ಪಟನಾ: ಸಂಜೆ 4ಗಂಟೆಗೆ ಬಿಹಾರ ರಾಜ್ಯಪಾಲ ಫಗು ಚೌಹಾಣ್ರನ್ನು ಭೇಟಿಯಾಗಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದ ನಿತೀಶ್ ಕುಮಾರ್, ಬಳಿಕ ಸುಮಾರು 6ಗಂಟೆ ಹೊತ್ತಗೆ ಆರ್ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಜತೆ ಸೇರಿ ಮತ್ತೊಮ್ಮೆ ರಾಜ್ಯಪಾಲರನ್ನು ಭೇಟಿಯಾಗಿ, ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಇನ್ನು ಜೆಡಿಯು-ಆರ್ಜೆಡಿ ಮೈತ್ರಿ ಸರ್ಕಾರಕ್ಕೆ ಕಾಂಗ್ರೆಸ್, ಸಿಪಿಐ (ಎಂ), ಸಿಪಿಐ (ಎಂಎಲ್) ಮತ್ತು ವಿಐಪಿ, ಎಚ್ಎಎಂ ಪಕ್ಷಗಳು ತಮ್ಮ ಬೆಂಬಲ ಪತ್ರವನ್ನು ನೀಡಿವೆ. ನಿತೀಶ್ ಕುಮಾರ್ 160ಕ್ಕೂ ಹೆಚ್ಚು ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಲಿದ್ದಾರೆ. ಆಗಸ್ಟ್ 10ರಂದೇ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ಇದೆ.
ಖುಷಿ ವ್ಯಕ್ತಪಡಿಸಿದ ಟಿಎಂಸಿ
ಬಿಹಾರದಲ್ಲಾದ ರಾಜಕೀಯ ಬೆಳವಣಿಗೆಯನ್ನು ಬಹುತೇಕ ಪ್ರತಿಪಕ್ಷಗಳು ಸ್ವಾಗತಿಸಿವೆ. ‘ಬಿಜೆಪಿಯಿಂದ ಜೆಡಿಯು ಬೇರ್ಪಟ್ಟಿರುವುದು, ದೇಶ ರಾಜಕಾರಣದಲ್ಲಿ ಬಿಜೆಪಿ ಗತಿ ಬದಲಾಗುತ್ತಿರುವುದಕ್ಕೆ ಸಾಕ್ಷಿ’ ಎಂದು ಹೇಳಿವೆ. ಹಾಗೇ, ಬಿಜೆಪಿಯ ಕಟ್ಟಾ ವಿರೋಧಿ ಪಕ್ಷವೆಂದೇ ಬಿಂಬಿತವಾಗಿರುವ ತೃಣಮೂಲ ಕಾಂಗ್ರೆಸ್ ಕೂಡ ಪ್ರತಿಕ್ರಿಯೆ ನೀಡಿದ್ದು, ‘ಬಿಜೆಪಿ ಜತೆ ಇರುವ ಯಾವ ಪಕ್ಷವೂ ಸುರಕ್ಷಿತವಲ್ಲ. ಬಿಜೆಪಿಯ ಕಬಳಿಕೆ ರಾಜಕಾರಣ ಪ್ರಾದೇಶಿಕ ಪಕ್ಷಗಳ ಅಸ್ತಿತ್ವಕ್ಕೇ ಧಕ್ಕೆ ತರುತ್ತಿವೆ’ ಎಂದು ಹೇಳಿದೆ.
ಅಂಕಿ-ಸಂಖ್ಯೆ ಏನು?
ಬಿಹಾರದಲ್ಲಿ ಒಟ್ಟು 243 ವಿಧಾನಸಭಾ ಕ್ಷೇತ್ರಗಳಿದ್ದು ಸರ್ಕಾರ ರಚನೆ ಮಾಡುವ ಪಕ್ಷದ ಬಳಿ 122 ಶಾಸಕರ ಬಲ ಇರಬೇಕು. ಇಷ್ಟು ದಿನ ಬಿಜೆಪಿಯ 77, ಜೆಡಿಯುದ 45 ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾ (HAM)ದ 4 ಸೇರಿ ಒಟ್ಟು 126 ಸಂಖ್ಯಾಬಲದ ಆಧಾರದಲ್ಲಿ ಬಿಹಾರ ಸರ್ಕಾರ ಇತ್ತು. ಇದೀಗ ಜೆಡಿಯು ತನ್ನ ಮೈತ್ರಿ ಪಕ್ಷ ಬಿಜೆಪಿಯಿಂದ ಹೊರಬಿದ್ದು, ಕಾಂಗ್ರೆಸ್ ಮತ್ತು ಆರ್ಜೆಡಿಯೊಂದಿಗೆ ಸೇರಿಕೊಂಡರೆ, ಜೆಡಿಯುದ 45, ಆರ್ಜೆಡಿ ಪಕ್ಷದ 79, ಕಾಂಗ್ರೆಸ್ನ 19, ಎಡಪಕ್ಷಗಳ 16 ಮತ್ತು ಎಚ್ಎಎಂಬ 4 ಸೇರಿ ಒಟ್ಟು 163 ಶಾಸಕರ ಬಲದೊಂದಿಗೆ ಸರ್ಕಾರ ರಚನೆಗೊಳ್ಳಲಿದೆ.
ಇದನ್ನೂ ಓದಿ: Bihar Politics | ಮತ್ತೆ ಮಗ್ಗಲು ಹೊರಳಿಸಿದ ನಿತೀಶ್; ವಿಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗುವ ಆಸೆ!