Site icon Vistara News

ಪೇಟಿಎಂ ನಿರ್ಬಂಧ; ಫಾಸ್ಟ್‌ಟ್ಯಾಗ್‌ಗೆ ನಾಳೆಯೊಳಗೆ ಮೊದಲು ಈ ಕೆಲಸ ಮಾಡಿ

Paytm Fastag

NHAI asks Paytm FASTag users to procure new one from another bank by March 15

ನವದೆಹಲಿ: ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ (Paytm Payments Bank) ಆರ್‌ಬಿಐ ನಿರ್ಬಂಧ ಹೇರಿದೆ. ಮಾರ್ಚ್‌ 15ರಿಂದಲೇ ನಿರ್ಬಂಧದ ನಿಯಮಗಳು ಜಾರಿಗೆ ಬರಲಿದ್ದು, ಪೇಟಿಎಂ ಫಾಸ್ಟ್‌ಟ್ಯಾಗ್‌ (Paytm FASTags) ಹೊಂದಿರುವವರು ರಿಚಾರ್ಜ್‌ ಮಾಡಿಕೊಳ್ಳಲು ಆಗುವುದಿಲ್ಲ. ಹಾಗಾಗಿ, ಹೊಸ ಬ್ಯಾಂಕ್‌ನಿಂದ ಫಾಸ್ಟ್‌ಟ್ಯಾಗ್‌ ಪಡೆಯಿರಿ ಎಂದು ಗ್ರಾಹಕರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರವು (NHAI) ಸೂಚನೆ ನೀಡಿದೆ. ಮಾರ್ಚ್‌ 15ರೊಳೆಗೆ ಬೇರೆ ಬ್ಯಾಂಕ್‌ನಿಂದ ಫ್ಯಾಸ್ಟ್‌ಟ್ಯಾಗ್‌ ಪಡೆದುಕೊಳ್ಳಿ ಎಂದು ಸೂಚಿಸಿದೆ.

“ಪೇಟಿಎಂ ಫಾಸ್ಟ್‌ಟ್ಯಾಗ್‌ಗಳನ್ನು ಹೊಂದಿರುವ ವಾಹನ ಮಾಲೀಕರು ಅಥವಾ ಬಳಕೆದಾರರು ಮಾರ್ಚ್‌ 15ರೊಳಗೆ ಬೇರೆ ಬ್ಯಾಂಕ್‌ಗಳ ಫಾಸ್ಟ್‌ಟ್ಯಾಗ್‌ಗಳನ್ನು ಅಳವಡಿಸಿಕೊಳ್ಳಬೇಕು. ಆ ಮೂಲಕ ಟೋಲ್‌ಗಳಲ್ಲಿ ದಂಡ ಅಥವಾ ಫಾಸ್ಟ್‌ಟ್ಯಾಗ್‌ ಮೊತ್ತಕ್ಕಿಂತ ಎರಡು ಪಟ್ಟು ಹಣ ನೀಡುವುದರಿಂದ ತಪ್ಪಿಸಿಕೊಳ್ಳಬೇಕು. ಇದಕ್ಕಾಗಿ ಕೂಡಲೇ ನಿಮ್ಮ ಹತ್ತಿರದ ಬ್ಯಾಂಕ್‌ಗಳನ್ನು ಸಂಪರ್ಕಿಸಿ, ಹೊಸ ಬ್ಯಾಂಕ್‌ನ ಫಾಸ್ಟ್‌ಟ್ಯಾಗ್‌ ಅಳವಡಿಸಿಕೊಳ್ಳಿ” ಎಂಬುದಾಗಿ ಎನ್‌ಎಚ್‌ಎಐ ಪ್ರಕಟಣೆ ತಿಳಿಸಿದೆ.

ಈಗ ಉಳಿದಿರುವ ಹಣ ಏನಾಗುತ್ತದೆ?

ಮಾರ್ಚ್‌ 15ರಿಂದ ಆರ್‌ಬಿಐ ನಿರ್ಬಂಧ ಜಾರಿಗೆ ಬರುವುದರಿಂದ ಪೇಟಿಎಂ ಫಾಸ್ಟ್‌ಟ್ಯಾಗ್‌ ಹೊಂದಿರವವರು ರಿಚಾರ್ಜ್‌ ಅಥವಾ ಟಾಪ್‌ಅಪ್‌ ಮಾಡಲು ಬರುವುದಿಲ್ಲ. ಪೇಟಿಎಂ ಫಾಸ್ಟ್‌ಟ್ಯಾಗ್‌ ಹೊಂದಿರುವವರು ಹೆಚ್ಚಿನ ಹಣ ರಿಚಾರ್ಜ್‌ ಮಾಡಿಕೊಂಡಿದ್ದರೆ, ಆ ಹಣ ಖಾಲಿಯಾಗುವವರೆಗೆ ಬಳಸಬಹುದಾಗಿದೆ. ಅಂದರೆ, ಈಗಾಗಲೇ ರಿಚಾರ್ಜ್‌ ಮಾಡಿಕೊಂಡಿರುವ ಹಣವನ್ನು ಮಾರ್ಚ್‌ 15ರ ಬಳಿಕವೂ ಬಳಕೆ ಮಾಡಬಹುದಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಆದರೆ, ಮಾರ್ಚ್‌ 15ರ ನಂತರ ಹೊಸದಾಗಿ ರಿಚಾರ್ಜ್‌ ಮಾಡಲು ಆಗುವುದಿಲ್ಲ.

ಷೇರುಗಳ ಮೌಲ್ಯ ಶೇ.5ರಷ್ಟು ಕುಸಿತ

ಪೇಟಿಎಂ ವಿರುದ್ಧ ಆರ್‌ಬಿಐ ನಿರ್ಬಂಧ ಜಾರಿಯಾಗಲು ಕೆಲವೇ ಗಂಟೆಗಳು ಬಾಕಿ ಉಳಿದಿರುವ ಬೆನ್ನಲ್ಲೇ ಪೇಟಿಎಂ ಮಾತೃಸಂಸ್ಥೆ ಒನ್‌ 97 ಕಮ್ಯುನಿಕೇಷನ್ಸ್‌ ಷೇರುಗಳ ಮೌಲ್ಯವು ಗುರುವಾರ (ಮಾರ್ಚ್‌ 15) ಶೇ.4.98ರಷ್ಟು ಕುಸಿತವಾಗಿದೆ. ಬಿಎಸ್‌ಇಯಲ್ಲಿ ಷೇರಿನ ಮೌಲ್ಯ 334.35ಕ್ಕೆ ಕುಸಿದಿದೆ. ಕಳೆದ ನಾಲ್ಕು ದಿನಗಳಲ್ಲಿ ಷೇರುಗಳ ಮೌಲ್ಯವು ಶೇ.17ರಷ್ಟು ಕುಸಿತವಾಗಿದೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಪೇಟಿಎಂ ಷೇರುಗಳ ಮೌಲ್ಯವು 998 ರೂ. ಇತ್ತು. ಆರ್‌ಬಿಐ ನಿರ್ಬಂಧದ ಬಳಿಕ ಷೇರುಗಳ ಮೌಲ್ಯ ಗಣನೀಯವಾಗಿ ಕುಸಿದಿದ್ದು, ಸಾವಿರಾರು ಕೋಟಿ ರೂ. ನಷ್ಟವಾಗಿದೆ.

ಇದನ್ನೂ ಓದಿ: Paytm Fine: ನಿಷೇಧದ ಬೆನ್ನಲ್ಲೇ ಪೇಟಿಎಂಗೆ ಮತ್ತೊಂದು ಶಾಕ್‌, ಬಿತ್ತು 5.49 ಕೋಟಿ ರೂ. ದಂಡ

ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಆರ್‌ಬಿಐ ನಿರ್ಬಂಧ ಹೇರಿದೆ. ಒಂದೇ ಒಂದು ಪರ್ಮನೆಂಟ್​​ ಅಕೌಂಟ್​ ನಂಬರ್​ (ಪ್ಯಾನ್) ಮೂಲಕ 1,000 ಕ್ಕೂ ಹೆಚ್ಚು ಖಾತೆಗಳನ್ನು ಲಿಂಕ್ ಮಾಡಿರುವುದು ಕಂಡುಬಂದಿದೆ. ಆರ್​​ಬಿಐ ಮತ್ತು ಲೆಕ್ಕಪರಿಶೋಧಕರು ನಡೆಸಿದ ಪರಿಶೀಲನಾ ಪ್ರಕ್ರಿಯೆಗಳಲ್ಲಿ ಬ್ಯಾಂಕ್ ಸಲ್ಲಿಸಿದ ಮಾಹಿತಿ ತಪ್ಪಾಗಿದೆ ಎಂದು ತಿಳಿದುಬಂದಿತ್ತು. ಕೆಲವು ಖಾತೆಗಳನ್ನು ಅಕ್ರಮ ಹಣ ವರ್ಗಾವಣೆಗೆ ಬಳಸಿರಬಹುದು ಎಂದು ಆರ್​​ಬಿಐ ಕಳವಳ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ. ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡುವುದರ ಜೊತೆಗೆ, ಆರ್​​ಬಿಐ ತನ್ನ ಸಂಶೋಧನೆಗಳನ್ನು ಗೃಹ ಸಚಿವಾಲಯ ಮತ್ತು ಪ್ರಧಾನಿ ಕಚೇರಿಗೆ ಕಳುಹಿಸಿದೆ. ಇದಾದ ಬಳಿಕ ವಹಿವಾಟಿಗೆ ನಿರ್ಬಂಧ ಹೇರಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version