Site icon Vistara News

NITI Aayog Task Force: ಗೋಮೂತ್ರ, ಸಗಣಿಯಿಂದ ಮಣ್ಣಿನ ಫಲವತ್ತತೆ ಹೆಚ್ಚಳ; ನೀತಿ ಆಯೋಗ ವರದಿ

NITI Aayog task force suggests cow dung, cow urine to boost organic matter in soil

ನೀತಿ ಆಯೋಗ

ನವದೆಹಲಿ: ಆಧುನಿಕ ಕೃಷಿಯ ಹೆಸರಿನಲ್ಲಿ ಅತಿಯಾದ ರಸಗೊಬ್ಬರ, ಕ್ರಿಮಿನಾಶಕಗಳ ಬಳಕೆಯಿಂದಾಗಿ ಮಣ್ಣಿನ ಫಲವತ್ತತೆ ಕುಸಿಯುತ್ತಿದೆ ಎಂಬ ಕುರಿತು ತಜ್ಞರು ಎಚ್ಚರಿಸುತ್ತಲೇ ಇದ್ದಾರೆ. ಆದರೂ, ರಸಗೊಬ್ಬರ, ಕ್ರಿಮಿನಾಶಕಗಳ ಬಳಕೆ ಹೆಚ್ಚಿದೆ. ಪರಿಸ್ಥಿತಿ ಹೀಗಿರುವಾಗಲೇ, ನೀತಿ ಆಯೋಗದ ಕಾರ್ಯಪಡೆಯು (NITI Aayog Task Force) ವರದಿಯೊಂದನ್ನು ಬಿಡುಗಡೆ ಮಾಡಿದ್ದು, “ಗೋಮೂತ್ರ ಹಾಗೂ ಸಗಣಿಯಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ” ಎಂದು ತಿಳಿಸಿದೆ.

ನೀತಿ ಆಯೋಗವು ‘ಸಾವಯವ ಹಾಗೂ ಜೈವಿಕ ರಸಗೊಬ್ಬರದ ಉತ್ಪಾದನೆ ಹಾಗೂ ಉತ್ತೇಜನದ ಜತೆಗೆ ಆರ್ಥಿಕ ಕಾರ್ಯಸಾಧ್ಯತೆಯ ಹೆಚ್ಚಳಕ್ಕೆ ಗೋಶಾಲೆಗಳ ಮೇಲೆ ಹೆಚ್ಚಿನ ಗಮನ’ ಎಂಬ ವರದಿ ಬಿಡುಗಡೆ ಮಾಡಿದ್ದು, ಸಾವಯವ ಕೃಷಿಯ ಪ್ರಾಮುಖ್ಯತೆ ತಿಳಿಸಿದೆ.

“ಕಳೆದ 50 ವರ್ಷದಲ್ಲಿ ಅತಿಯಾದ ರಸಗೊಬ್ಬರಗಳ ಬಳಕೆಯಿಂದಾಗಿ ಮಣ್ಣಿನ ಫಲವತ್ತತೆ ಕುಸಿದಿದೆ. ಇದು ಮಣ್ಣಿನ ಫಲವತ್ತತೆ, ಆಹಾರದ ಗುಣಮಟ್ಟ, ಪರಿಸರದ ಮೇಲೆಯೂ ಪರಿಣಾಮ ಬೀರುತ್ತಿದೆ. ಹಾಗಾಗಿ, ಕೃಷಿಯಲ್ಲಿ ಗೋಮೂತ್ರ ಹಾಗೂ ಗೋವಿನ ಸಗಣಿಯ ಬಳಕೆ ಹೆಚ್ಚಿಸಬೇಕಿದೆ. ಇದಕ್ಕಾಗಿ, ಗೋಶಾಲೆಗಳ ಸ್ಥಾಪನೆಯ ಸಂಖ್ಯೆ ಹೆಚ್ಚಾಗಬೇಕು” ಎಂದು ವರದಿ ಬಿಡುಗಡೆ ವೇಳೆ ನೀತಿ ಆಯೋಗದ ಕೃಷಿ ವಿಭಾಗದ ಸದಸ್ಯ ರಮೇಶ್‌ ಚಾಂದ್ ಮಾಹಿತಿ ನೀಡಿದರು.

“ಭಾರತದ ಸಾಂಪ್ರದಾಯಿಕ ಕೃಷಿಗೆ ಗೋವುಗಳು ಅವಿಭಾಜ್ಯ ಅಂಗಗಳಾಗಿವೆ. ಗೋಶಾಲೆಗಳು ನೈಸರ್ಗಿಕ ಹಾಗೂ ಸಾವಯವ ಕೃಷಿಗೆ ಪೂರಕವಾಗಿವೆ. ಗೋವುಗಳ ಸಗಣಿಯ ಬಳಕೆ ಹೆಚ್ಚಿಸಬೇಕು ಹಾಗೂ ರಸಗೊಬ್ಬರಗಳ ಬಳಕೆ ತಡೆಯಬೇಕು. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುವ ಜತೆಗೆ ಜನರ ಆರೋಗ್ಯ, ಪರಿಸರ ರಕ್ಷಣೆ ಹಾಗೂ ಸುಸ್ತಿರತೆ ಕಾಪಾಡಬಹುದಾಗಿದೆ” ಎಂದು ನೀತಿ ಆಯೋಗದ ಕೃಷಿ ವಿಭಾಗದ ಹಿರಿಯ ಸಲಹೆಗಾರ ಡಾ.ನೀಲಂ ಪಟೇಲ್‌ ತಿಳಿಸಿದರು.

ಇದನ್ನೂ ಓದಿ: Award Ceremony: ಗುಜರಾತ್‌ನ ಸಾವಯವ ಕೃಷಿಕ ಕುಟುಂಬಕ್ಕೆ ಪುರುಷೋತ್ತಮ ಕೃಷಿ ಸಂಶೋಧನಾ ಪ್ರತಿಷ್ಠಾನ ಪ್ರಶಸ್ತಿ

Exit mobile version