Site icon Vistara News

Nitin Gadkari: ಹೆದ್ದಾರಿಗಳ ಡೇಂಜರ್‌ ಸ್ಪಾಟ್‌ ನಿವಾರಣೆಗೆ ನಿತಿನ್ ಗಡ್ಕರಿ ಕಠಿಣ ಸೂಚನೆ

nitin gadkari highways

ಹೊಸದಿಲ್ಲಿ: ಹೆದ್ದಾರಿಗಳಲ್ಲಿನ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಮುಂದಾಗಿದ್ದಾರೆ. ರಸ್ತೆಗಳು ಮತ್ತು ಹೆದ್ದಾರಿಗಳಲ್ಲಿನ ಬ್ಲ್ಯಾಕ್‌ಸ್ಪಾಟ್‌ಗಳನ್ನು (Blackspots‌ – ಅಪಾಯದ ತಾಣ) ಗುರುತಿಸಲು ಮತ್ತು ಅವುಗಳನ್ನು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ಸೂಚನೆ ನೀಡಿದ್ದಾರೆ.

ಈ ಗುರಿಯನ್ನು ಸಾಧಿಸಲು NHAI ಪ್ರಾದೇಶಿಕ ಅಧಿಕಾರಿಗಳು (RO) ಮತ್ತು ಯೋಜನಾ ನಿರ್ದೇಶಕರು (PD) ಸ್ವತಃ ಬೀದಿಗಿಳಿಯುವಂತೆ ಅವರು ಆದೇಶಿಸಿದ್ದಾರೆ. ಈ ಅಧಿಕಾರಿಗಳೇ ಸ್ವತಃ ಕ್ಷೇತ್ರಕಾರ್ಯಕ್ಕೆ ಇಳಿದು ಬ್ಲ್ಯಾಕ್‌ ಸ್ಪಾಟ್‌ಗಳ ಮೂಲ ಕಾರಣಗಳನ್ನು ಕಂಡುಹಿಡಿಯಬೇಕು. 2025ರ ಅಂತ್ಯದೊಳಗೆ ರಸ್ತೆ ಅಪಘಾತಗಳ ಸಂಖ್ಯೆಯನ್ನು ಶೇಕಡಾ 50ರಷ್ಟು ಕಡಿಮೆ ಮಾಡುವ ಗುರಿಯನ್ನು ಸಚಿವರು ಹೊಂದಿದ್ದಾರೆ.

ದೋಷಯುಕ್ತ ಡಿಪಿಆರ್ (ವಿವರಗಳ ಯೋಜನಾ ವರದಿ) ಕಾರಣದಿಂದ ಅನೇಕ ಬ್ಲಾಕ್‌ಸ್ಪಾಟ್‌ಗಳು ಸೃಷ್ಟಿಯಾಗುತ್ತವೆ. ಕಳಪೆ ಯೋಜನಾ ವರದಿಗಳಿಂದಾಗಿ ಕೆಲವು ಟ್ರಾಫಿಕ್ ಅಪಘಾತಗಳು ಸಂಭವಿಸುತ್ತಿವೆ ಎಂದಿರುವ ಅವರು, ಹೆದ್ದಾರಿಗಳ ಸಂಪೂರ್ಣ ಯೋಜನಾ ವರದಿಗಳನ್ನು ರಚಿಸಲು ನಿಗಮಗಳಿಗೆ ಸಾಕಷ್ಟು ತರಬೇತಿ ನೀಡುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಈ ಬ್ಲ್ಯಾಕ್‌ಸ್ಪಾಟ್‌ಗಳನ್ನು ಸರಿಯಾಗಿ ಗುರುತಿಸಲು ಮತ್ತು ಅವುಗಳನ್ನು ಹೇಗೆ ತೊಡೆದುಹಾಕಬೇಕು ಎಂಬುದನ್ನು ನಿರ್ಧರಿಸಲು ROಗಳು ಮತ್ತು PDಗಳನ್ನು ಉತ್ತೇಜಿಸಲಾಗಿದೆ.

NHAI ಪ್ರಕಾರ, 2015-2018ರ ನಡುವೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಮಾರು 4002 ಬ್ಲಾಕ್‌ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ಈ ಎಲ್ಲಾ ಬ್ಲಾಕ್ ಸ್ಪಾಟ್‌ಗಳಿಗೆ ಅಲ್ಪಾವಧಿ ಭದ್ರತಾ ಕ್ರಮಗಳನ್ನು ಅಳವಡಿಸಲಾಗಿದೆ. 2021-22ರಲ್ಲಿ ಸುಮಾರು 716 ಬ್ಲಾಕ್‌ಸ್ಪಾಟ್‌ಗಳಲ್ಲಿ ಭದ್ರತಾ ಕ್ರಮಗಳನ್ನು ಅಳವಡಿಸಲಾಗಿದೆ. ಅಪಘಾತ ಸಂಭವಿಸುವ ಬ್ಲ್ಯಾಕ್‌ ಸ್ಪಾಟ್‌ಗಳು ಟ್ರಾಫಿಕ್ ಅಪಘಾತಗಳು ಕೇಂದ್ರೀಕೃತವಾಗಿರುವ ಸ್ಥಳಗಳಾಗಿವೆ.

ಸಿಗ್ನಲ್‌ಗಳ ಅಳವಡಿಕೆ, ಜೀಬ್ರಾ ಕ್ರಾಸಿಂಗ್, ರಸ್ತೆ ಗುರುತುಗಳು, ಪಕ್ಕದ ರಸ್ತೆಗಳಿಗೆ ಬ್ರೇಕರ್, ಬಿಳಿ ಪಟ್ಟಿಗಳು, ಸೋಲಾರ್ ಲೈಟ್ ಮತ್ತು ಹೈಮಾಸ್ಟ್ ಲೈಟ್ ಅಳವಡಿಸುವುದು ಇವುಗಳು ಬ್ಲ್ಯಾಕ್‌ ಸ್ಪಾಟ್‌ ನಿವಾರಣೆಯ ಅಲ್ಪಾವಧಿಯ ವಿಧಾನಗಳು. ಸರ್ವಿಸ್‌ ರಸ್ತೆಗಳು, ಪ್ರಮುಖ ಜಂಕ್ಷನ್ ರಚನೆ, ಪಾದಚಾರಿ ಅಂಡರ್‌ಪಾಸ್, ವಾಹನ ಅಂಡರ್‌ಪಾಸ್‌, ಫ್ಲೈಓವರ್‌ಗಳು, ಫುಟ್-ಓವರ್ ಸೇತುವೆಗಳು ಮತ್ತಿತರ ನಿರ್ಮಾಣಗಳು ದೀರ್ಘಾವಧಿಯದಾಗಿವೆ.

ಸುಧಾರಣೆಗಳ ನಂತರ ಇಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆಯೇ ಎಂದು ನಿರ್ಧರಿಸಲು ಮುಂದಿನ ಮೂರು ವರ್ಷ ನಿಗಾ ವಹಿಸಲಾಗುತ್ತದೆ. ಜತೆಗೆ ಎನ್‌ಎಚ್‌ಐನ ಅಂಕಿಅಂಶಗಳು ಮತ್ತು ಪೊಲೀಸ್‌ ಇಲಾಖೆಯ ಅಂಕಿಅಂಶಗಳನ್ನು ಹೋಲಿಸಲಾಗುತ್ತದೆ.

ಇದನ್ನೂ ಓದಿ: Nitin Gadkari: ವಿಐಪಿ ಸೈರೆನ್‌ ಶೀಘ್ರ ಬಂದ್… ಹಾರ್ನ್ ಬದಲಿಗೆ ಕೊಳಲು ಸಂಗೀತ!

Exit mobile version