ಪಟನಾ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರವನ್ನು ಸ್ಫೋಟಿಸುವ ಕುರಿತು ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI)ದ ಮೂವರು ಶಂಕಿತರನ್ನು (PFI Suspects Detained) ವಶಪಡಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಬಿಹಾರದ ಮೋತಿಹಾರಿ ಜಿಲ್ಲೆಯ ಕೌನ್ವಾನ್ ಎಂಬ ಗ್ರಾಮದಲ್ಲಿ ಮೂವರು ಆರೋಪಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ರಾಮಲಲ್ಲಾ ಮೂರ್ತಿ ನಿರ್ಮಾಣಕ್ಕಾಗಿ ನೇಪಾಳದಿಂದ ವಿಶೇಷ ಶಿಲೆಗಳನ್ನು ಬಿಹಾರದ ಮೋತಿಹಾರಿ ಮೂಲಕ ಸಾಗಿಸುವಾಗ ಉಸ್ಮಾನ್ ಎಂಬ ವ್ಯಕ್ತಿಯು ಫೇಸ್‌ಬುಕ್ ಲೈವ್ ಬಂದು ರಾಮಮಂದಿರವನ್ನು ಸ್ಫೋಟಿಸುವ ಬೆದರಿಕೆ ಹಾಕಿದ್ದ. ರಾಮಮಂದಿರವನ್ನು ಸ್ಫೋಟಿಸಿ, ಆ ಜಾಗದಲ್ಲಿ ಮಸೀದಿ ನಿರ್ಮಿಸಲಾಗುತ್ತದೆ ಎಂದೆಲ್ಲ ಹೇಳಿದ್ದ. ಇದರಿಂದಾಗಿ ಎನ್‌ಐಎ ಹಾಗೂ ಬಿಹಾರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮೂವರು ಶಂಕಿತರನ್ನು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Ayodhya Ram Mandir: ಅಯೋಧ್ಯೆ ರಾಮಮಂದಿರ ಸ್ಫೋಟಿಸುವುದಾಗಿ ಬೆದರಿಕೆ; ಭದ್ರತೆಗೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜನೆ
ಮೂವರು ಶಂಕಿತರಲ್ಲಿ ಇಬ್ಬರನ್ನು ರಿಯಾಜ್ ಮಾರಿಫ್ ಅಲಿಯಾಸ್ ಬಬ್ಲು ಹಾಗೂ ಮೊಹಮ್ಮದ್ ಯಾಕೂಬ್ ಎಂಬುದಾಗಿ ಗುರುತಿಸಲಾಗಿದೆ ಎಂದು ತಿಳಿದುಬಂದಿದೆ. ಉಗ್ರ ಕೃತ್ಯಗಳು ಹಾಗೂ ಉಗ್ರರಿಗೆ ನೆರವು ಸೇರಿ ಹಲವು ಪ್ರಕರಣಗಳಲ್ಲಿ ೨೦೨೨ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿದೆ. ಹೀಗಿದ್ದರೂ, ದೇಶದ ಕೆಲವೆಡೆ ಸಂಘಟನೆಯ ಕಾರ್ಯಕರ್ತರು ಸಕ್ರಿಯರಾಗಿದ್ದಾರೆ ಎಂದು ತಿಳಿದುಬಂದಿದೆ.