ರಾಂಚಿ: ದೇಶದಲ್ಲಿ ಮಾವೋವಾದಿಗಳ (Maoists) ಉಪಟಳವನ್ನು ಸಂಪೂರ್ಣವಾಗಿ ನಿಗ್ರಹಿಸಲು ರಾಷ್ಟ್ರೀಯ ತನಿಖಾ ಸಂಸ್ಥೆಯು (NIA) ಕೂಡ ಜೈಜೋಡಿಸಿದ್ದು, ಜಾರ್ಖಂಡ್‌ನಲ್ಲಿ ಮಾವೋವಾದಿಗಳ ನಾಯಕ ರವಿಂದರ್ ಗಂಝು (Ravinder Ganjhu) ಎಂಬಾತನಿಗೆ ಸೇರಿದ ಆಸ್ತಿಯನ್ನು ಎನ್‌ಐಎ ಅಧಿಕಾರಿಗಳು ಬುಧವಾರ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಎನ್‌ಐಎ ಮಾಹಿತಿ ನೀಡಿದೆ.
ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಗೆ ಸೇರಿದ ನಾಯಕರ ಬಂಧನ, ಮಾವೋವಾದಿಗಳಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ಕೆಲವೇ ದಿನಗಳಲ್ಲಿ ರವಿಂದರ್ ಗಂಝು ಮನೆಯನ್ನು ಜಪ್ತಿ ಮಾಡಲಾಗಿದೆ ಎಂದು ಎನ್‌ಐಎ ತಿಳಿಸಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಮಾವೋವಾದಿಯ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಈತನು ಜನರು, ಉದ್ಯಮಿಗಳಿಂದ ಸುಲಿಗೆ ಮಾಡಿದ ಹಣದಿಂದ ಮನೆ ನಿರ್ಮಿಸಿದ್ದಾನೆ ಎಂದು ತಿಳಿದುಬಂದಿದೆ. ಈ ಮನೆಯನ್ನೂ ಈಗ ಎನ್‌ಐಎ ಜಪ್ತಿ ಮಾಡಿದೆ.
National Investigation Agency Attaches Immovable Property of Absconding top Maoist Leader Ravinder Ganjhu pic.twitter.com/2BP6LwCAtZ
— NIA India (@NIA_India) November 1, 2023
ರವಿಂದರ್ ಗಂಝು ಯಾರು?
ಜಾರ್ಖಂಡ್‌ನಲ್ಲಿ ರವಿಂದರ್ ಗಂಝು ಮಾವೋವಾದಿಗಳ ಪ್ರಮುಖ ನಾಯಕನಾಗಿದ್ದಾನೆ. ಈತನು ನಿಷೇಧಿತ ಸಿಪಿಐ (Maoist) ಸಂಘಟನೆಯ ಪ್ರಾದೇಶಿಕ ಸಮಿತಿ ಸದಸ್ಯನೂ ಆಗಿದ್ದಾನೆ. ಜಾರ್ಖಂಡ್ ರಾಜ್ಯಾದ್ಯಂತ ಹಲವು ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಸುಮಾರು 55 ಪ್ರಕರಣಗಳು ದಾಖಲಾಗಿವೆ. ಈತನು ಸುಲಿಗೆ, ದರೋಡೆ ಸೇರಿ ಹಲವು ಪ್ರಕರಣಗಳಲ್ಲಿ ಪೊಲೀಸರ ವಾಂಟೆಡ್ ಲಿಸ್ಟ್‌ನಲ್ಲಿದ್ದಾನೆ.
ಇದನ್ನೂ ಓದಿ: IED Recovered: ಬಿಹಾರದ ಮಾವೋವಾದಿ ಪ್ರಾಬಲ್ಯದ ಪ್ರದೇಶದಲ್ಲಿ 162 ಸ್ಫೋಟಕ ವಶ, ತಪ್ಪಿದ ಭಾರಿ ಅನಾಹುತ
ರವಿಂದರ್ ಗಂಝು ರಾಜ್ಯದಲ್ಲಿ ಎಸಗುವ ಅಪಾಯಕಾರಿ ಕೃತ್ಯಗಳ ಕುರಿತು ಅರಿತ ರಾಜ್ಯ ಸರ್ಕಾರ ಹಾಗೂ ಎನ್‌ಐಎ ಈತನ ಬಗ್ಗೆ ಸುಳಿವು ನೀಡಿದವರಿಗೆ ನಗದು ಬಹುಮಾನ ಘೋಷಿಸಿದೆ. ತಲೆಮರೆಸಿಕೊಂಡಿರುವ ರವಿಂದರ್ ಗಂಝು ಬಗೆಗ ಸುಳಿವು ಅಥವಾ ಮಾಹಿತಿ ನೀಡಿದವರಿಗೆ 15 ಲಕ್ಷ ರೂ. ನಗದು ಬಹುಮಾನ ನೀಡಲಾಗುವುದು ಎಂದು ಜಾರ್ಖಂಡ್ ಸರ್ಕಾರ ಘೋಷಿಸಿದೆ. ಅಲ್ಲದೆ, ಎನ್‌ಐಎ ಕೂಡ ಹೆಚ್ಚುವರಿಯಾಗಿ 5 ಲಕ್ಷ ರೂ. ಘೋಷಿಸಿದೆ. ದೇಶದಲ್ಲಿ ಎರಡು ವರ್ಷಗಳ ಅವಧಿಯಲ್ಲಿ ಎಡಪಂಥೀಯ ಉಗ್ರವಾದವನ್ನು ನಿರ್ನಾಮಗೊಳಿಸಲಾಗುವುದು ಎಂದು ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ