ನವದೆಹಲಿ: ಚೀನಾದಿಂದ ಹಣ ಪಡೆದು, ಆ ರಾಷ್ಟ್ರದ ಪರ ಪ್ರಚಾರಾಂದೋಲನ ನಡೆಸಿದ, ಭಾರತದ ವಿರುದ್ಧ ವರದಿ ಪ್ರಕಟಿಸಿದ ಆರೋಪದಲ್ಲಿ ಬಂಧಿತರಾಗಿರುವ ನ್ಯೂಸ್‌ಕ್ಲಿಕ್ ವೆಬ್‌ಸೈಟ್ (NewsClick Case) ಸಂಸ್ಥಾಪಕರೂ ಆದ ಸಂಪಾದಕ ಪ್ರಬೀರ್ ಪುರಕಾಯಸ್ಥ (Prabir Purkayastha) ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಸುಪ್ರೀಂ ಕೋರ್ಟ್(Supreme Court) ಆದೇಶಿಸಿದೆ. ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸಂದೀಪ್ ಮೆಹ್ತಾ ಇದ್ದ ನ್ಯಾಯಪೀಠ, ಪುರಕಾಯಸ್ಥ ಅವರ ಬಂಧನ ಅಕ್ರಮ ಎಂದು ಹೇಳಿದೆ.
ಪುರಕಾಯಸ್ಥ ಅವರ ಬಂಧನ ಸರಿಯಾದ ಕ್ರಮ ಎಂದು ಪುರಸ್ಕರಿಸುವಂತಹ ಯಾವುದೇ ಪುರಾವೆಗಳಿಲ್ಲ ಎಂದು ಕೋರ್ಟ್ ಹೇಳಿದೆ. ಚೀನಾದಿಂದ ಹಣ ಪಡೆದು, ಆ ರಾಷ್ಟ್ರದ ಪರ ಪ್ರಚಾರಾಂದೋಲನ ನಡೆಸಿದ, ಭಾರತದ ವಿರುದ್ಧ ವರದಿ ಪ್ರಕಟಿಸಿದ ಆರೋಪದಲ್ಲಿ ಪ್ರಬೀರ್ ಪುರಕಾಯಸ್ಥ ಅವರನ್ನು ಅ.3ರಂದು ದೆಹಲಿ ಪೊಲೀಸರು ಬಂಧಿಸಿದ್ದರು. ಹಾಗೆಯೇ, ನ್ಯೂಸ್‌ಕ್ಲಿಕ್ ಮಾನವ ಸಂಪನ್ಮೂಲ ವಿಭಾಗದ (HR) ಮುಖ್ಯಸ್ಥ ಅಮಿತ್ ಚಕ್ರವರ್ತಿ ಎಂಬುವರನ್ನೂ ಬಂಧಿಸಲಾಗಿತ್ತು.
#WATCH | On Supreme Court's order to release NewsClick founder and Editor-in-Chief Prabir Purkayastha in the UAPA case, Advocate Arshdeep Khurana says "Supreme Court has held the arrest and the remand proceedings to be illegal and has directed the release of Purkayastha. We have… pic.twitter.com/KZYQwErFBn
— ANI (@ANI) May 15, 2024
ದೆಹಲಿ, ರಾಷ್ಟ್ರ ರಾಜಧಾನಿ ವ್ಯಾಪ್ತಿ ಹಾಗೂ ಮುಂಬೈ ಸೇರಿ 20 ಕಡೆ ಅಕ್ಟೋಬರ್ 3ರಂದು ದೆಹಲಿ ಪೊಲೀಸರು ದಾಳಿ ನಡೆಸಿ, ಪರಿಶೀಲನೆ ಮಾಡಿದ್ದರು. ”ನ್ಯೂಸ್‌ಕ್ಲಿಕ್‌ನ 37 ಪುರುಷರು ಹಾಗೂ 9 ಮಹಿಳೆಯರನ್ನು ವಿಚಾರಣೆ ನಡೆಸಲಾಗಿದ್ದು. ಡಿಜಿಟಲ್ ಡಿವೈಸ್‌ಗಳು, ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಮತ್ತೊಂದೆಡೆ, ಪ್ರಬೀರ್ ಪುರಕಾಯಸ್ಥ ಬಂಧನ ಕುರಿತು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದು, “ಇದು ಮಾಧ್ಯಮ ಸ್ವಾತಂತ್ರ್ಯದ ಹರಣ” ಎಂದು ಆಕ್ರೋಶ ಹೊರ ಹಾಕಿತ್ತು.
ಏನಿದು ಪ್ರಕರಣ?
ನ್ಯೂಸ್‌ಕ್ಲಿಕ್ ಸಂಸ್ಥೆಯಲ್ಲಿ ಚೀನಾ ಹೂಡಿಕೆ ಮಾಡಿದೆ. ಅಕ್ರಮವಾಗಿ ಹಣ ವರ್ಗಾವಣೆ ಹಾಗೂ ಚೀನಾ ಪರವಾಗಿ ಸುದ್ದಿಗಳನ್ನು ಪ್ರಕಟಿಸಿದ ಆರೋಪದ ಹಿನ್ನೆಲೆಯಲ್ಲಿ ಇ.ಡಿ ತನಿಖೆ ನಡೆಸುತ್ತಿದೆ. 2021ರಲ್ಲಿ ನ್ಯೂಸ್‌ಕ್ಲಿಕ್ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೂಡ ದಾಳಿ ನಡೆಸಿ, ಪರಿಶೀಲನೆ ಮಾಡಿದ್ದರು. ಇದಾದ ಬಳಿಕ ಜಾರಿ ನಿರ್ದೇಶನಾಲಯವು ನ್ಯೂಸ್‌ಕ್ಲಿಕ್‌ಗೆ ಸಂಬಂಧಿಸಿದ ಕೆಲವು ಆಸ್ತಿಗಳನ್ನು ಕೂಡ ಜಪ್ತಿ ಮಾಡಿದೆ. ಮೂಲಗಳ ಪ್ರಕಾರ, ನ್ಯೂಸ್‌ಕ್ಲಿಕ್ ಸಂಸ್ಥೆಯು ಚೀನಾದಿಂದ 29 ಕೋಟಿ ರೂ. ಪಡೆದಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:Bank Loan Fraud : 34,000 ಕೋಟಿ ರೂ. ಬ್ಯಾಂಕ್ ವಂಚನೆ, ಡಿಎಚ್ಎಫ್ಎಲ್ ಮಾಜಿ ನಿರ್ದೇಶಕನ ಬಂಧನ
ನ್ಯೂಯಾರ್ಕ್ ಟೈಮ್ಸ್ ವರದಿ ಏನು?
ನ್ಯೂಸ್‌ಕ್ಲಿಕ್‌ನಲ್ಲಿ ಚೀನಾ ಹೂಡಿಕೆ ಕುರಿತು ಕಳೆದ ಆಗಸ್ಟ್‌ನಲ್ಲಿ ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು. “ಚೀನಾದ ಪರವಾಗಿ ನಿಲುವು ಹೊಂದಿರುವ, ಚೀನಾ ನಿರ್ಧಾರಗಳನ್ನು ಬೆಂಬಲಿಸುವ ಅಮೆರಿಕದ ಉದ್ಯಮಿ ನೆವಿಲ್ಲೆ ರಾಯ್ ಸಿಂಘಂ ಎಂಬುವರು ಹಲವು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದು, ಇವುಗಳಲ್ಲಿ ನ್ಯೂಸ್‌ಕ್ಲಿಕ್ ಕೂಡ ಇದೆ” ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಿತ್ತು. ಚೀನಾ ಹೂಡಿಕೆ, ಅಕ್ರಮವಾಗಿ ಹಣ ವರ್ಗಾವಣೆ ಸೇರಿ ಹಲವು ಆರೋಪಗಳನ್ನು ನ್ಯೂಸ್‌ಕ್ಲಿಕ್ ಸಂಪಾದಕ ಪ್ರಬೀರ್ ಪುರಕಾಯಸ್ಥ ಅಲ್ಲಗಳೆದಿದ್ದಾರೆ. ಇದೆಲ್ಲ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.