Site icon Vistara News

Nitin Gadkari: ಉತ್ತಮ ಕೆಲಸ ಮಾಡುವವರಿಗೆ ಅರ್ಹವಾದ ಗೌರವ ಸಿಗುವುದಿಲ್ಲ: ನಿತಿನ್ ಗಡ್ಕರಿ

gadkari

gadkari

ಮುಂಬೈ: ಅವಕಾಶವಾದಿ ರಾಜಕಾರಣಿಗಳು ಆಡಳಿತ ಪಕ್ಷದೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸುವ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಇಂತಹ “ಸಿದ್ಧಾಂತದ ಅವನತಿ” ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.

ತಮ್ಮ ಸಿದ್ಧಾಂತಗಳಿಗೆ ಬದ್ಧರಾಗಿರುವ ನಾಯಕರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಕುಸಿತವಾಗುತ್ತಿರುವುದು ಆತಂಕಕಾರಿ ಎಂದು ಸಚಿವರು ಅಭಿಪ್ರಾಯಪಟ್ಟರು. ʼʼನಾನು ಯಾವತ್ತೂ ತಮಾಷೆಗೆ ಹೇಳುತ್ತಿರುತ್ತೇನೆ. ಯಾವುದೇ ಸರ್ಕಾರ ಅಧಿಕಾರದಲ್ಲಿರಲಿ ಅಲ್ಲಿ ಒಳ್ಳೆಯ ಕೆಲಸ ಮಾಡುವವರಿಗೆ ಎಂದಿಗೂ ಅರ್ಹವಾದ ಗೌರವ ಸಿಗುವುದಿಲ್ಲ ಮತ್ತು ಕೆಟ್ಟ ಕೆಲಸ ಮಾಡುವವರಿಗೆ ಎಂದಿಗೂ ಶಿಕ್ಷೆಯಾಗುವುದಿಲ್ಲʼʼ ಎಂದು ಯಾರ ಹೆಸರನ್ನೂ ಉಲ್ಲೇಖಿಸದೆ ಅವರು ಹೇಳಿದ್ದಾರೆ.

ಉತ್ತಮ ಪ್ರದರ್ಶನ ತೋರುವ ಸಂಸದರಿಗೆ ಕೊಡ ಮಾಡುವ ಪ್ರಶಸ್ತಿ ವಿರತಣಾ ಸಮಾರಂಭದಲ್ಲಿ ಗಡ್ಕರಿ ಮಾತನಾಡಿದರು. ʼʼಚರ್ಚೆ, ವಾದ-ವಿವಾದಗಳಲ್ಲಿ ಮೂಡಿಬರುವ ವಿಭಿನ್ನ ಅಭಿಪ್ರಾಯಗಳಿಂದ ಸಮಸ್ಯೆಯಾಗುವುದಿಲ್ಲ. ಆದರೆ ವಿಭಿನ್ನ ಆಯೋಚನೆಗಳು ಮೂಡಿ ಬರದೇ ಇರುವುದು ಮುಖ್ಯ ಸಮಸ್ಯೆ. ತಮ್ಮ ಸಿದ್ಧಾಂತದ ಆಧಾರದ ಮೇಲೆ ದೃಢವಾಗಿ ನಿಲ್ಲುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ” ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ʼʼಭಾರತ ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಪ್ರಧಾನಿ ನರೇಂದ್ರ ಮೋದಿ ಅವರ ಮಾತಿನಲ್ಲಿ ಹೇಳುವುದಾದರೆ ಭಾರತ ಪ್ರಜಾಪ್ರಭುತ್ವದ ತಾಯಿ. ಯಾಕೆಂದರೆ ನಮ್ಮ ಈ ವಿಶಿಷ್ಟ ಪ್ರಜಾಪ್ರಭುತ್ವ ವ್ಯವಸ್ಥೆ ಇತರ ರಾಷ್ಟ್ರಗಳಿಗೆ ಮಾದರಿʼʼ ಎಂದು ಗಡ್ಕರಿ ಹೇಳಿದ್ದಾರೆ.

ʼʼರಾಜಕಾರಣಿಗಳು ಬಂದು ಹೋದರೂ ಅಂತಿಮವಾಗಿ ಅವರು ಕ್ಷೇತ್ರಗಳಲ್ಲಿ ಜನರಿಗೆ ಏನು ಮಾಡಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಇದರಿಂದಲೇ ಅವರಿಗೆ ತಮ್ಮ ಕ್ಷೇತ್ರದಲ್ಲಿ ಗೌರವ ಸಿಗುತ್ತದೆ. ಪ್ರಚಾರ ಮತ್ತು ಜನಪ್ರಿಯತೆ ಬೇಕು. ಅವರು ಸಂಸತ್ತಿನಲ್ಲಿ ಏನು ಮಾತನಾಡುತ್ತಾರೆ ಎನ್ನುವುದಕ್ಕಿಂತ ಆಯಾ ಕ್ಷೇತ್ರದ ಜನರಿಗಾಗಿ ಅವರು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದು ಮುಖ್ಯವಾಗುತ್ತದೆʼʼ ಎಂದು ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಗಡ್ಕರಿ ಅವರು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ಮಾಜಿ ರಕ್ಷಣಾ ಸಚಿವ ಜಾರ್ಜ್‌ ಫೆರ್ನಾಂಡೀಸ್‌ ಅವರಿಂದಲೂ ಸಾಕಷ್ಟು ಉತ್ತಮ ವಿಚಾರಗಳನ್ನು ಕಲಿತುಕೊಂಡಿದ್ದೇನೆ ಎಂದು ಹೇಳಿದ್ದಾರೆ. ʼʼಜಾರ್ಜ್‌ ಫೆರ್ನಾಂಡೀಸ್‌ ಅವರ ನಡವಳಿಕೆ, ಸರಳತೆ ಮತ್ತು ವ್ಯಕ್ತಿತ್ವದಿಂದ ನಾನು ಸಾಕಷ್ಟು ಕಲಿತಿದ್ದೇನೆ ಮತ್ತು ಅಟಲ್ ಬಿಹಾರಿ ವಾಜಪೇಯಿ ನಂತರ ನನ್ನನ್ನು ಹೆಚ್ಚು ಪ್ರಭಾವಿಸಿದ ವ್ಯಕ್ತಿ ಜಾರ್ಜ್ ಫರ್ನಾಂಡಿಸ್ʼʼ ಎಂದು ತಿಳಿಸಿದ್ದಾರೆ. ಮಾತ್ರವಲ್ಲ ಇತ್ತೀಚೆಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ಪಡೆದ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರ ಕಾರ್ಯ ವೈಖರಿಯನ್ನೂ ಶ್ಲಾಘಿಸಿದ್ದಾರೆ. ʼʼಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಕರ್ಪೂರಿ ಠಾಕೂರ್ ಅವರು ಆಟೋ ರಿಕ್ಷಾದಲ್ಲಿ ಸಂಚರಿಸಿದ್ದರು. ಇಂದಿನ ರಾಜಕಾರಣಿಗಳು ಇಂತಹ ಶ್ರೇಷ್ಠ ವ್ಯಕ್ತಿಗಳಿಂದ ಪ್ರಭಾವಿತರಾಗಬೇಕುʼʼ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Narendra Modi: ನೂತನ ಚುನಾವಣಾ ಆಯುಕ್ತರ ನೇಮಕ; ಇಂದು ಮೋದಿ ಮಹತ್ವದ ಸಭೆ

ಪ್ರಶಸ್ತಿ ಪುರಸ್ಕೃತರು

ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ಯಿಂದ ಅಮಾನತುಗೊಂಡಿರುವ ಲೋಕಸಭೆ ಸಂಸದ ಡ್ಯಾನಿಶ್ ಅಲಿ ಮತ್ತು ಸಿಪಿಐ-ಎಂ ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಅವರು ಅತ್ಯುತ್ತಮ ಹೊಸ ಸಂಸದ ಪ್ರಶಸ್ತಿ ಪಡೆದರು. ಬಿಜೆಪಿ ಸಂಸದೆ ಮೇನಕಾ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಸಂಸದ ರಾಮ್ ಗೋಪಾಲ್ ಯಾದವ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಕಾಲಿದಳದ ಸಂಸದೆ ಹರ್ಷಿಮ್ರತ್ ಕೌರ್ ಮತ್ತು ಬಿಜೆಪಿ ಸಂಸದೆ ಸರೋಜ್ ಪಾಂಡೆ ವರ್ಷದ ಅತ್ಯುತ್ತಮ ಮಹಿಳಾ ಸಂಸದೀಯ ಪ್ರಶಸ್ತಿಯನ್ನು ಸ್ವೀಕರಿಸಿದರು. ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಮತ್ತು ಬಿಜೆಡಿಯ ರಾಜ್ಯ ಸಭಾ ಸದಸ್ಯರಾದ ಸಸ್ಮಿತ್ ಪಾತ್ರಾ ವರ್ಷದ ಉತ್ತಮ ಸಂಸದೀಯ ಪಟು ಪ್ರಶಸ್ತಿಗೆ ಭಾಜನರಾದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version