ಪಾಟ್ನಾ: ಬಿಹಾರದಲ್ಲಿ ಬಿಜೆಪಿಯ ಕೈಬಿಟ್ಟ ಜೆಡಿಯು ನಾಯಕ ಕಾಂಗ್ರೆಸ್ ಜತೆ ಸೇರಿಕೊಂಡು ಸರ್ಕಾರ ರಚಿಸಿದ್ದು ಹಳೆ ವಿಚಾರ. ಇದೀಗ ಅದೇ ನಿತೀಶ್ ಕುಮಾರ್ (Nithish Kumar) ಮತ್ತೆ ಕಮಲದತ್ತ ಒಲವು ತೋರಿಸುತ್ತಿದ್ದಾರೆ ಎನ್ನುವ ವಿಚಾರ ಹರಿದಾಡಿದ್ದು, ಅದಕ್ಕೆ ನಿತೀಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. “ಬಿಜೆಪಿ ಜತೆ ಕೈ ಜೋಡಿಸುವುದಕ್ಕಿಂತ ಸಾಯುವುದೇ ಲೇಸು” ಎಂದು ನಿತೀಶ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: Nitish Kumar | ಕರೆದರೂ ಕೆಸಿಆರ್ ಸಭೆಗೆ ಹೋಗುತ್ತಿರಲಿಲ್ಲ ಎಂದ ನಿತೀಶ್, ‘ಲೋಕ’ ಸಮರಕ್ಕೂ ಮೊದಲೇ ಪ್ರತಿಪಕ್ಷಗಳಲ್ಲಿ ಒಡಕು?
ಇವರ ಈ ಹೇಳಿಕೆಗೂ ಮೊದಲು, ಅಂದರೆ ಭಾನುವಾರದಂದು ಬಿಹಾರದ ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿಯು ಒಂದು ರೆಸೋಲ್ಯೂಷನ್ ಹೊರಡಿಸಿತ್ತು. ಯಾವುದೇ ಕಾರಣಕ್ಕೂ ಜೆಡಿಯು ಜತೆ ಮೈತ್ರಿ ಮಾಡಿಕೊಳ್ಳಲಾಗುವುದಿಲ್ಲ ಎಂದು ಅದರಲ್ಲಿ ಹೇಳಲಾಗಿತ್ತು. ಈ ಬಗ್ಗೆ ಮಾಹಿತಿ ನೀಡಿದ್ದ ರಾಜ್ಯಸಭಾ ಸಂಸದ ಸುಶೀಲ್ ಕುಮಾರ್ ಮೋದಿ ಅವರು, “ಪ್ರಧಾನ ಮಂತ್ರಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಹಲವು ಗಣ್ಯ ನಾಯಕರು ಸೇರಿಕೊಂಡು ಈ ನಿರ್ಧಾರ ಮಾಡಿದ್ದಾರೆ. ನಿತೀಶ್ ಜತೆ ಮತ್ತೆ ಮೈತ್ರಿ ಮಾಡಿಕೊಳ್ಳಲಾಗುವುದಿಲ್ಲ ಎಂಬ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ” ಎಂದು ಹೇಳಿದ್ದರು.
“ಕೆಲವು ಜೆಡಿಯು ನಾಯಕರು ನಿತೀಶ್ ಮತ್ತೆ ಬಿಜೆಪಿ ಸೇರುತ್ತಾರೆಂದು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಆದರೆ ಅದು ಅಕ್ಷರಶಃ ಸುಳ್ಳು. ನಿತೀಶ್ ನಮಗೆ ವಂಚಿಸಿದ್ದಾರೆ ಹಾಗೆಯೇ ಮತ ಗಳಿಸುವಲ್ಲಿಯೂ ವಿಫಲರಾದವರಾಗಿದ್ದಾರೆ. ನಮ್ಮ ಈ ನಿರ್ಧಾರದಿಂದಾಗಿ ಬಿಹಾರದಲ್ಲಿ ಬಿಜೆಪಿ ಸರ್ಕಾರ ರಚಿಸುವ ನಮ್ಮ ಕನಸು ನನಸು ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ” ಎಂದು ಅವರು ತಿಳಿಸಿದ್ದಾರೆ.