ಮುಂಬಯಿಯ ಬಾಂದ್ರಾ ಕುರ್ಲಾ ಸಂಕೀರ್ಣದಲ್ಲಿರುವ ರಿಲಯನ್ಸ್ ಜಿಯೊ ವರ್ಲ್ಡ್ ಸೆಂಟರ್ನೊಳಗೆ ನೂತನವಾಗಿ ನಿರ್ಮಿಸಲಾಗಿರುವ ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದ ಉದ್ಘಾಟನೆ ಅದ್ಧೂರಿಯಾಗಿ ನಡೆಯಿತು. ನೀತಾ ಅಂಬಾನಿ, ಮುಕೇಶ್ ಅಂಬಾನಿ ಮತ್ತು ಅವರ ಇಡೀ ಕುಟುಂಬದವರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅದರಲ್ಲಿ ನೀತಾ ಅಂಬಾನಿ (Nita Ambani)ಯವರು ‘ರಘುಪತಿ ರಾಘವ ರಾಜಾರಾಮ್’ ಹಾಡಿಗೆ ಚೆಂದನೆಯ ನೃತ್ಯ ಮಾಡಿ ಗಮನಸೆಳೆದರು. ಈ ನೀತಾ ಮುಕೇಶ್ ಸಾಂಸ್ಕೃತಿಕ ಕೇಂದ್ರದ ಅದ್ಧೂರಿ ಉದ್ಘಾಟನೆಯ ಮತ್ತು ನೀತಾ ಅಂಬಾನಿ ಭರತನಾಟ್ಯ ಮಾಡಿರುವ ಹಲವು ವಿಡಿಯೊಗಳು, ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ, ಪ್ರಮುಖ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.
ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರ ಉದ್ಘಾಟನೆ ಕಾರ್ಯಕ್ರಮಕ್ಕೆ ಬಾಲಿವುಡ್ ಗಣ್ಯರಾದ ಶಾರುಖ್ಖಾನ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಅಲಿಯಾ ಭಟ್, ಜಾನ್ವಿ ಕಪೂರ್, ವರುಣ್ ಧವನ್, ಕೀರ್ತಿ ಸನೂನ್, ಕರೀನಾ ಕಪೂರ್, ಆಮೀರ್ ಖಾನ್, ಸೈಫ್ ಅಲಿ ಖಾನ್, ಕರಿಷ್ಮಾ ಕಪೂರ್, ವಿದ್ಯಾ ಬಾಲನ್, ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ನಿಕ್ ಜೋನಾಸ್ ಆಗಮಿಸಿದ್ದರು. ರಜನಿಕಾಂತ್ ಅವರೂ ಪಾಲ್ಗೊಂಡಿದ್ದರು. ಅಂಬಾನಿ ಕುಟುಂಬದ ಇಶಾ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕಾ ಅಂಬಾನಿ, ಅನಂತ್ ಅಂಬಾನಿ, ರಾಧಿಕಾ ಮರ್ಚಂಟ್ ಕೂಡ ಉಪಸ್ಥಿತರಿದ್ದರು. ಇವರೆಲ್ಲ ಸಾಂಪ್ರದಾಯಿಕ ಉಡುಗೆ ತೊಟ್ಟು, ಸಂಭ್ರಮಸಿದರು. ನೀತಾ ಅಂಬಾನಿಯವರು ಕೆಂಪು ಮತ್ತು ಗುಲಾಬಿ ಮಿಶ್ರಿತ ಲೆಹಂಗಾವನ್ನು, ಗುಜರಾತಿ ಶೈಲಿಯಲ್ಲಿ ತೊಟ್ಟು, ಮೈತುಂಬ ಆಭರಣಗಳನ್ನು ಹಾಕಿಕೊಂಡು ನೃತ್ಯ ಮಾಡಿದ್ದಾರೆ.
ಅಂದಹಾಗೇ, ಈ ಸಾಂಸ್ಕೃತಿಕ ಕೇಂದ್ರ ನೀತಾ ಅಂಬಾನಿಯವರ ಕನಸಿನ ಕೂಸು. ಭಾರತದ ಕಲಾ ಪ್ರಕಾರಗಳನ್ನು ಪಸರಿಸುವ, ಉತ್ತೇಜಿಸುವ ಸಲುವಾಗಿ ಅವರು ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರವನ್ನು ನಿರ್ಮಾಣ ಮಾಡಿದ್ದಾರೆ. ಇಲ್ಲಿ ಮೂರು ಕಲಾ ಪ್ರದರ್ಶನ ವೇದಿಕೆಗಳು ಇವೆ. ಅದರಲ್ಲಿ ಒಂದು 2000 ಆಸನಗಳುಳ್ಳ ಭವ್ಯವಾದ ಥಿಯೇಟರ್. ಇನ್ನೊಂದು 250 ಸೀಟ್ಗಳಿರುವ ಸ್ಟುಡಿಯೋ ಥಿಯೇಟರ್ ಮತ್ತು ಇನ್ನೊಂದು 125 ಕ್ಯೂಬ್ ಸೀಟ್ಗಳುಳ್ಳ ವೇದಿಕೆ. ಇಲ್ಲಿ ಆರ್ಟ್ ಹೌಸ್ ಕೂಡ ಇದೆ.
ನೀತಾ ಅಂಬಾನಿಯವರು ಉದ್ಯಮ ಕ್ಷೇತ್ರದಲ್ಲಿ ಪ್ರಭಾವಿ ಮಹಿಳೆ. ಆದರೆ ತಮ್ಮನ್ನು ತಾವು ಉದ್ಯಮ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸಿಕೊಂಡಿಲ್ಲ. ಕ್ರೀಡೆಯಲ್ಲೂ ಅವರು ಆಸಕ್ತಿ ಬೆಳೆಸಿಕೊಂಡು ಕ್ರೀಡಾ ಕ್ಷೇತ್ರದ ಉತ್ತೇಜನಕ್ಕೆ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅವರು ಈ ಹಿಂದೆ 2019ರಲ್ಲಿ ಮಗಳು ಇಶಾ ಅಂಬಾನಿ ಮುದವೆ ಸಂದರ್ಭದಲ್ಲೂ ನೀತಾ ಅಂಬಾನಿ ನೃತ್ಯ ಮಾಡಿದ್ದರು.