Site icon Vistara News

Tamil Nadu: ತಮಿಳುನಾಡಿನ ಈ ಜಿಲ್ಲೆಯಲ್ಲಿ ಆಲ್ಮೋಸ್ಟ್ ಶೂನ್ಯಕ್ಕಿಳಿದ ತಾಪಮಾನ!

This Place In Tamil Nadu Is Freezing At Near Zero Degrees. Experts Worried

ನವದೆಹಲಿ: ಉತ್ತರ ಭಾರತದ (North India) ಹಿಮಾಲಯ ವ್ಯಾಪ್ತಿಯ ಜಿಲ್ಲೆಗಳಲ್ಲಿ (Himalayan Districts) ತಾಪಮಾನ (temperature) ವಿಪರೀತ ಕುಸಿಯುವುದು ಸಾಮಾನ್ಯ. ಈಗ ಅಂಥದ್ದೇ ಪರಿಸ್ಥಿತಿ ತಮಿಳುನಾಡಿನಲ್ಲೂ ಸೃಷ್ಟಿಯಾಗಿದೆ. ತಮಿಳುನಾಡಿನ (Tamil Nadu) ಗುಡ್ಡಗಾಡು ಜಿಲ್ಲೆ ನೀಲಗಿರಿಯಲ್ಲಿ (Nilgiris District) ಭಾರೀ ಚಳಿಯಿಂದ ಜನರು ತತ್ತರಿಸುತ್ತಿದ್ದಾರೆ. ವಾಸ್ತವದಲ್ಲಿ ಇದೊಂದು ಅಕಾಲಿಕ ಹವಾಮಾನ ವಿದ್ಯಮಾನವಾಗಿದ್ದು, ಇಲ್ಲಿನ ಕೃಷಿಯ ಮೇಲೂ ಪರಿಣಾಮ ಬೀರಿದೆ. ನೀಲಗಿರಿಯ ಕೆಲವು ಕಡೆ ತಾಪಮಾನ ಆಲ್ಮೋಸ್ಟ್ ಜೀರೋ ಡಿಗ್ರಿಗೆ ಇಳಿದಿದ್ದು, ಜನರು ಕೊರೆಯುವ ಚಳಿಯಿಂದ ತತ್ತರಿಸುವಂತೆ ಮಾಡಿದೆ.

ಹಚ್ಚ ಹಸಿರಿನ ಹುಲ್ಲುಹಾಸುಗಳು ಹಿಮದಿಂದ ಆವೃತವಾಗಿವೆ ಮತ್ತು ದಟ್ಟವಾದ ಮಂಜು ಬೀಳುತ್ತಿರುವುದರಿಂದ ಭಾರೀ ಸಮಸ್ಯೆಯನ್ನು ಸೃಷ್ಟಿಸಿದೆ. ಏಕೆಂದರೆ, ಕುಸಿಯುತ್ತಿರುವ ತಾಪಮಾನವು ಸ್ಥಳೀಯ ಆರೋಗ್ಯದ ಮೇಲೂ ದುಸ್ಪರಿಣಾಮ ಬೀರುತ್ತಿದೆ. ಇಂತಹ ಚಳಿ, ಶುಷ್ಕ ವಾತಾವರಣ ಅಸಾಮಾನ್ಯವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಹಲವೆಡೆ ಜನರು ಬೆಂಕಿಯ ಸುತ್ತ ಕುಳಿತು ಬೆಚ್ಚಗಾಗಲು ಪ್ರಯತ್ನಿಸುತ್ತಿರುವುದು ಕಂಡುಬಂದಿತು.

ಲಭ್ಯವಿರುವ ಅಧಿಕೃತ ಮಾಹಿತಿಯ ಪ್ರಕಾರ, ಉದಕಮಂಡಲದ ಕಾಂತಲ್ ಮತ್ತು ತಲೈಕುಂಠದಲ್ಲಿ ತಾಪಮಾನವು 1 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದ್ದರೆ, ಬೊಟಾನಿಕಲ್ ಗಾರ್ಡನ್‌ನಲ್ಲಿ 2 ಡಿಗ್ರಿ ಸೆಲ್ಸಿಯಸ್‌, ಸ್ಯಾಂಡಿನಲ್ಲಾದಲ್ಲಿ 3 ಡಿಗ್ರಿ ಸೆಲ್ಸಿಯಸ್ ಇತ್ತು. ಈ ಅಕಾಲಿಕ ತಾಪಮಾನ ಇಳಿಕೆಗೆ ಸ್ಥಳೀಯರು ಮತ್ತು ಪರಿಸರ ಕಾರ್ಯಕರ್ತರು ಭಾರೀ ಕಳವಳ ವ್ಯಕ್ತಪಡಿಸಿದ್ದಾರೆ.

ನೀಲಗಿರಿ ಎನ್ವಿರ್ನಾಮೆಂಟಲ್ ಸೋಷಿಯಲ್ ಟ್ರಸ್ಟ್‌ನ ವಿ ಶಿವದಾಸ್ ಅವರು, ಹೆಚ್ಚುತ್ತಿರುವ ಜಾಗತಿಕ ತಾಪಮಾನ ಮತ್ತು ಎಲ್-ನಿನೋ ಪರಿಣಾಮವೇ ಗುಡ್ಡಗಾಡು ಜಿಲ್ಲೆಯಲ್ಲಿ ಅಕಾಲಿಕ ತಾಪಮಾನ ಕುಸಿಯುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಚಳಿಗಾಲ ಆರಂಭವಾಗುವುದು ತಡವಾಗಿದ್ದು, ಇಂತಹ ಹವಾಮಾನ ಬದಲಾವಣೆ ನೀಲಗಿರಿಗೆ ದೊಡ್ಡ ಸವಾಲಾಗಿದ್ದು, ಈ ಬಗ್ಗೆ ಅಧ್ಯಯನ ನಡೆಸಬೇಕು ಎಂದರು. ಈ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟೀ ಬೆಳೆಯಲಾಗುತ್ತಿದ್ದು, ಕುಸಿಯುತ್ತಿರುವ ತಾಪಮಾನ ಟೀ ಬೆಳೆಗೂ ಭಾರೀ ಸಮಸ್ಯೆಯನ್ನು ಸೃಷ್ಟಿಸಿದೆ.

ಡಿಸೆಂಬರ್‌ ತಿಂಗಳಲ್ಲಿ ಭಾರೀ ಮಳೆ ಸುರಿದಿದ್ದರಿಂದ ಟೀ ತೋಟಗಾರಿಕೆ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಸ್ಥಳೀಯ ಟೀ ಕೆಲಸಗಾರರ ಸಂಘದ ಕಾರ್ಯದರ್ಶಿ ಆರ್ ಸುಕುಮಾರನ್ ಅವರು ತಿಳಿಸಿದ್ದಾರೆ. ಮುಂದಿನ ಕೆಲವು ತಿಂಗಳಲ್ಲಿ ಟೀ ಉತ್ಪಾದನೆಯ ಮೇಲೆ ಇದು ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ತರಕಾರಿ ವಿಶೇಷವಾಗಿ ಕ್ಯಾಬೇಜ್‌ ಬೆಳೆಯ ಮೇಲೂ ಈ ಅಕಾಲಿಕ ತಾಪಮಾನ ಕುಸಿತವು ಪರಿಣಾಮ ಬೀರುತ್ತಿದೆ.

ಈ ಸುದ್ದಿಯನ್ನೂ ಓದಿ: Karnataka Weather: ಬೆಂಗಳೂರು ಈ ವಾರವಿಡೀ ಕೂಲ್‌ ಕೂಲ್!‌ ಎಷ್ಟಿರಲಿದೆ ತಾಪಮಾನ?

Exit mobile version