ನವ ದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ಸಂಘಟನೆಗೆ ಸಂಪರ್ಕ ಇರುವ ಹಲವು ರಾಜ್ಯಗಳಲ್ಲಿ ಇಂದು ರಾಷ್ಟ್ರೀಯ ತನಿಖಾ ದಳ (NIA) ದಾಳಿ ನಡೆಸಿದೆ. ಉತ್ತರ ಪ್ರದೇಶ, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು ಸೇರಿ 13 ರಾಜ್ಯಗಳಲ್ಲಿ ಎನ್‌ಐಎ ಮಿಂಚಿನ ದಾಳಿ ನಡೆಸಿದೆ. ಪಿಎಫ್ಐನ ಪ್ರಮುಖ ನಾಯಕರು, ಕಾರ್ಯಕಾರಿಗಳು ಸೇರಿ 100ಕ್ಕೂ ಹೆಚ್ಚು ಜನರನ್ನು ಅರೆಸ್ಟ್ ಮಾಡಲಾಗಿದೆ.
ಪಿಎಫ್‌ಐ ಸಂಘಟನೆ ದೇಶವಿರೋಧಿ ಚಟುವಟಿಕೆ ನಡೆಸುತ್ತಿದೆ. ಉಗ್ರ ಕೆಲಸಗಳಿಗೆ ಹಣಕಾಸಿನ ನೆರವು ನೀಡುವುದು, ಭಯೋತ್ಪಾದನಾ ಕಾರ್ಯಗಳಿಗೆ ತರಬೇತಿಗಳನ್ನು ಆಯೋಜಿಸುವುದು, ಉಗ್ರ ಸಂಘಟನೆಗಳಿಗೆ ಇತರರನ್ನು ಸೆಳೆಯುವ ಕೆಲಸದಲ್ಲಿ ತೊಡಗಿಕೊಂಡಿದೆ ಎಂಬ ಆರೋಪದಡಿ ರಾಷ್ಟ್ರೀಯ ತನಿಖಾ ದಳ ರೇಡ್ ಮಾಡಿದೆ. ಆಯಾ ರಾಜ್ಯಗಳ ಪೊಲೀಸರು, ಇ.ಡಿ. ಅಧಿಕಾರಿಗಳೊಂದಿಗೆ ಸೇರಿ ಈ ದಾಳಿ ನಡೆಸಿದೆ.
ಈ ಬಗ್ಗೆ ಪಿಎಫ್‌ಐ ಹೇಳಿಕೆ ಬಿಡುಗಡೆ ಮಾಡಿದ್ದು, ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ, ರಾಜ್ಯ, ಸ್ಥಳೀಯ ನಾಯಕರ ಮನೆ, ಕಚೇರಿ ಮೇಲೆ ಎನ್‌ಐಎ ದಾಳಿ ನಡೆಸಿದೆ. ನಮ್ಮ ಧ್ವನಿಯನ್ನು ಅಡಗಿಸಲು ಹೀಗೆ ತನಿಖಾ ದಳಗಳನ್ನು ನಮ್ಮ ವಿರುದ್ಧ ಬಳಸಿಕೊಳ್ಳಲಾಗುತ್ತಿದೆ. ಈ ರೇಡ್ಗಳನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದೆ. ಮಂಗಳವಾರ ಕೂಡ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಪಿಎಫ್ಐಗೆ ಸೇರಿದ 38 ಸ್ಥಳಗಳಲ್ಲಿ ಎನ್‌ಐಎ ಶೋಧ ಕಾರ್ಯ ನಡೆಸಿತ್ತು.
ಇನ್ನು ಇ. ಡಿ.(ಜಾರಿ ನಿರ್ದೇಶನಾಲಯ) ಕೂಡ ಪಿಎಫ್‌ಐ ವಿರುದ್ಧ ಚಾರ್ಜ್ಶೀಟ್ ಹಾಕಿದೆ. ಪಿಎಫ್‌ಐ ಸಂಘಟನೆ ಹಣ ಸಂಗ್ರಹ ಮಾಡಲು ಯುಎಇ, ಒಮನ್, ಕತಾರ್, ಕುವೈತ್, ಬಹ್ರೈನ್, ಸೌಧಿ ಅರೇಬಿಯಾ ಸೇರಿ ಹಲವು ಕಡೆಗಳಲ್ಲಿ ಜಿಲ್ಲಾ ಕಾರ್ಯಕಾರಿ ಸಮಿತಿಯನ್ನು ರಚಿಸಿಕೊಂಡಿದೆ. ಇದರಲ್ಲಿ ಕೆಲಸ ಮಾಡುವವರಿಗೆ ಇಂತಿಷ್ಟೇ ಹಣ ಸಂಗ್ರಹ ಮಾಡಬೇಕು, ಅದನ್ನು ಹವಾಲಾ ಮೂಲಕ ವರ್ಗಾಯಿಸಬೇಕು ಎಂಬ ಟಾರ್ಗಟ್ ಕೂಡ ನೀಡಲಾಗುತ್ತಿದೆ ಎಂದು ಇಡಿ ಹೇಳಿದೆ. ತನಿಖೆ ವೇಳೆ ಸುಮಾರು 600 ದೇಶೀಯ ಕೊಡುಗೆದಾರರು, 2600 ಫಲಾನುಭವಿಗಳ ಬ್ಯಾಂಕ್ ಅಕೌಂಟ್ಗಳನ್ನು ಗಮನಿಸಲಾಗಿದ್ದು, ಇದರಲ್ಲಿ ಅನೇಕ ಖಾತೆಗಳು ನಕಲಿ ಎಂಬುದು ಗೊತ್ತಾಗಿದೆ ಎಂದೂ ಇಡಿ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದೆ.
ಇದನ್ನೂ ಓದಿ: NIA raid | ಎಸ್‌ಡಿಪಿಐ ಮತ್ತು ಪಿಎಫ್‌ಐ ಕಚೇರಿಗಳ ಮೇಲೆ ಎನ್‌ಐಎ ದಾಳಿ, 100ಕ್ಕೂ ಹೆಚ್ಚು ಮಂದಿ ವಶಕ್ಕೆ