ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ NH17 ರ ಕರ್ನಾಟಕ ಹಾಗೂ ಗೋವಾ ಗಡಿ ಪ್ರದೇಶದ ಪ್ರಾಕೃತಿಕ ಸೌಂದರ್ಯಕ್ಕೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮನಸಾರೆ ಮಾರುಹೋಗಿದ್ದಾರೆ. ಈ ಪ್ರದೇಶದಲ್ಲಿ ಪೂರ್ಣಗೊಂಡಿರುವ ಬಹುಪಥ ಹೆದ್ದಾರಿಯ ಚಿತ್ರಗಳನ್ನು ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ ಅದರ ಸೊಬಗನ್ನು ಬಣ್ಣಿಸಿದ್ದಾರೆ.
ಕುಂದಾಪುರದಿಂದ ಆರಂಭಗೊಂಡು ಗೋವಾದ ತನಕದ ಈ ರಸ್ತೆಯ ಒಂದು ಕಡೆ ಅರಬ್ಬಿ ಸಮುದ್ರವಿದ್ದರೆ ಮತ್ತೊಂದು ಮಗ್ಗುಲಲ್ಲಿ ಹಸಿರು ಹೊದಿಕೆಯನ್ನು ಹೊದ್ದುಕೊಂಡಿರುವ ಪಶ್ಚಿಮ ಘಟ್ಟವಿದೆ. ಇವೆರಡು ಪ್ರಾಕೃತಿಕ ಸೌಂದರ್ಯಗಳ ನಡುವೆ ಸಾಗುವ ರಸ್ತೆ, ಪ್ರಯಾಣಿಕರನ್ನು ಹೊಸ ಲೋಕಕ್ಕೆ ಕೊಂಡೊಯ್ಯುತ್ತದೆ ಎಂಬುದೇ ಗಡ್ಕರಿಯವರ ವಿವರಣೆ.
ವಿಶ್ವ ಮಟ್ಟದ ಮೂಲಸೌಕರ್ಯವಿದು. ಇದು ನವ ಭಾರತದ ಅಡಿಪಾಯ. ಕರ್ನಾಟಕ ಹಾಗೂ ಗೋವಾ ರಾಜ್ಯಗಳ ಗಡಿಯಲ್ಲಿ ಹಾದು ಹೋಗುವ ಎನ್‌ಎಚ್‌೧೭ ಹೆದ್ದಾರಿ, ಕಾಮಗಾರಿ ಪೂರ್ಣಗೊಂಡಿರುವ ಕರ್ನಾಟಕ ಭಾಗದಲ್ಲಿ ಈ ರೀತಿ ಕಾಣುತ್ತದೆ ಎಂದು ಟ್ವಿಟರ್‌ನಲ್ಲಿ ಗಡ್ಕರಿಯವರು ಬರೆದುಕೊಂಡಿದ್ದಾರೆ.
೧೮೭ ಕಿಲೋಮೀಟರ್‌ನಷ್ಟು ಚಾಚಿಕೊಂಡಿರುವ ಈ ರಸ್ತೆಯು, ಅರಬ್ಬಿ ಸಮುದ್ರ ಹಾಗೂ ಪಶ್ಚಿಮ ಘಟ್ಟಗಳ ನಡುವೆ ಸಾಗುತ್ತದೆ. ರಮಣೀಯವಾಗಿರುವ ಈ ರಸ್ತೆಯು ಪಶ್ಚಿಮ ಹಾಗೂ ದಕ್ಷಿಣ ಭಾರತದ ನಡುವಿನ ಪ್ರಮುಖ ಸಂಪರ್ಕ ಕೊಂಡಿ ಎಂದೂ ಗಡ್ಕರಿಯವರು ಬರೆದುಕೊಂಡಿದ್ದಾರೆ.
“ಹೆದ್ದಾರಿಯ ಶೇಕಡ ೫೦ ಭಾಗ ಪಶ್ಚಿಮ ಘಟ್ಟದ ನಡುವೆ ಹಾದು ಹೋಗುತ್ತದೆ. ಅದರಲ್ಲಿ ೪೫ ಕಿಲೋ ಮೀಟರ್ ರಸ್ತೆ ತಿರುವುಗಳನ್ನೊಳಗೊಂಡಿರುವ ಬೆಟ್ಟಗಳಲ್ಲಿ ಹಾದು ಹೋದರೆ, ೨೪ ಕಿಲೋ ಮೀಟರ್ ಹಾದಿ ಶಿಖರಗಳ ನಡುವೆ ಹಾದು ಹೋಗುತ್ತದೆ. ಈ ಹೆದ್ದಾರಿಯ ೧೭೩ ಕಿಲೋ ಮೀಟರ್‌ನಲ್ಲಿ ಶೇಕಡ ೯೨.೪೨ ಕಾಮಗಾರಿ ಮುಕ್ತಾಯಗೊಂಡಿದ್ದು, ವಾಹಗಳ ಸಂಚಾರ ಆರಂಭಗೊಂಡಿವೆ. ಡಿಸೆಂಬರ್‌ನಲ್ಲಿ ಉಳಿದ ಕಾಮಗಾರಿಯೂ ಮುಗಿಯಲಿದೆ,ʼʼ ಎಂದು ಗಡ್ಕರಿಯವರು ಬರೆದುಕೊಂಡಿದ್ದಾರೆ.
ಪ್ರಯಾಣಿಕರಿಗೆ ವಿಶ್ವ ದರ್ಜೆಯ ರಸ್ತೆ ಸಂಪರ್ಕ ಕಲ್ಪಿಸುವುದೇ ಈ ಯೋಜನೆಯ ಉದ್ದೇಶವಾಗಿದೆ. ಅಂತೆಯೇ ಪನ್ವೇಲ್, ಚಿಪ್ಲುನ್, ರತ್ನಗಿರಿ, ಪಣಜಿ, ಮಡಂಗಾವ್, ಕಾರವಾರ, ಉಡುಪಿ, ಸುರತ್ಕಲ್, ಮಂಗಳೂರು, ಕೋಯಿಕ್ಕೋಡ್, ಕೊಚ್ಚಿ, ತಿರುವನಂತಪುರಂ ಹಾಗೂ ಕನ್ಯಾಕುಮಾರಿಗೆ ಸುಲಭ ಸಂಪರ್ಕವಾಗಿದೆ ಎಂದು ಗಡ್ಕರಿ ಬರೆದುಕೊಂಡಿದ್ದಾರೆ.
ಉದ್ಯೋಗವಕಾಶ
ಈ ರಸ್ತೆಯಿಂದಾಗಿ ಈ ಪ್ರದೇಶಗಳ ಆರ್ಥಿಕ ಬೆಳವಣಿಗೆಗೆ ಕಾರಣವಾಗಲಿದೆ. ವಾಣಿಜ್ಯ ವಹಿವಾಟುಗಳನ್ನು ಹೆಚ್ಚಿಸುವ ಜತೆಗೆ ಕೈಗಾರಿಕೆಗಳ ಅಭಿವೃದ್ಧಿಗೂ ಕಾರಣವಾಗಲಿದೆ. ಇದರಿಂದ ಈ ಪ್ರದೇಶದ ಜನರಿಗೆ ಉದ್ಯೋಗವಕಾಶ ದೊರೆಯಲಿದೆ ಎಂಬುದಾಗಿಯೂ ಗಡ್ಕರಿ ಬರೆದುಕೊಂಡಿದ್ದಾರೆ.
ಇದೇ ವೇಳೆ ಅವರು, ಯೋಜನೆಗಳೆಲ್ಲವೂ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಭಾರತದ ಫಲಶ್ರುತಿ ಎಂದಿದ್ದಾರೆ.
ಇದನ್ನೂ ಓದಿ: ಭಾರತ್ NCAP ಮೂಲಕ ಕಾರುಗಳಿಗೆ ಸುರಕ್ಷತಾ ರೇಟಿಂಗ್ : ನಿತಿನ್ ಗಡ್ಕರಿ