Site icon Vistara News

Lok Sabha Election: ಬಿಜೆಪಿ 411 ಪ್ಲಸ್‌; ಬಂಗಾಳ, ತೆಲಂಗಾಣದಲ್ಲಿ ಬಂಪರ್!

Narendra modi

News18 Opinion Polls: BJP-led NDA May Win 400+ Lok Sabha Seats

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಸಾಲು ಸಾಲು ಸಮೀಕ್ಷಾ ವರದಿಗಳು ಪ್ರಕಟವಾಗುತ್ತಿವೆ. ಇದರ ಬೆನ್ನಲ್ಲೇ, ನ್ಯೂಸ್‌ 18 ಮೆಗಾ ಸಮೀಕ್ಷೆ (News18 Mega Opinion Poll) ವರದಿ ಬಹಿರಂಗವಾಗಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟವು 411 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದೆ. ಅದರಲ್ಲೂ, ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಇರುವ ಪಶ್ಚಿಮ ಬಂಗಾಳ (West Bengal) ಹಾಗೂ ಕಾಂಗ್ರೆಸ್‌ ಸರ್ಕಾರ ಇರುವ ತೆಲಂಗಾಣದಲ್ಲಿ (Telangana) ಬಿಜೆಪಿಯು ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿದುಬಂದಿದೆ.

ಪಶ್ಚಿಮ ಬಂಗಾಳದ ಒಟ್ಟು 42 ಲೋಕಸಭೆ ಕ್ಷೇತ್ರಗಳ ಪೈಕಿ ಬಿಜೆಪಿಯು 25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಅಂದರೆ, ಕಳೆದ ಬಾರಿಗಿಂತ ಈ ಬಾರಿ 7 ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಗೆಲ್ಲಲಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು 18 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಇನ್ನು, ತೆಲಂಗಾಣದಲ್ಲೂ ಬಿಜೆಪಿಯು ಈ ಬಾರಿ 8 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಒಟ್ಟು 17 ಕ್ಷೇತ್ರಗಳ ಪೈಕಿ ಕಳೆದ ಬಾರಿ ಬಿಜೆಪಿಯು 4 ಕ್ಷೇತ್ರಗಳಲ್ಲಿ ಜಯಿಸಿತ್ತು. ಈ ಬಾರಿ 8 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ ಎಂದು ವರದಿ ತಿಳಿಸಿದೆ.

ಕರ್ನಾಟಕದಲ್ಲಿ ಬಿಜೆಪಿಗೆ 25 ಕ್ಷೇತ್ರ

ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA)ವು 28 ಸ್ಥಾನಗಳ ಪೈಕಿ 25, ಅಸ್ಸಾಂನ 14 ಸ್ಥಾನಗಳಲ್ಲಿ 12 ಮತ್ತು ರಾಜಸ್ಥಾನ, ಉತ್ತರಾಖಂಡದಲ್ಲಿ ಕ್ಲೀನ್ ಸ್ವೀಪ್ ಮಾಡುವ ಸಾಧ್ಯತೆ ಇದೆ ಎಂದು ಸಮೀಕ್ಷೆ ತಿಳಿಸಿದೆ. ತಮಿಳುನಾಡಿನಲ್ಲಿ ಡಿಎಂಕೆ 30 ಸ್ಥಾನಗಳನ್ನು ಗೆಲ್ಲುವ ಮೂಲಕ ಇಂಡಿಯಾ ಒಕ್ಕೂಟವನ್ನು ಮುನ್ನಡೆಸಲಿದೆ ಎಂದು ಸಮೀಕ್ಷೆ ಸೂಚಿಸಿದೆ. ಜತೆಗೆ ಬಿಜೆಪಿ ನೇತೃತ್ವದ ಎನ್‌ಡಿಎ 5 ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಹೆಜ್ಜೆ ಗುರುತನ್ನು ಮೂಡಿಸಲಿದೆ.

ಆಂಧ್ರಪ್ರದೇಶದಲ್ಲಿ ಎನ್‌ಡಿಎ 18 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (YSRCP) 7 ಕಡೆ ಗೆಲುವು ದಾಖಲಿಸಲಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಒಂದು ಸ್ಥಾನದಲ್ಲಿಯೂ ಗೆಲುವು ಸಾಧಿಸುವುದಿಲ್ಲ. ಇನ್ನು ಗುಜರಾತ್‌ನಲ್ಲಿ ಎನ್‌ಡಿಎ ಕ್ಲೀನ್ ಸ್ವೀಪ್ ಮಾಡಲಿದೆ. ಅಂದರೆ 26 ಸ್ಥಾನಗಳನ್ನೂ ಗೆಲ್ಲಲಿದೆ. ಮಹಾರಾಷ್ಟ್ರದ 48 ಲೋಕಸಭಾ ಸ್ಥಾನಗಳಲ್ಲಿ ಎನ್‌ಡಿಎ 41 ಸ್ಥಾನಗಳಲ್ಲಿ ಗೆಲುವಿನ ಪತಾಕೆ ಹಾರಿಸಲಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ 7 ಸ್ಥಾನಗಳಿಗೆ ಕುಸಿಯಲಿದೆ ಎಂದು ಸಮೀಕ್ಷೆ ಹೇಳಿದೆ.

ಇದನ್ನೂ ಓದಿ: Lok Sabha Election 2024: ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎಗೆ ಬಹುಮತ; ಯಾವ ಸಮೀಕ್ಷೆ, ಎಷ್ಟು ಸೀಟು?

ಒಡಿಶಾದಲ್ಲಿ ಬಿಜೆಪಿಗೆ 13 ಮತ್ತು ಬಿಜೆಡಿಗೆ 8 ಸ್ಥಾನ ಲಭಿಸಲಿದೆ. ಜಾರ್ಖಂಡ್‌ನ 14 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಬಿಜೆಪಿ ಗೆಲ್ಲುವ ಸಾಧ್ಯತೆಯಿದೆ. ಇಂಡಿಯಾ ಬ್ಲಾಕ್‌ನ ಭಾಗವಾಗಿರುವ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ (JMM) 2 ಸ್ಥಾನಗಳನ್ನು ಪಡೆಯಲಿದೆ ಎಂದು ಊಹಿಸಲಾಗಿದೆ. ಒಟ್ಟು ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ನೇತೃತ್ವದ ಇಂಡಿಯಾ (I.N.D.I.A. bloc) ಒಕ್ಕೂಟ 105 ಮತ್ತು ಇತರ ಪಕ್ಷಗಳು 27 ಸ್ಥಾನಗಳಲ್ಲಿ ಗೆಲುವು ಸಾಧಿಸಲಿವೆ.

ಅತೀ ಹೆಚ್ಚು ಕ್ಷೇತ್ರಗಳನ್ನು ಒಳಗೊಂಡ ಉತ್ತರ ಪ್ರದೇಶದಲ್ಲಿ ಎನ್‌ಡಿಎ ಪಾರಮ್ಯ ಮೆರೆಯಲಿದೆ. ಇಲ್ಲಿ ಎನ್‌ಡಿಎಗೆ 77, ಇಂಡಿಯಾ ಒಕ್ಕೂಟಕ್ಕೆ 2 ಮತ್ತು ಬಿಎಸ್‌ಪಿಗೆ 1 ಸ್ಥಾನ ಸಿಗಲಿದೆ. ಪಂಜಾಬ್‌ನಲ್ಲಿ ಕಾಂಗ್ರೆಸ್‌ಗೆ 7, ಎನ್‌ಡಿಎಗೆ 3, ಶಿರೋಮಣಿ ಅಕಾಳಿ ದಳಕ್ಕೆ 2 ಮತ್ತು ಎಎಪಿಗೆ 1 ಸೀಟು ಲಭಿಸಲಿದೆ. ಕೇರಳದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ಗೆ 14, ಎಡಪಕ್ಷಗಳ ಒಕ್ಕೂಟ ಎಲ್‌ಡಿಎಫ್‌ 4 ಮತ್ತು ಎನ್‌ಡಿಎ 2 ಸ್ಥಾನಗಳಲ್ಲಿ ಜಯ ಗಳಿಸುವ ಸಾಧ್ಯತೆ ಇದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version