Site icon Vistara News

ತಮಿಳುನಾಡಿನವರೇ ಮುಂದಿನ ಪ್ರಧಾನಿ! ಸೆಂಗೋಲ್ ಸ್ಥಾಪಿಸಿದ್ದಕ್ಕಾಗಿ 25 ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ: ಅಮಿತ್ ಶಾ

Amit Shah

ಚೆನ್ನೈ, ತಮಿಳುನಾಡು: ಉತ್ತರ ಭಾರತದಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ಭಾರತೀಯ ಜನತಾ ಪಾರ್ಟಿಗೆ(BJP) ದಕ್ಷಿಣ ಭಾರತದಲ್ಲಿ ಹೇಳಿಕೊಳ್ಳುವಂಥ ಯಶಸ್ಸು ಸಿಕ್ಕಿಲ್ಲ. ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಬಾಗಿಲು ಆಗಿದ್ದ ಕರ್ನಾಟಕದಲ್ಲಿ ಸೋಲು ಕಂಡು ನಿರಾಶೆ ಅನುಭವಿಸಿದೆ. ಹಾಗಾಗಿ, ತಮಿಳು ನಾಡಿನಲ್ಲಿ ಕಮಲ ಅರಳಿಸಲು ಪಣ ತೊಟ್ಟಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು, ಭವಿಷ್ಯದಲ್ಲಿ ತಮಿಳುನಾಡಿನವರೇ ಪ್ರಧಾನಿಯಾಗಲಿದ್ದಾರೆಂಬ (Next PM from Tamil Nadu) ಸಂದೇಶವನ್ನು ರವಾನಿಸಿದ್ದಾರೆ. ಅಲ್ಲದೇ, ಸಂಸತ್ತಿನಲ್ಲಿ ತಮಿಳುನಾಡಿನ ಸೆಂಗೋಲ್ ಸ್ಥಾಪಿಸಲಾಗಿದೆ ಎಂದು ಭಾವನಾತ್ಮಕವಾಗಿ ತಮಿಳಿಗರನ್ನು ಸೆಳೆಯುವ ಪ್ರಯತ್ನವನ್ನು ಮಾಡಿದ್ದಾರೆ.

ಭಾನುವಾರ ನಡೆದ ಪಕ್ಷದ ಸಭೆಯಲ್ಲಿ ಮುಂದಿನ ಪ್ರಧಾನಿ ತಮಿಳುನಾಡಿನವರೇ ಆಗಲಿದ್ದಾರೆಂಬ ಸಂದೇಶವನ್ನು ಪಕ್ಷದ ಕಾರ್ಯಕರ್ತರಿಗೆ ರವಾನಿಸಿದ್ದಾರೆ. ಆದರೆ, ಯಾರು ಮತ್ತು ಹೇಗೆ ಆಗಲಿದ್ದಾರೆಂಬ ವಿವರವನ್ನು ಅವರು ಬಿಟ್ಟುಕೊಟ್ಟಿಲ್ಲ. ತಮಿಳುನಾಡಿನ ನಾಯಕರು ಪ್ರಧಾನಿಯಾಗುವ ಅವಕಾಶ ಈ ಹಿಂದೆ ಎರಡು ಬಾರಿ ಬಂದಿತ್ತು. ಈ ಅವಕಾಶಗಳು ತಪ್ಪಲು ಈಗ ಆಡಳಿತದಲ್ಲಿರುವ ಡಿಎಂಕೆ ಪಕ್ಷವೇ ಕಾರಣ ಎಂದು ಆರೋಪಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಿಂದ ಬಿಜೆಪಿಯ 20 ಅಭ್ಯರ್ಥಿಗಳು ಆಯ್ಕೆಯಾಗಬೇಕು ಎಂಬ ಟಾಸ್ಕ್ ಅನ್ನು ತಮ್ಮ ಪಕ್ಷದ ಕಾರ್ಯಕರ್ತರಿಗೆ ಅಮಿತ್ ಶಾ ನೀಡಿದ್ದಾರೆ. ಇದಕ್ಕಾಗಿ ಬೂತ್ ಮಟ್ಟದ ಸಮಿತಿಗಳನ್ನು ಬಲಪಡಿಸುವಂತೆ ಪದಾಧಿಕಾರಿಗಳಿಗೆ ತಿಳಿಸಿದ್ದಾರೆಂದು ಮೂಲಗಳು ಹೇಳಿವೆ.

ಚೋಳ ರಾಜರ ಕಾಲದ ಪರಂಪರೆಯಾಗಿರುವ ಸೆಂಗೋಲ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಪ್ರತಿಷ್ಠಾಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅವರಿಗೆ ಕೃತಜ್ಞತೆ ಸಲ್ಲಿಸುವ ರೂಪದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಿಂದ ಬಿಜೆಪಿ ನೇತೃತ್ವದ ಎನ್‌ಡಿಎದಿಂದ 25 ಅಭ್ಯರ್ಥಿಗಳನ್ನು ಸಂಸತ್ತಿಗೆ ಆಯ್ಕೆ ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜನರಿಗೆ ಮನವಿ ಮಾಡಿದರು.

ಈ ಸುದ್ದಿಯನ್ನೂ ಓದಿ: New Parliament Building: ಅಧಿಕಾರ ಹಸ್ತಾಂತರದ ‘ರಾಜದಂಡ’ಕ್ಕೆ ಲಿಖಿತ ಸಾಕ್ಷ್ಯಗಳಿಲ್ಲ ಎಂದ ಕಾಂಗ್ರೆಸ್, ಅಮಿತ್ ಶಾ ತಿರುಗೇಟು

2024ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ. ಸುಮಾರು 300ಕ್ಕೂ ಅಧಿಕ ಸೀಟುಗಳನ್ನು ಗೆಲ್ಲಲಿದೆ. ಹಾಗಾಗಿ, ತಮಿಳುನಾಡಿನಿಂದ 25 ಸಂಸದರು ಆಯ್ಕೆಯಾಗಬೇಕು. ಹೀಗಾದರೆ, ರಾಜ್ಯದಿಂದ ಹೆಚ್ಚು ಸಂಸದರನ್ನು ಸಚಿವರನ್ನಾಗಿ ಮಾಡಲಾಗುವುದು ಎಂದು ಅಮಿತ್ ಶಾ ಹೇಳಿದರು.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version