Site icon Vistara News

ಹೈವೇ ನಿರ್ಮಾಣದಲ್ಲಿ ಅದ್ಭುತ ಸಾಧನೆ; ಗಿನ್ನಿಸ್ ದಾಖಲೆ ಬರೆದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

NHAI

ನವ ದೆಹಲಿ: ಆಜಾದಿ ಕಾ ಅಮೃತ್‌ ಮಹೋತ್ಸವ್‌ ಸಂಭ್ರಮದಲ್ಲಿರುವ ಭಾರತವೀಗ ಸಾರಿಗೆ ಕ್ಷೇತ್ರದಲ್ಲೊಂದು ಹೊಸ ಸಾಧನೆ ಮಾಡಿ ಗಿನ್ನಿಸ್‌ ವಿಶ್ವ ದಾಖಲೆ ಬರೆದಿದೆ(NHAI created a Guinness World Record). ದೇಶದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI)ದಿಂದ ಮಹಾರಾಷ್ಟ್ರದ ಅಮರಾವತಿಯಿಂದ ಅಕೋಲಾದವರೆಗಿನ 75 ಕಿ. ಮೀಟರ್‌ ಉದ್ದದ ಹೆದ್ದಾರಿಯನ್ನು ಅತ್ಯಂತ ಕಡಿಮೆ ಅವಧಿ, ಅಂದರೆ 105 ಗಂಟೆ 33 ನಿಮಿಷಗಳಲ್ಲಿ ನಿರ್ಮಾಣ ಮಾಡಲಾಗಿದೆ. ಇಷ್ಟುದ್ದ ಹೆದ್ದಾರಿ ಕಟ್ಟುವ ಕೆಲಸ 2022ರ ಜೂನ್‌ 3ರಂದು ಮುಂಜಾನೆ 7 ಗಂಟೆಗೆ ಪ್ರಾರಂಭವಾಗಿತ್ತು. ಜೂ.7ರ ಸಂಜೆ ಸರಿಯಾಗಿ 5 ಗಂಟೆಗೆ ಮುಕ್ತಾಯವಾಗಿದೆ. ಅಂದಹಾಗೆ, ಇದು ರಾಷ್ಟ್ರೀಯ ಹೆದ್ದಾರಿ 53ರ ಅಭಿವೃದ್ಧಿ ಕಾಮಗಾರಿಯ ಒಂದು ಭಾಗವಾಗಿತ್ತು. ಗಿನ್ನಿಸ್‌ ದಾಖಲೆ ಸೃಷ್ಟಿಸಿದ ಈ ರಸ್ತೆ ನಿರ್ಮಾಣದಲ್ಲಿ NHAIನ 800 ಉದ್ಯೋಗಿಗಳು, ಖಾಸಗಿ ಕಂಪನಿಯೊಂದರ 720 ಉದ್ಯೋಗಿಗಳು ಮತ್ತು ಸ್ವತಂತ್ರ ಮಾರ್ಗದರ್ಶಕರು, ಸಲಹೆಗಾರರ ಶ್ರಮವಿದೆ.

ಈ ಸಂತೋಷದ ವಿಷಯವನ್ನು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಸಚಿವ ನಿತಿನ್‌ ಗಡ್ಕರಿ 3 ನಿಮಿಷಗಳ ವಿಡಿಯೊ ಮೂಲಕ ಹಂಚಿಕೊಂಡು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾರೆ. ʼ75 ಕಿ. ಮೀಟರ್‌ ಉದ್ದದ ಬಿಟುಮಿನಸ್ ಕಾಂಕ್ರೀಟ್ ಏಕಪಥ ಹೆದ್ದಾರಿಯನ್ನು ಅತ್ಯಂತ ಕಡಿಮೆ ಅವಧಿಯಲ್ಲಿ (Bituminous Concrete) ನಿರ್ಮಿಸಿ ಗಿನ್ನಿಸ್‌ ವಿಶ್ವ ದಾಖಲೆ ಪುಸ್ತಕ ಸೇರಲಾಗಿದೆ. ಇದು ಇಡೀ ದೇಶಕ್ಕೆ ಹೆಮ್ಮೆಯ ಕ್ಷಣ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಂಡ, ರಾಜಪಥ್‌ ಇನ್ಫ್ರಾಕಾನ್ ಪ್ರೈವೇಟ್‌ ಲಿಮಿಟೆಡ್‌ ಮತ್ತು ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಎಲ್ಲ ಸಲಹೆಗಾರರು, ಹಗಲಿರುಳು ಶ್ರಮಿಸಿದ ಎಂಜಿನಿಯರ್‌ಗಳು, ಕೆಲಸಗಾರರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳುʼ ಎಂದು ಹೇಳಿದ್ದಾರೆ. (ಹೆದ್ದಾರಿಗಳ ಮೇಲ್ಮೈ ಶಾಶ್ವತವಾಗಿ ಸಾಫಾಗಿರುವಂತೆ ಮಾಡಲು ಪೆಟ್ರೋಲಿಯಂ ಉಪ ಉತ್ಪನ್ನಗಳು ಮತ್ತು ಜಲ್ಲಿಕಲ್ಲುಗಳ ಮಿಶ್ರಣ ಮಾಡಿ ರಸ್ತೆಗೆ ಬಳಕೆ ಮಾಡುವುದನ್ನೇ ಬಿಟುಮಿನಸ್‌ ಕಾಂಕ್ರೀಟ್‌ ಎನ್ನಲಾಗುತ್ತದೆ.)

ರಾಷ್ಟ್ರೀಯ ಹೆದ್ದಾರಿ 53ರಲ್ಲಿ ಅಮರಾವತಿಯಿಂದ ಅಕೋಲಾದವರೆಗಿನ ರಸ್ತೆ ಸುಮಾರು 10 ವರ್ಷಗಳಿಂದಲೂ ದುಸ್ಥಿತಿಯಲ್ಲಿತ್ತು. ಅದರ ನಿರ್ಮಾಣ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಾಜಪಥ್‌ ಇನ್ಫ್ರಾಕಾನ್ ಪ್ರೈವೇಟ್‌ ಲಿಮಿಟೆಡ್‌ ಖಾಸಗಿ ಸಂಸ್ಥೆಯ ಸಹಯೋಗದೊಂದಿಗೆ ನಡೆಸಿದೆ. ಈ ಹಿಂದೆ ಸಾಂಗ್ಲಿಯಿಂದ ಸತಾರಾದವರೆಗಿನ 2.5 ಕಿಮೀ ರಸ್ತೆಯನ್ನು 24 ಗಂಟೆಯಲ್ಲಿ ನಿರ್ಮಾಣ ಮಾಡುವಲ್ಲೂ ಈ ಖಾಸಗಿ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ. ಹಾಗೇ, ರಾಷ್ಟ್ರೀಯ ಹೆದ್ದಾರಿ 53ರ ವಿಭಾಗಗಳಲ್ಲೇ ಅಮರಾವತಿ-ಅಕೋಲಾ ವಿಭಾಗ ಅತ್ಯಂತ ಮುಖ್ಯವಾಗಿದ್ದು, ಇದೊಂದು ಪೂರ್ವ-ಪಶ್ಚಿಮ ಕಾರಿಡಾರ್‌ ಆಗಿದೆ. ಈ ವಿಭಾಗ ಪ್ರಮುಖ ನಗರಗಳಾದ ಕೋಲ್ಕತ್ತ, ರಾಯ್‌ಪುರ, ನಾಗ್ಪುರ, ಧುಲೆ, ಸೂರತ್‌, ಅಕೋಲಾದ ಮೂಲಕ ಹಾದು ಹೋಗಿದೆ.

ಇದನ್ನೂ ಓದಿ:ಎಲೆಕ್ಟ್ರಿಕ್‌ ಸ್ಕೂಟರ್‌, ಕಾರು, ಬಸ್‌ ಆಯ್ತು; ಸದ್ಯವೇ ಬರಲಿದೆ ಟ್ರಕ್‌, ಟ್ರ್ಯಾಕ್ಟರ್‌!

Exit mobile version