ನವದೆಹಲಿ: ಕೊಯಮತ್ತೂರು ಸ್ಫೋಟ ಸೇರಿದಂತೆ ಒಟ್ಟು 497 ಉಗ್ರ ಕೃತ್ಯ ಸಂಬಂಧಿ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ದಾಖಲಿಸಿದೆ ಎಂದು ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರು ರಾಜ್ಯಸಭೆಗೆ ತಿಳಿಸಿದ್ದಾರೆ. ಡಿಎಂಕೆ ಸದಸ್ಯ ವೈಯಾಪುರಿ ಗೋಪಾಲಸ್ವಾಮಿ, ಎಂ. ಷಣ್ಮುಗಮ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿತ್ಯಾನಂದ ರೈ ಅವರು, ವರ್ಷದಿಂದ ವರ್ಷಕ್ಕೆ ಎನ್ಐಎ ಕೆಲಸ ಮಾಡುವ ಸಾಮರ್ಥ್ಯವು ಹೆಚ್ಚುತ್ತಿದೆ ಎಂದು ತಿಳಿಸಿದರು(NIA Cases).
ವರ್ಷದಿಂದ ವರ್ಷಕ್ಕೆ ನೋಂದಣಿ ಪ್ರಕರಣಗಳು ಹೆಚ್ಚಲು ಎನ್ಐಎನ ಹೆಚ್ಚುತ್ತಿರುವ ಹೊಸ ಶಾಖೆಗಳ ಪರಿಣಾಮವೂ ಆಗಿದೆ. ಜತೆಗೆ, ಮಾನವ ಕಳ್ಳ ಸಾಗಣೆ, ನಿಷೇಧಿತ ಆಯುಧಗಳ ತಯಾರಿಕೆ ಮತ್ತು ಮಾರಾಟ, ಸೈಬರ್-ಭಯೋತ್ಪಾದನೆ ಸೇರಿದಂತೆ ಇನ್ನಿತರ ಅಪರಾಧಗಳನ್ನೂ ಎನ್ಐಎ ತನಿಖೆ ಮಾಡುತ್ತಿರುವುದರಿಂದ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಸಚಿವರು ತಿಳಿಸಿದರು.
ನಿರ್ದಿಷ್ಟ ಸಮುದಾಯಗಳನ್ನು ಎನ್ಐಎ ಟಾರ್ಗೆಟ್ ಮಾಡಿಕೊಂಡು ಪ್ರಕರಣಗಳನ್ನು ದಾಖಲಿಸುತ್ತಿದೆ ಎಂದು ಸಂಸದರು ಆರೋಪಿಸಿದರು. ಇದಕ್ಕೆ ಉತ್ತರಿಸಿದ ನಿತ್ಯಾನಂದ ರೈ ಅವರು, ಎನ್ಐಎ ಯಾವುದೇ ಪೂರ್ವಗ್ರಹಪೀಡತವಾಗದೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಪ್ರಕರಣಗಳನ್ನು ದಾಖಲಿಸುತ್ತದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ | NIA Raid | ಟೆರರಿಸ್ಟ್ ಜತೆ ಲಿಂಕ್, ಗ್ಯಾಂಗ್‌ಸ್ಟರ್‌ಗಳಿಗೆ ಸೇರಿದ 60 ಸ್ಥಳಗಳಲ್ಲಿ ಎನ್ಐಎ ರೇಡ್