Site icon Vistara News

NIA Raids: ಐಸಿಸ್‌ನ 8 ಶಂಕಿತರನ್ನು ಹೆಡೆಮುರಿ ಕಟ್ಟಿದ ಎನ್‌ಐಎ! ಭಾರೀ ಸ್ಫೋಟಕ್ಕೆ ಸಿದ್ಧವಾಗಿದ್ದ ಬಳ್ಳಾರಿ ಘಟಕ

Blast in Bengaluru NIA Arrest

ನವದೆಹಲಿ: ಶಂಕಿತರ ಉಗ್ರರನ್ನು ಬೇಟೆಯಾಡುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(NIA)ಯು ಸೋಮವಾರ ಕರ್ನಾಟಕದ ಬಳ್ಳಾರಿ(Ballari) ಮತ್ತು ಬೆಂಗಳೂರು(Bengaluru) ಸೇರಿದಂತೆ ನಾಲ್ಕು ರಾಜ್ಯಗಳ 19 ಸ್ಥಳಗಳಲ್ಲಿ ದಾಳಿ ಮಾಡಿ, ಐಸಿಸ್ ಬಳ್ಳಾರಿ ಘಟಕದ (ISIS Ballari module) ಎಂಟು ಶಂಕಿತ ಉಗ್ರರನ್ನು ಬಂಧಿಸಿದೆ(Suspected Arrest). ಬಂಧಿತರ ಪೈಕಿ ಈ ಘಟಕದ ನಾಯಕ ಮಿನಾಜ್ ಅಲಿಯಾಸ್ ಎಂಡಿ ಸುಲೈಮಾನ್, ಉಗ್ರ ಕೃತ್ಯಗಳನ್ನು ನಡೆಸಲು ಮುಂದಾಗಿದ್ದ, ಅದನ್ನು ವಿಫಲಗೊಳಿಸಲಾಗಿದೆ ಎಂದು ಎನ್ಐಎ ಹೇಳಿದೆ(NIA Raids).

ದಾಳಿಯ ವೇಳೆ, ಸಲ್ಫರ್, ಪೊಟ್ಯಾಸಿಯಮ್ ನೈಟ್ರೇಟ್, ಇದ್ದಿಲು, ಗನ್‌ಪೌಡರ್, ಸಕ್ಕರೆ ಮತ್ತು ಎಥೆನಾಲ್‌ನಂತಹ ಸ್ಫೋಟಕ ಕಚ್ಚಾ ಸಾಮಗ್ರಿಗಳು, ಹರಿತವಾದ ಆಯುಧಗಳು, ಲೆಕ್ಕವಿಲ್ಲದ ನಗದು ಮತ್ತು ದಾಖಲೆಗಳು, ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ತಿಳಿಸಿದೆ.

ಗುಂಪಿನ ಹಲವಾರು ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ಸಂಸ್ಥೆ ಅವರಿಗಾಗಿ ಹುಡುಕಾಟವನ್ನು ಪ್ರಾರಂಭಿಸಿತು. ಹಲವಾರು ಶಂಕಿತ ಸದಸ್ಯರೊಂದಿಗೆ ಸಂಪರ್ಕ ಹೊಂದಿದ ಆವರಣದ ಮೇಲೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲೆಲ್ಲಿ ಎನ್ಐಎ ದಾಳಿ?

ಎನ್ಐಎ ತಂಡಗಳು ಕರ್ನಾಟಕದ ಬಳ್ಳಾರಿ ಮತ್ತು ಬೆಂಗಳೂರಿನಾದ್ಯಂತ ಹರಡಿರುವ 19 ಸ್ಥಳಗಳಲ್ಲಿ ದಾಳಿ ನಡೆಸಿವೆ; ಮಹಾರಾಷ್ಟ್ರದ ಅಮರಾವತಿ, ಮುಂಬೈ ಮತ್ತು ಪುಣೆ, ಜಾರ್ಖಂಡ್‌ನ ಜಮ್ಶೆಡ್‌ಪುರ ಮತ್ತು ಬೊಕಾರೊ, ದಿಲ್ಲಿಯಲ್ಲಿ ಶೋಧ ನಡೆಸಲಾಗಿದೆ.

ದಾಳಿಯ ಸಮಯದಲ್ಲಿ ಬಂಧಿಸಲಾದ ಎಂಟು ಐಸಿಸ್ ಏಜೆಂಟ್‌ಗಳು ಭಯೋತ್ಪಾದನೆ-ಸಂಬಂಧಿತ ಕೃತ್ಯಗಳು ಮತ್ತು ನಿಷೇಧಿತ ಸಂಘಟನೆಯಾದ ಐಸಿಸ್‌ನ ಚಟುವಟಿಕೆಗಳನ್ನು ಸಕ್ರಿಯವಾಗಿ ಉತ್ತೇಜಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಮಿನಾಜ್ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತನಿಖಾ ಸಂಸ್ಥೆ ಹೇಳಿದೆ.

ಬಂಧಿತರನ್ನು ಬಳ್ಳಾರಿಯ ಮಿನಾಜ್ ಮತ್ತು ಸೈಯದ್ ಸಮೀರ್ ಎಂದು ಗುರುತಿಸಲಾಗಿದೆ. ಮುಂಬೈನಿಂದ ಅನಸ್ ಇಕ್ಬಾಲ್ ಶೇಖ್, ಮೊಹಮ್ಮದ್ ಮುನಿರುದ್ದೀನ್, ಸೈಯದ್ ಸಮೀವುಲ್ಲಾ ಅಲಿಯಾಸ್ ಸಮಿ ಮತ್ತು ಬೆಂಗಳೂರಿನ ಎಂಡಿ ಮುಝಮ್ಮಿಲ್ ಬಂಧಿತರು ಇತರರು. ದಿಲ್ಲಿ ಮೂಲದ ಶಯಾನ್ ರೆಹಮಾನ್ ಅಲಿಯಾಸ್ ಹುಸೇನ್, ಮೊಹಮ್ಮದ್ ಶಹಬಾಜ್ ಅಲಿಯಾಸ್ ಜುಲ್ಫಿಕರ್ ಅಲಿಯಾಸ್ ಗುಡ್ಡು ಜೆಮ್ಶೆಡ್‌ಪುರದ ಬಂಧಿತ ವ್ಯಕ್ತಿಗಳಾಗಿದ್ದಾರೆ.

ಆಫ್ಘಾನಿಸ್ತಾನಕ್ಕೆ ಹಾರಲು ಸಿದ್ದರಾಗಿದ್ದವರ ಸೆರೆ!

ಇತ್ತೀಚೆಗೆ ಹೈದ್ರಬಾದ್‌ನಲ್ಲಿ ಯುಎಪಿಎ ಹಾಗೂ ಕ್ರಿಮಿನಲ್ ಒಳಸಂಚಿನಡಿ ಪ್ರಕರಣ ದಾಖಲಿಸಿದ್ದ ಎನ್ ಐ ಎ ಅಧಿಕಾರಿಗಳು ಶಂಕಿತರನ್ನು ವಿಚಾರಣೆ ನಡೆಸಿದ್ದರು. ವಿಚಾರಣೆಯಲ್ಲೇ ಗೊತ್ತಾಗಿದ್ದು, ನೋಡಿ ಬೆಂಗಳೂರು ಹಾಗೂ ಬಳ್ಳಾರಿಯ ಲಿಂಕ್. ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕೃತಿ ನಗರದ ಸಂಪತ್ ಎಂಬುವರ ಮನೆಯಲ್ಲಿ ಬಾಡಿಗೆಗಿದ್ದ ಶಮೀವುಲ್ಲಾನೆ ಎನ್ ಐ ಎ ಟಾರ್ಗೆಟ್ ಆಗಿದ್ದ. ಸಿಂಗಲ್ ಬಿಎಚ್ ಕೆ ಮನೆಯಲ್ಲಿ ಶಮೀವುಲ್ಲಾ ಜೊತೆ ಅಲ್ತಾಫ್, ಮಿಸ್ಬಾ ಹಾಗೂ ಮುನಿರುದ್ದೀನ್ ವಾಸವಿದ್ದು, ಜಿಹಾದ್, ಖಿಲಾಪತ್ ಹಾಗೂ ಐಸಿಸ್ ಮಾದರಿಯಲ್ಲಿ ವಿಧಂಸಕ‌ ಕೃತ್ಯವೆಸಗಲು ಪ್ಲಾನ್ ಮಾಡಿದ್ರು.

ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಆಧಾರದ ಮೇಲೆ ಸೋಮವಾರ ಬೆಳಗ್ಗೆ 5.30ರ ಸುಮಾರಿಗೆ ದಾಳಿ ನಡೆಸಿದ ಎನ್ಐಎ ತಂಡ. ಶಮೀವುಲ್ಲಾ ಐಇಡಿ ತಯಾರಿಕೆಗೆ ಸಿದ್ದಮಾಡಿಟ್ಟುಕೊಂಡಿದ್ದ. 7 ಕೆಜಿ ತೂಕದ ಸೋಡಿಯಂ ನೈಟ್ರೇಟ್ , ಪೊಟಷಿಯಂ, ಗಬ್ ಪೌಡರ್ ಹಾಗೂ ಎಥೆನಾಲ್ ವಶಪಡಿಸಿಕೊಂಡಿದ್ದಾರೆ. ಇನ್ನು ಶಮಿವುಲ್ಲಾ ಎಲ್ ಎಲ್ ಬಿ ಮಾಡಿದ್ರೆ, ಅಲ್ತಾಫ್ ಪೀಣ್ಯದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾನೆ. ಮುನಿರುದ್ದೀನ್ ಇಂಜಿನಿಯರಿಂಗ್ ಮಾಡ್ತಿದ್ದು, ಮಿಸ್ಬಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದು, ಎನ್‌ಐಎ ನಾಲ್ವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದೆ.

ಪಿಎಫ್ಐನ 8 ಮಂದಿಯ ಮನೆ ಮೇಲೆ ದಾಳಿ

ಇದರ ಜೊತೆಗೆ ಬಳ್ಳಾರಿಯಲ್ಲಿ ಕಾರ್ಯಾಚರಣೆ ನಡೆಸಿದ 9 ಎನ್ ಐ ಎ ತಂಡಗಳು ನಿಷೇಧಿತ ಪಿಎಫ್‌ಐನ 8 ಮಂದಿಯ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಬಳ್ಳಾರಿಯ ಮಾಜಿ ಪಿಎಫ್‌ಐ ಪ್ರಧಾನ ಕಾರ್ಯದರ್ಶಿ ಸುಲೇಮಾನ್ ಮನೆ, ಸೂಫಿಯಾನ್ ಆಗಿ ಕನ್ವರ್ಟ್ ಆಗಿದ್ದ ನಿಖಿಲ್, ಅಜಾಜ್ ಅಹ್ಮದ್, ಸುಲೇಮಾನ್, ತಬ್ರೇಜ್, ಮುಜಾಮಿಲ್, ಎಂಬುವರು ಮನೆ ಮೇಲೆ ದಾಳಿ ನಡೆಸಿ ಏಳು ಮಂದಿಯನ್ನ ವಶಕ್ಕೆ ಪಡೆಯಲಾಗಿದೆ. ಸುಲೇಮಾನ್ ಈ ಹಿಂದೆ ಪಿಎಫ್ ಐ ನ ಜನರಲ್ ಸೆಕ್ರೆಟ್ರಿ ಆಗಿದ್ದ ಬಗ್ಗೆ ಸಹ ತನಿಖೆಯಲ್ಲಿ ಗೊತ್ತಾಗಿದೆ. ಆಫ್ಘಾನಿಸ್ತಾನಕ್ಕೆ ಹೋಗಿ ಕಾನೂನುಬಾಹಿರ ಚಟುವಟಿಕೆಗಳನ್ನು ಮಾಡಲು ಯೋಜನೆ ರೂಪಿಸಿರೋದು ಸಹ ತನಿಖೆಯಲ್ಲಿ ಗೊತ್ತಾಗಿದೆ.

ಈ ಸುದ್ದಿಯನ್ನೂ ಓದಿ: NIA Raid: ಬೆಂಗಳೂರಿನಲ್ಲಿ ಮತ್ತೆ ಎನ್‌ಐಎ 20 ಕಡೆ ದಾಳಿ; ಶಂಕಿತ ಉಗ್ರನ ಲಿಂಕೇ ಆಧಾರ

ಆರೋಪಿಗಳು ಎನ್‌ಕ್ರಿಪ್ಟ್ ಮಾಡಿದ ಅಪ್ಲಿಕೇಶನ್‌ಗಳ ಮೂಲಕ ನಿರಂತರವಾಗಿ ಉಗ್ರ ಸಂಘಟನೆಗಳ ಸಂಪರ್ಕದಲ್ಲಿದ್ದರೆಂದು ತಿಳಿದು ಬಂದಿದ್ದು, ಕಾಲೇಜು ವಿದ್ಯಾರ್ಥಿಗಳನ್ನ ಉಗ್ರ ಸಂಘಟನೆಗಳನ್ನ ಸೆಳೆಯಲು ಪ್ರಚೋದನೆ ನೀಡುತ್ತಿದ್ದರೆಂದು ತಿಳಿದು ಬಂದಿದೆ.‌ಸದ್ಯ ಆರೋಪಿಗಳಮೊಬೈಲ್ ಹಾಗೂ ಲ್ಯಾಪ್ ಟಾಪ್ ಗಳು ಸೇರಿದಂತೆ ಮನೆಯಲ್ಲಿ ಪತ್ತೆಯಾದ ಕೆಲ ದಾಖಲೆಗಳನ್ನ ವಶಕ್ಕೆ ಪಡೆದಿರೋ ಎನ್ ಐಎ ತನಿಖೆ ಮುಂದುವರೆಸಿದ್ದು, ತನಿಖೆ ವೇಳೆ ಮತ್ಯಾರು ಪತ್ತೆಯಾಗ್ತಾರೋ ನೋಡ್ಬೇಕು.

ಈ ಸುದ್ದಿಯ ಬಗ್ಗೆ ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮಾಡಿ ತಿಳಿಸಿ.

Exit mobile version