ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿ ಮೇಲೆ ಇರುವ ತ್ರಿವರ್ಣ ಧ್ವಜವನ್ನು ಖಲಿಸ್ತಾನಿ ಪ್ರತ್ಯೇಕತಾವಾದಿ ಹೋರಾಟಗಾರರು ಕೆಳಗೆ ಇಳಿಸಿದ್ದ ಘಟನೆ ಇದೇ ವರ್ಷ ಮಾರ್ಚ್ ತಿಂಗಳಲ್ಲಿ ನಡೆದಿತ್ತು. ಆ ಪ್ರಕರಣದ ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸುವ ಸಲುವಾಗಿ, ಭಾರತದ ರಾಷ್ಟ್ರೀಯ ತನಿಖಾ ದಳ (NIA) ಲಂಡನ್ದ ಅಧಿಕಾರಿಗಳು ಲಂಡನ್ಗೆ ತೆರಳಲಿದ್ದಾರೆ.
ಪಂಜಾಬ್ನಲ್ಲಿ ಖಲಿಸ್ತಾನಿ ಮುಖಂಡ ಅಮೃತ್‌ಪಾಲ್ ಸಿಂಗ್ ಬಂಧನಕ್ಕಾಗಿ ಪೊಲೀಸರು ಪ್ರಯತ್ನದಲ್ಲಿ ತೊಡಗಿದ್ದಾಗಲೇ ಅತ್ತ ಲಂಡನ್ನಲ್ಲಿ ಖಲಿಸ್ತಾನಿ ಉಗ್ರರು ಭಾರತದ ಹೈಕಮಿಷನ್ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದರು. ಉಗ್ರನೊಬ್ಬ ಕಚೇರಿ ಮೇಲೆ ಹತ್ತಿ, ಭಾರತದ ಧ್ವಜವನ್ನು ಕೆಳಗೆ ಇಳಿಸಿದ್ದ. ಕಚೇರಿ ಬಳಿ ಸೇರಿದ ಖಲಿಸ್ತಾನಿ ಪ್ರತಿಭಟನಾಕಾರರ ಕೈಯಲ್ಲಿ ಖಲಿಸ್ತಾನಿ ಧ್ವಜ ಹಾರಾಡುತ್ತಿತ್ತು. ಈ ಬಗ್ಗೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಭದ್ರತಾ ಸಿಬ್ಬಂದಿ ಇದ್ದಾಗ್ಯೂ ಹೀಗೆ ಉಗ್ರರು ಹೈಕಮಿಷನ್ ಕಚೇರಿ ಮೇಲೆ ಹತ್ತಿ, ತಿರಂಗಾ ಇಳಿಸಲು ಸಾಧ್ಯವಾಗಿದ್ದು ಹೇಗೆ ಎಂದು ಪ್ರಶ್ನಿಸಿ, ದೆಹಲಿಯಲ್ಲಿರುವ ಲಂಡನ್ ಹೈಕಮಿಷನರ್ಗೆ ಭಾರತ ಸರ್ಕಾರ ನೋಟಿಸ್ ಕೊಟ್ಟಿತ್ತು.
ಇದನ್ನೂ ಓದಿ: ಅಮೃತ್‌ಪಾಲ್ ಬಂಧನಕ್ಕೆ ಶೋಧ; ಬ್ರಿಟನ್‌ನಲ್ಲಿ ಭಾರತದ ಹೈಕಮಿಷನ್ ಮೇಲೆ ಖಲಿಸ್ತಾನಿಗಳ ದಾಳಿ, ತಿರಂಗಾ ತೆರವು
ಈ ಪ್ರಕರಣವನ್ನು ಭಾರತದ ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಗೃಹ ಇಲಾಖೆಯ ಭಯೋತ್ಪಾದನೆ ನಿಗ್ರಹ ಮತ್ತು ಮೂಲಭೂತವಾದ ನಿಗ್ರಹ ವಿಭಾಗ ಏಪ್ರಿಲ್ 18ರಂದು ಈ ಕೇಸ್ನ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (NIA)ಗೆ ವಹಿಸಿದೆ. ಎನ್ಐಎ ತನಿಖಾದಳದ ಐವರು ಅಧಿಕಾರಿಗಳನ್ನು ಒಳಗೊಂಡ ತಂಡ ಶೀಘ್ರವೇ ಲಂಡನ್ಗೆ ತೆರಳಲಿದೆ. ಎನ್ಐಎ ಅಧಿಕಾರಿಗಳು ಲಂಡನ್ನಲ್ಲೇ ಇದ್ದು, ಅಂದಿನ ಪ್ರಕರಣದ ತನಿಖೆ ಕೈಗೊಳ್ಳಲಿದ್ದಾರೆ. ಹಾಗೇ, ಬ್ರಿಟಿಷ್ ಆಡಳಿತದ ಅಧಿಕಾರಿಗಳು, ಬ್ರಿಟಿಷ್ ಭದ್ರತಾ ಏಜೆನ್ಸಿಗಳನ್ನೂ ಅವರು ಭೇಟಿ, ಈ ವಿಷಯದ ಬಗ್ಗೆ ಚರ್ಚೆ ನಡೆಸಲಿದ್ದಾರೆ’ ಎಂದು ವರದಿಯಾಗಿದೆ.