ಭೋಪಾಲ್: ಮಧ್ಯಪ್ರದೇಶದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು (NIC) ಜಂಟಿ ಕಾರ್ಯಾಚರಣೆ ನಡೆಸಿ ಐಸಿಸ್ ಉಗ್ರರ ಜಾಲವೊಂದನ್ನು (NIA Raid) ಭೇದಿಸಿದೆ. ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ಮಧ್ಯಪ್ರದೇಶ ಉಗ್ರ ನಿಗ್ರಹ ದಳದ (ATS) ಜತೆಗೂಡಿ ಎನ್‌ಐಎ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಜಬಲ್ಪುರದಲ್ಲಿ ಮೂವರನ್ನು ಬಂಧಿಸಿದೆ. ಮೂವರೂ ಭಾರತದಲ್ಲಿ ಐಸಿಸ್ ದಾಳಿಗೆ ಪಿತೂರಿ ನಡೆಸುತ್ತಿದ್ದರು ಎಂದು ಎನ್‌ಐಎ ತಿಳಿಸಿದೆ.
ಮೇ 26 ಹಾಗೂ 27ರಂದು ಎನ್‌ಐಎ ಜಬಲ್ಪುರದ 13 ಕಡೆ ದಾಳಿ ನಡೆಸಿದ್ದು, ಇದೇ ವೇಳೆ ಸೈಯದ್ ಮಮೂರ್ ಅಲಿ, ಮೊಹಮ್ಮದ್ ಆದಿಲ್ ಖಾನ್ ಹಾಗೂ ಮೊಹಮ್ಮದ್ ಶಾಹಿದ್ ಎಂಬುವರನ್ನು ಬಂಧಿಸಲಾಗಿದೆ. ಇವರ ಬಳಿ ಶಸ್ತ್ರಾಸ್ತ್ರ, ದಾಖಲೆ ಹಾಗೂ ಡಿಜಿಟಲ್ ಡಿವೈಸ್‌ಗಳು ಸಿಕ್ಕಿವೆ. ಶೀಘ್ರದಲ್ಲೇ ಇವರನ್ನು ಎನ್‌ಐಎ ವಿಶೇಷ ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಐಸಿಸ್ ಪರ ಚಟುವಟಿಕೆಗಳಲ್ಲಿ ತೊಡಗಿದ್ದ ಮೊಹಮ್ಮದ್ ಆದಿಲ್ ಖಾನ್ ಮೇಲೆ ಎನ್‌ಐಎ ಕಳೆದ ವರ್ಷದಿಂದಲೂ ನಿಗಾ ವಹಿಸಿತ್ತು. ಹಾಗೆಯೇ, ಆತನ ವಿರುದ್ಧ ಮೇ 24ರಂದು ಪ್ರಕರಣ ದಾಖಲಿಸಲಾಗಿತ್ತು. ಸಾಮಾಜಿಕ ಜಾಲತಾಣಗಳ ಮೂಲಕ ಐಸಿಸ್ ವಿಚಾರಧಾರೆಗಳನ್ನು ಹರಡುವುದು, ಯುವಕರನ್ನು ಉಗ್ರ ಸಂಘಟನೆಗೆ ಸೆಳೆಯುವುದು ಸೇರಿ ಹಲವು ಚಟುವಟಿಕೆಗಳಲ್ಲಿ ನಿರತನಾಗಿದ್ದ. ಇವನಿಗೆ ಸಹಚರರು ಕೂಡ ಇದ್ದರು ಎಂದು ತಿಳಿದುಬಂದಿದೆ. ಅದರಂತೆ, ಎನ್‌ಐಎ ದಾಳಿ ನಡೆಸಿ ಬಂಧಿಸಿದೆ.
ಭಾರತದಲ್ಲಿ ಐಸಿಸ್ ಉಗ್ರರ ದಾಳಿಗೆ ಸಂಚು ರೂಪಿಸಲು ಬಂಧಿತರು ನೆರವು ನೀಡುತ್ತಿದ್ದರು. ಇದಕ್ಕಾಗಿ ಅವರು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದರು. ಹಾಗೆಯೇ, ಮಸೀದಿಗಳು ಹಾಗೂ ಮನೆಗಳಲ್ಲಿ ಸಾಲು ಸಾಲು ಸಭೆ ನಡೆಸುತ್ತಿದ್ದರು. ಅದರಲ್ಲೂ, ಬಂಧಿತ ಮೂವರು ಮೂಲಭೂತವಾದವನ್ನು ಪಸರಿಸಲು ಪಿತೂರಿ ನಡೆಸುತ್ತಿದ್ದರು. ಯುವಕರನ್ನು ಉಗ್ರ ಚಟುವಟಿಕೆಗಳತ್ತ ಸೆಳೆಯುವ ಜತೆಗೆ ಶಸ್ತ್ರಾಸ್ತ್ರಗಳ ಸಂಗ್ರಹದಲ್ಲೂ ಇವರು ತೊಡಗಿದ್ದರು ಎಂದು ಎನ್‌ಐಎ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಕಾರಾಗೃಹದ ಮೇಲೆ ದಾಳಿ ಮಾಡಿದ್ದ ಪೊಲೀಸ್ ವೇಷಧಾರಿ ತಲೆಗೆ 10 ಲಕ್ಷ ರೂ. ಬಹುಮಾನ ಘೋಷಿಸಿದ ಎನ್‌ಐಎ
ಮೂವರಲ್ಲಿ ಸೈಯದ್ ಮಮೂರ್ ಅಲಿಯು ಸ್ಥಳೀಯವಾಗಿ ಫಿಸ್‌ಬಿಲ್ಲಾಹ್ ಎಂಬ ತಂಡವನ್ನು ಕಟ್ಟಿದ್ದ. ಹಾಗೆಯೇ, ವಾಟ್ಸ್‌ಆ್ಯಪ್ ಗ್ರೂಪ್ ಮೂಲಕವೂ ಮೂಲಭೂತವಾದ ಹರಡುತ್ತಿದ್ದ. ಆದಿಲ್‌ನು ಸಮಾನ ಮನಸ್ಕ ಯುವಕರನ್ನು ಒಗ್ಗೂಡಿಸುತ್ತಿದ್ದ. ಅಕ್ರಮವಾಗಿ ಶಸ್ತ್ರಾಸ್ತ್ರ ಸಾಗಿಸುವವರ ಜತೆಗೂ ಇವರು ಸಂಪರ್ಕ ಹೊಂದಿದ್ದರು ಎಂದು ಎನ್‌ಐಎ ಮಾಹಿತಿ ನೀಡಿದೆ.