ನವದೆಹಲಿ: ಟೊಮೆಟೊ ಬಳಿಕ ಇದೀಗ ಈರುಳ್ಳಿ ಬೆಲೆಯು (Onion Price Rise) ಗಗನಕ್ಕೇರುತ್ತಿದೆ. ಈರುಳ್ಳಿಯ ಬೆಲೆ ಏರಿಕೆಯು ಸರಕಾರದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಅಂದಾಜಿಸಿರುವ ಆಡಳಿತಗಾರರು ನಿಯಂತ್ರಣಕ್ಕೆ ನಾನಾ ಸರ್ಕಸ್ ಮಾಡುತ್ತಿದ್ದಾರೆ. ಈರುಳ್ಳಿ ರಫ್ತಿನ (Onion Export) ಮೇಲೆ ಶೇಕಡಾ 40ರಷ್ಟು ತೆರಿಗೆ ವಿಧಿಸುವ ಮೂಲಕ ವಿದೇಶಕ್ಕೆ ಈರುಳ್ಳಿ ಹೋಗದಂತೆ ನೋಡಿಕೊಂಡಿರುವ ಜತೆಗೆ ಇದೀಗ ತುರ್ತು ಸಂಗ್ರಹದ ಪ್ರಮಾಣವನ್ನೂ ಏರಿ ಮಾಡಲು ನಿರ್ಧರಿಸಿದೆ. 3 ಲಕ್ಷ ಟನ್ ಆರಂಭಿಕ ಖರೀದಿ ಗುರಿಯನ್ನು ಸಾಧಿಸಲಾಗಿದ್ದು ಅದರ ಪ್ರಮಾಣವನ್ನು 5 ಲಕ್ಷ ಟನ್ಗೆ ಏರಿಕೆ ಮಾಡಲಾಗಿದೆ ಈ ನಿಟ್ಟಿನಲ್ಲಿ, ಗ್ರಾಹಕ ವ್ಯವಹಾರಗಳ ಇಲಾಖೆ ಎನ್ಸಿಎಫ್ (NCFC) ಮತ್ತು ನಾಫೆಡ್ಗೆ (NAFED) ಹೆಚ್ಚುವರಿ ಖರೀದಿ ಗುರಿಯನ್ನು ಸಾಧಿಸಲು ತಲಾ 1.00 ಲಕ್ಷ ಟನ್ ಸಂಗ್ರಹಿಸಲು ನಿರ್ದೇಶನ ನೀಡಿದೆ.
ಈರುಳ್ಳಿಯ ಚಿಲ್ಲರೆ ಮಾರಾ ಬೆಲೆಗಳು ಸರಾಸರಿ ಮತ್ತು ಹಿಂದಿನ ತಿಂಗಳಿಗಿಂತ ಗಮನಾರ್ಹವಾಗಿ ಹೆಚ್ಚಿದೆ. ಹೀಗಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಮುಖ ಮಾರುಕಟ್ಟೆಗಳನ್ನು ಗುರಿಯಾಗಿಸಿಕೊಂಡು ತುರ್ತು ಸಂಗ್ರಹದಿಂದ ಈರುಳ್ಳಿ ವಿಲೇವಾರಿ ಮಾಡಲಾಗುತ್ತಿದೆ . ಇಲ್ಲಿಯವರೆಗೆ ಸಂಗ್ರಹದಿಂದ 1,400 ಮೆಟ್ರಿಕ್ ಟನ್ ಈರುಳ್ಳಿಯನ್ನು ಉದ್ದೇಶಿತ ಮಾರುಕಟ್ಟೆಗಳಿಗೆ ರವಾನಿಸಲಾಗಿದೆ. ಮಾರುಕಟ್ಟೆಯಲ್ಲಿ ಲಭ್ಯತೆಯನ್ನು ಹೆಚ್ಚಿಸಲು ನಿರಂತರವಾಗಿ ಬಿಡುಗಡೆ ಮಾಡಲಾಗುತ್ತಿದೆ.
ಪ್ರಮುಖ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡುವುದರ ಹೊರತಾಗಿಯೂ ಈರುಳ್ಳಿಯನ್ನು ನಾಳೆಯಿಂದ (ಆಗಸ್ಟ್ 21,ಸೋಮವಾರದಿಂದ) ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ಎನ್ಸಿಎಫ್ ಮೊಬೈಲ್ ವ್ಯಾನ್ಗಳ ಮೂಲಕ ಚಿಲ್ಲರೆ ಗ್ರಾಹಕರಿಗೆ ಪ್ರತಿ ಕೆ.ಜಿ.ಗೆ 25 ರೂ.ಗಳ ಸಬ್ಸಿಡಿ ದರದಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಇತರ ಏಜೆನ್ಸಿಗಳು ಮತ್ತು ಇ-ಕಾಮರ್ಸ್ ಫ್ಲ್ಯಾಟ್ಫಾರ್ಮ್ಗಳನ್ನು ಸೇರಿದಂತೆ ಮುಂಬರುವ ದಿನಗಳಲ್ಲಿ ಈರುಳ್ಳಿಯ ಚಿಲ್ಲರೆ ಮಾರಾಟವನ್ನು ಹೆಚ್ಚಿಸಲು ಸರಕಾರ ನಿರ್ಧರಿಸಿದೆ.
ತುರ್ತು ಸಂಗ್ರಹದ ಖರೀದಿ, ದಾಸ್ತಾನುಗಳ ಉದ್ದೇಶಿತ ಬಿಡುಗಡೆ ಮತ್ತು ರಫ್ತು ಸುಂಕವನ್ನು ವಿಧಿಸುವುದು ಸರ್ಕಾರ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಸದ್ಯಕ್ಕೆ ಕೈಗೊಂಡ ಕ್ರಮಕಗಳಾಗಿವೆ. ಈರುಳ್ಳಿ ರೈತರಿಗೆ ಲಾಭದಾಯಕ ಬೆಲೆಗಳನ್ನು ಖಾತರಿಪಡಿಸುವ ಮೂಲಕ ರೈತರು ಮತ್ತು ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರಿಗೆ ಈರುಳ್ಳಿ ತಲುಪುವಂತೆ ನೋಡಿಕೊಳ್ಳಲಾಗಿದೆ.
ಈರುಳ್ಳಿ ರಫ್ತು ಮೇಲೆ ಶೇ.40ರಷ್ಟು ಸುಂಕ ವಿಧಿಸಿದ ಸರ್ಕಾರ! ಬೆಲೆ ಏರಿಕೆ ತಡೆಯಲು ಕ್ರಮ
ಟೊಮೆಟೋ ಬೆಲೆ ಏರಿಕೆಯಿಂದ (Tomato Price) ಬಸವಳಿದಿದ್ದ ಜನರಿಗೆ ಈರುಳ್ಳಿ ಬೆಲೆ (Onion Price) ಏರಿಕೆ ಕೂಡ ನಿಧಾನವಾಗಿ ತಟ್ಟಲಾರಂಭಿಸಿತ್ತು. ಈ ಬೆಳವಣಿಗೆಯನ್ನು ಗಮನಿಸಿರುವ ಕೇಂದ್ರ ಸರ್ಕಾರವು(Central Government), ಏರುತ್ತಿರುವ ಬೆಲೆ ಏರಿಕೆಯನ್ನು ನಿಯಂತ್ರಣ ಮಾಡಲು ಪ್ರಸಕ್ತ ಸಾಲಿನ ಡಿಸೆಂಬರ್ ವರೆಗೂ ಈರುಳ್ಳಿ ರಫ್ತು ಮೇಲೆ ಶೇ.40ರಷ್ಟು ಸುಂಕ ವಿಧಿಸಿದೆ(40% Duty On Onion Export).
ಡಿಸೆಂಬರ್ 31ರ ವರೆಗೂ ಈರುಳ್ಳಿ ರಫ್ತು ಮೇಲೆ ಶೇ.40 ಸುಂಕ ವಿಧಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವಾಲಯವು ತಿಳಿಸಿದೆ. ಸುಂಕ ಏರಿಕೆಯು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಸಚಿವಾಲಯವು ಸ್ಪಷ್ಟಪಡಿಸಿದೆ.
ಪ್ರಸಕ್ತ ತಿಂಗಳಲ್ಲಿ ಈರುಳ್ಳಿ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ಬೆಲೆ ಇನ್ನಷ್ಟು ಜಾಸ್ತಿಯಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಕೇಂದ್ರ ಸರ್ಕಾರವು ಈರುಳ್ಳಿ ರಫ್ತು ಮೇಲೆ ತನ್ನ ಸುಂಕಾಸ್ತ್ರವನ್ನು ಪ್ರಯೋಗಿಸಿದೆ. ಇನ್ನು ಕೆಲವೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ಕೂಡ ಬರಲಿದೆ. ಈ ಸಂದರ್ಭದಲ್ಲಿ ಬೆಲೆ ಏರಿಕೆ ಕೂಡ ಮತದಾರರ ಮೇಲೆ ಪ್ರಭಾವ ಬೀರುವುದರಿಂದ ಸರ್ಕಾರವು, ಸಾಧ್ಯವಾದಷ್ಟು ಬೆಲೆ ನಿಯಂತ್ರಣ ಮಾಡಲು ಮುಂದಾಗುತ್ತಿದೆ. ಕೆಲವು ವರದಿಗಳ ಪ್ರಕಾರ, ಪೆಟ್ರೋಲ್, ಡಿಸೇಲ್ ಮತ್ತು ಅಡುಗೆ ಅನಿಲ ಬೆಲೆ ಕೂಡ ಇಳಿಕೆಯಾಗಲಿದೆ.
ಇತ್ತೀಚೆಗಷ್ಟೇ ಟೊಮೆಟೊ ಬೆಲೆ ಏರಿಕೆ ಭಾರೀ ಸಂಚಲನವನ್ನು ಸೃಷ್ಟಿಸಿತ್ತು. ಕಳೆದ ವಾರದಿಂದ ಟೊಮೆಟೋ ಬೆಲೆ ನಿಯಂತ್ರಣಕ್ಕೆ ಬಂದಿದೆ. ಆದರೆ, ಈರುಳ್ಳಿ ಮತ್ತು ಆಲೂ ಸತತವಾಗಿ ಏರಿಕೆಯಾಗುತ್ತಿವೆ ಎಂಬ ಮಾಹಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಗುರುವಾರದ ವಾರ್ತಾಪತ್ರದಲ್ಲಿ ತಿಳಿಸಿದೆ.
ಮತ್ತೆ ದುಬಾರಿ ದುನಿಯಾ… 15 ತಿಂಗಳ ಗರಿಷ್ಠ ಮಟ್ಟಕ್ಕೆ ಹಣದುಬ್ಬರ ಏರಿಕೆ!
ಭಾರತದ ಆರ್ಥಿಕಾಭಿವೃದ್ಧಿ (Indian Economy) ಏರುಗತಿಯಲ್ಲಿದೆ ಎಂದು ವಿಶ್ಲೇಷಣೆಗಳು ನಡೆಯುತ್ತಿರುವ ಸಂದರ್ಭದಲ್ಲಿ, ಈ ವಿಶ್ಲೇಷಣೆಗಳಿಗೆ ವಿರುದ್ಧವಾದ ಬೆಳವಣಿಗೆ ಘಟಿಸಿದೆ. ಭಾರತೀಯ ಚಿಲ್ಲರೆ ಹಣದುಬ್ಬರವು (Retail Inflation) ಜುಲೈನಲ್ಲಿ ಶೇ.7.44ಕ್ಕೆ ಏರಿಕೆಯಾಗಿದೆ. ಕಳೆದ 15 ತಿಂಗಳಲ್ಲೇ ಇದು ಗರಿಷ್ಠ ಮಟ್ಟದ ಏರಿಕೆಯಾಗಿದೆ. ಅರ್ಥಾತ್, ಭಾರತದಲ್ಲಿ ಮತ್ತೆ ದುಬಾರಿ ದುನಿಯಾ(Food Prices Spike) ಶುರುವಾಗಿದೆ. ಭಾರತದ ಚಿಲ್ಲರೆ ಹಣದುಬ್ಬರವು ಜೂನ್‌ನಲ್ಲಿ ಶೇ.4.81ರಿಂದ ವಾರ್ಷಿಕ ಆಧಾರದ ಮೇಲೆ ಜುಲೈನಲ್ಲಿ ಶೇ.7.44ಕ್ಕೆ ಏರಿದೆ. ಕೇಂದ್ರ ಸಾಂಖೀಕ ಇಲಾಖೆ ಸೋಮವಾರ ಬಿಡುಗಡೆ ಮಾಡಿದ ವರದಿಯಲ್ಲಿ ಈ ಮಾಹಿತಿಯನ್ನು ವಿವರಿಸಲಾಗಿದೆ.
2022ರ ಮೇ ತಿಂಗಳ ಬಳಿಕ ಚಿಲ್ಲರೆ ಹಣದುಬ್ಬರವು ಈಗ ಗರಿಷ್ಠ ಮಟ್ಟಕ್ಕೆ ತಲುಪಿದೆ. ಅಂದು ಶೇ.7.79ರಷ್ಟು ದಾಖಲಾಗಿತ್ತು. ಗ್ರಾಹಕ ಆಹಾರ ಬೆಲೆ ಸೂಚ್ಯಂಕ (CFPI) ಜೂನ್‌ನಲ್ಲಿ ಶೇ 4.49ರಿಂದ ಶೇ 11.51ಕ್ಕೆ ಏರಿದೆ. ಗ್ರಾಮೀಣ ಹಣದುಬ್ಬರವು ಶೇ.7.63 ರಷ್ಟಿದ್ದರೆ, ನಗರ ಹಣದುಬ್ಬರವು ಶೇ.7.20 ರಷ್ಟಿದೆ.