ನವದೆಹಲಿ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ರಾಷ್ಟ್ರೀಯ ಸಂಚಾಲಕನಾಗಿದ್ದ ಇಬ್ರಾಹಿಂ ಪುಥಾನಿತಾನಿ ವಿರುದ್ಧ, ಕೆಡರ್‌ಗೆ ಶಸ್ತ್ರಾಸ್ತ್ರ ತರಬೇತಿ ನೀಡಿದ ಆರೋಪವನ್ನು ಎನ್ಐಎ ಹೊರಿಸಿದೆ(NIA Charges). ಭಾರತೀಯ ದಂಡ ಸಂಹಿತೆ(IPC)ಯ ವಿವಿಧ ಸೆಕ್ಷನ್‌ಗಳು ಮತ್ತು ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ಆರೋಪಪಟ್ಟಿ ಸಲ್ಲಿಸಲಾಗಿದೆ(Charge sheet). ತನಿಖೆಯ ವೇಳೆ, ದೇಶದ ವಿವಿಧ ಭಾಗಗಳಲ್ಲಿ ದೈಹಿಕ ಶಿಕ್ಷಣದ ಹೆಸರಿನಲ್ಲಿ ಯುವಕರಿಗೆ ವ್ಯವಸ್ಥಿತವಾಗಿ ಶಸ್ತ್ರಾಸ್ತ್ರ ತರಬೇತಿಯನ್ನು ನೀಡಲಾಗುತ್ತಿತ್ತು ಎಂಬ ಸಂಗತಿ ಬಯಲಾಗಿತ್ತು.
ನಿಷೇಧಿತ ಉಗ್ರ ಸಂಘಟನೆಯ ಪರವಾಗಿ ಆರೋಪಿ ಇಬ್ರಾಹಿಂ ಪುಥಾನಿತಾನಿ ದೇಶದ ವಿವಿಧ ಭಾಗಗಳಲ್ಲಿ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದ. ಅಲ್ಲದೇ, ಅಡ್ವಾನ್ಸಡ್ ಫಿಜಿಕಲ್ ಮತ್ತು ಆರ್ಮ್ಸ್ ಟ್ರೈನಿಂಗ್ ಕೋರ್ಸ್‌ಗಳ ಪಠ್ಯವನ್ನು ಆತ ವಿನ್ಯಾಸ ಮಾಡಿದ್ದ. ಶಸ್ತ್ರಾಸ್ತ್ರ ತರಬೇತಿ ಶಿಬಿರಗಳ ಮೇಲ್ವಿಚಾರಣೆ ಮತ್ತು ಸಮನ್ವಯ ಮಾಡುವುದಕ್ಕೆ ಇಬ್ರಾಹಿಂ ದೇಶಾದ್ಯಂತ ಪ್ರಯಾಣ ಮಾಡುತ್ತಿದ್ದ ಎಂಬ ಸಂಗತಿ ತನಿಖೆ ವೇಳೆ ಗೊತ್ತಾಗಿದೆ. ಆತನ ವಿರುದ್ಧ ಐಪಿಸಿಯ 120ಬಿ, 121ಎ, 122, 153ಎ ಮತ್ತು ಯುಎಪಿಎಯ ಸೆಕ್ಷನ್ 13, 18, 18ಎ, ಮತ್ತು 18ಬಿ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ಮಾರ್ಚ್ 18ರಂದು ಎನ್ಐಎ, ಪಿಎಫ್ಐನ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ಹಿರಿಯ ಕೆಡರ್‌ಗಳ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಲಾಗಿತ್ತು. ಎನ್ಐಎ ತನ್ನ 5ನೇ ಚಾರ್ಜ್‌ಶೀಟ್‌ನಲ್ಲಿ ಪಿಎಫ್ಐನ ಹಿರಿಯ ನಾಯಕರು, ಸಂಸ್ಥಾಪಕ ಸದಸ್ಯರು ಹಾಗೂ ರಾಷ್ಟ್ರೀಯ 12 ರಾಷ್ಟ್ರೀಯ ಕಾರ್ಯಕಾರಿ ಸಮಿತಿಯು ಸೇರಿದಂತೆ 19 ಜನರ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಿತ್ತು.
ಎನ್ಐಎ ಸಲ್ಲಿಸಿದ 5ನೇ ಚಾರ್ಜ್‌ಶೀಟ್‌ನಲ್ಲಿ ಏನಿದೆ?
ನಿಷೇಧಿತ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ(PFI) ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ(NIA) 5ನೇ ಚಾರ್ಜ್‌ಶೀಟ್ ಸಲ್ಲಿಸಿದೆ. ಈ ಹೊಸ ದೋಷಾರೋಪ ಪಟ್ಟಿಯಲ್ಲಿ ಪಿಎಫ್ಐನ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ 12 ಸದಸ್ಯರನ್ನು ಹೆಸರಿಸಿದೆ. ಇದೇ ವೇಳೆ, ಪಿಎಫ್ಐಗೆ ಸೇರಿದ 37 ಖಾತೆ ಸೇರಿದಂತೆ 77 ಖಾತೆಗಳನ್ನು ರದ್ದು ಮಾಡಿದೆ. ಈ ಖಾತೆಗಳ ಮೂಲಕ ಉಗ್ರ ಕೃತ್ಯಗಳಿಗೆ ಹಣ ರವಾನೆಯಾಗುತ್ತಿತ್ತು ಎಂದು ಎನ್ಐಎ ತನ್ನ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ(NIA Chargesheet).
ಇದರೊಂದಿಗೆ ಪಿಎಫ್ಐ ತರಬೇತಿ ಪಡೆದ ಸೇನಾಪಡೆಯನ್ನು ರಚಿಸುವ ಮತ್ತು ಭಯೋತ್ಪಾದನೆ ಮತ್ತು ಹಿಂಸಾಚಾರದ ಕೃತ್ಯಗಳನ್ನು ನಡೆಸುವ ಯೋಜನೆಗಳನ್ನು ವಿಫಲಗೊಳಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ತನ್ನ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದೆ. 12 ಎನ್‌ಇಸಿ ಸದಸ್ಯರು, ಸ್ಥಾಪಕ ಸದಸ್ಯರು ಮತ್ತು ಹಿರಿಯ ನಾಯಕರು ಸೇರಿದಂತೆ ಪಿಎಫ್‌ಐನ 19 ಜನರ ವಿರುದ್ಧ ಆರೋಪಗಳನ್ನು ಎನ್ಐಎ ಹೊರಿಸಿದೆ.
ಇದನ್ನೂ ಓದಿ: ಕೇರಳ, ಕರ್ನಾಟಕದಲ್ಲಿ ಐವರು ನಿಷೇಧಿತ ಪಿಎಫ್ಐ ಸದಸ್ಯರನ್ನು ಬಂಧಿಸಿದ ಎನ್ಐಎ
ದೇಶವನ್ನು ಅಸ್ಥಿರಗೊಳಿಸುವ ಮತ್ತು ಛಿದ್ರಗೊಳಿಸುವ ಅಪರಾಧದ ಸಂಚನ್ನು ಈ ಸಂಘಟನೆ ಹೊಂದಿತ್ತು. ಸಂಘಟನೆಯು ಉಗ್ರ ಕೃತ್ಯಗಳಿಗೆ ಧನ ಸಹಾಯ ಮಾಡುತ್ತಿತ್ತು. ದೇಶಾದ್ಯಂತ ಶಸ್ತ್ರಾಸ್ತ್ರ ತರಬೇತುದಾರನ್ನು ಒಳಗೊಂಡಿತ್ತು. ಈ ಎಲ್ಲದಕ್ಕೆ ಸಂಘಟನೆಯು ಸ್ಯಾಲರಿ ರೂಪದಲ್ಲಿ ಹಣವನ್ನು ನಗದು ರೂಪದಲ್ಲಿ ಮತ್ತು ಬ್ಯಾಂಕ್ ಖಾತೆಗಳ ಮೂಲಕ ಪಾವತಿಸುತ್ತಿತ್ತು ಎಂದು ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.
ಗುವಾಹಟಿ(ಅಸ್ಸಾಮ್, ಸುದಿಪುರ್(ಪಶ್ಚಿಮ ಬಂಗಾಳ), ಇಂಫಾಲ್(ಮಣಿಪುರ್), ಕೊಯಿಕ್ಕೋಡ್(ಕೇರಳ), ಚೆನ್ನೈ(ತಮಿಳುನಾಡು), ನವದೆಹಲಿ, ಜೈಪುರ(ರಾಜಸ್ಥಾನ), ಬೆಂಗಳೂರು(ಕರ್ನಾಟಕ), ಹೈದ್ರಾಬಾದ್(ತೆಲಂಗಾಣ) ಮತ್ತು ಕರ್ನೂಲ್(ಆಂಧ್ರಪ್ರದೇಶ) ಸೇರಿದಂತೆ ವಿವಿಧಡೆ ಇರುವ ಬ್ಯಾಂಕ್ ಖಾತೆಗಳನ್ನು ಸ್ಥಗಿತೊಳಿಸಲಾಗಿದೆ.