾರ ಉರುಳಿದ್ದು ನಿಜಾರ್ಥದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡಕ್ಕೂ ಲಾಭದಾಯಕ ಬೆಳವಣಿಗೆಯೇ.
ಯಾಕೆಂದರೆ, ಪರಸ್ಪರ ಎದುರಾಳಿಗಳಾಗೇ ನಿಂತು ಹೋರಾಡಿ ಅಸ್ತಿತ್ವ ಉಳಿಸಿಕೊಳ್ಳಬೇಕಾದ ಪಕ್ಷಗಳು ದೀರ್ಘ ಕಾಲ ಅಧಿಕಾರಕ್ಕಾಗಿ ರಾಜಿ ಮಾಡಿಕೊಂಡರೆ ಕೇಡರ್ ಬೇಸ್ ಕರಗಿ ಅಸ್ತಿತ್ವಕ್ಕೇ ಹೊಡೆತ ಬೀಳುತ್ತದೆ ಎಂಬುದು ರಾಜಕೀಯ ಸತ್ಯ.
ಒಂದೊಮ್ಮೆ ಕಾಂಗ್ರೆಸ್ ಮತ್ತು ಜೆಡಿಎಸ್‌ಗಳು ಕೊನೆಯವರೆಗೂ ಆಡಳಿತ ನಡೆಸಿದರೂ ಮುಂದಿನ ಚುನಾವಣೆಯನ್ನು ಜತೆಯಾಗಿ ಎದುರಿಸುವುದಂತೂ ಸಾಧ್ಯವೇ ಇರಲಿಲ್ಲ. ಯಾಕೆಂದರೆ, ಹಳೆ ಮೈಸೂರು ಭಾಗದಲ್ಲಿ ಪರಸ್ಪರ ಜಿದ್ದಾಜಿದ್ದಿಗೆ ಇಳಿಯವುದು ಅವೆರಡೇ ಪಕ್ಷಗಳು. ಅವರೇ ಮೈತ್ರಿ ಮಾಡಿಕೊಳ್ಳುವುದಂತೂ ಸಾಧ್ಯವೇ ಇಲ್ಲ. ಹಾಗೆ ಮಾಡಿಕೊಂಡರೆ ಇಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿರುವ ಬಿಜೆಪಿಗೆ ಕೆಂಪು ಹಾಸಿಗೆ ಹಾಸಿದಂತೆಯೇ. ಹಾಗಂತ, ಕೊನೆಯ ಕ್ಷಣದಲ್ಲಿ ಮೈತ್ರಿ ಮುರಿದುಕೊಳ್ಳುವ ನಾಟಕ ಮಾಡಿದರೂ ಅದು ಜನರಿಗೆ ಅಧಿಕಾರ ದಾಹ ಅಂತ ತಕ್ಷಣಕ್ಕೆ ಅನಿಸಿಬಿಡುತ್ತದೆ.
ಚುನಾವಣೆಗೆ ಇನ್ನೂ ಎರಡುವರೆ ವರ್ಷ ಇರುವಾಗಲೇ ಮೈತ್ರಿ ಸರಕಾರ ಪತನಗೊಂಡು ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಿದ್ದು ಎರಡುವರೆ ವರ್ಷ ಅಧಿಕಾರ ಅನುಭವಿಸಿದ್ದೂಆಯಿತು, ಉಳಿದ ಅವಧಿ ಪಕ್ಷ ಕಟ್ಟಲು ಸಿಕ್ಕಿದ್ದೂ ಆಯಿತು! ಇದು ನಿಜವಾದ ರಾಜಕಾರಣ.
ಮಹಾರಾಷ್ಟ್ರದಲ್ಲೂ ಹೀಗೇ ಆಗಬೇಕಿತ್ತು!
ನಿಜವೆಂದರೆ, ಉದ್ಧವ್ ಠಾಕ್ರೆ ಅವರಿಗೆ ಕರ್ನಾಟಕವೇ ಮಾದರಿ ಆಗಬೇಕಿತ್ತು. ಅಧಿಕಾರದ ಒಂದು ಹಂತದಲ್ಲಿ ಮಹಾ ವಿಕಾಸ ಅಘಾಡಿ ಸರಕಾರದಿಂದ ಹೊರಬಂದು ಸಹಜ ಮಿತ್ರನಾಗಿರುವ ಬಿಜೆಪಿ ಜತೆಗೆ ಸೇರಿಕೊಳ್ಳುವ ಅವಕಾಶವನ್ನು ಬಳಸಿಕೊಳ್ಳಬಹುದಿತ್ತು. ಅಥವಾ ಬಂಡಾಯದ ಸಣ್ಣ ಸೂಚನೆ ಸಿಕ್ಕಾಗ ತಾನೇ ಅದನ್ನು ಸಮಾಧಾನಪಡಿಸಿ, ಅಘಾಡಿ ಮೈತ್ರಿಕೂಟದಿಂದ ಹೊರಬರುವ ಭರವಸೆ ನೀಡಬಹುದಿತ್ತು. ಆದರೆ, ಉದ್ಧವ್ ಠಾಕ್ರೆ ಅವರು ಶಿವಸೈನಿಕರಿಗಿಂತಲೂ ಕಾಂಗ್ರೆಸ್ ಮತ್ತು ಎನ್‌ಸಿಪಿಯನ್ನೇ ನಂಬಿಕೊಂಡಂತೆ ವರ್ತಿಸಿದರು. ತಮಗೆ ಅಧಿಕಾರ ನೀಡಿದ ಪಕ್ಷಗಳಿಗೆ ಮೋಸ ಮಾಡಬಾರದು ಎಂಬ ಧ್ವನಿ ಅವರ ಮಾತುಗಳಲ್ಲಿ ಹೊಮ್ಮುತ್ತಿತ್ತು. ಹೀಗಾಗಿ ಶಿವಸೇನಾ ಶಾಸಕರಿಗೇ ಅವರ ಮೇಲೆ ಭರವಸೆ ಕುಸಿಯಿತು. ಅಂತಿಮವಾಗಿ ಈಗ ಉದ್ಧವ್ ಠಾಕ್ರೆ ಅವರೇ ಏಕಾಂಗಿಯಾಗುವ ಪರಿಸ್ಥಿತಿ ನಿರ್ಮಾಣವಾಯಿತು. ಸಶಕ್ತ ನಾಯಕನೊಬ್ಬ ಅಸಹಾಯಕನಾಗಿ, ದೈನೇಸಿಯಂತೆ ಕೈ ಮುಗಿಯುವ ಸ್ಥಿತಿ ಸೃಷ್ಟಿಯಾಯಿತು.
ಉದ್ಧವ್ ಠಾಕ್ರೆ ಕೊನೆಯ ಹಂತದಲ್ಲಾದರೂ ತನ್ನ ಪಕ್ಷದೊಳಗೆ ಹುಟ್ಟಿಕೊಂಡಿರುವ ಬಂಡಾಯದ ಸಾಚಾತನವನ್ನು ಅರ್ಥ ಮಾಡಿಕೊಂಡು ವ್ಯವಹರಿಸಿದ್ದರೆ ಇವತ್ತು ಅಧಿಕಾರವಿಲ್ಲದಿದ್ದರೂ ಶಿವಸೇನೆಯ ಪ್ರಧಾನ ಸೇನಾನಿಯಾಗಿ, ಸಾರಥಿಯಾಗಿ ನಿಂತು ರಥ ಓಡಿಸಬಹುದಿತ್ತು. ಎಲ್ಲ ಶಿವಸೈನಿಕರು ಅವರ ಬೆನ್ನ ಹಿಂದೆ ನಿಲ್ಲುತ್ತಿದ್ದರು. ಆದರೆ, ಈಗ ಅರಮನೆ ಇದೆ, ರಥವಿದೆ, ಸೈನಿಕರೇ ಇಲ್ಲದ ಸ್ಥಿತಿ ಇದೆ.