ಪಾಟ್ನಾ: ಬಿಹಾರದಲ್ಲಿ ಜೆಡಿಯು ಬಿಟ್ಟು ಹೋದ ಮೇಲೆ ಬಿಜೆಪಿ ಅಧಿಕಾರ ಕಳೆದುಕೊಂಡಿದೆ ಹೀಗೆ ಅಧಿಕಾರ ಹೋದ ಮೇಲೆ ಬಿಜೆಪಿಯ ನಾಯಕ, ಗೃಹ ಸಚಿವ ಅಮಿತ್ ಶಾ (Amit Shah) ಅವರು ಇಂದು ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿ, ಇಲ್ಲಿನ ಪೂರ್ಣಿಯಾದಲ್ಲಿ ಬೃಹತ್ ಱಲಿ ನಡೆಸಿದ್ದಾರೆ. ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ ‘2024ರಲ್ಲಿ ಪ್ರಧಾನಿಯಾಗುವ ಕನಸು ಕಾಣುತ್ತಿರುವ ನಿತೀಶ್ ಕುಮಾರ್ ಅದನ್ನು ನೆರವೇರಿಸಿಕೊಳ್ಳಲು ಲಾಲು ಪ್ರಸಾದ್ ಯಾದವ್ ತೊಡೆ ಮೇಲೆ ಕುಳಿತು, ಬಿಜೆಪಿ ಮತ್ತು ಬಿಹಾರ ಜನರಿಗೆ ವಿಶ್ವಾಸ ದ್ರೋಹ ಮಾಡಿದರು’ ಎಂದು ಆರೋಪಿಸಿದರು.
‘ನಾನಿಲ್ಲಿ ಇಂದು ಬಿಹಾರಕ್ಕೆ ಬಂದಿದ್ದು ಲಾಲು ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್ಗೆ ಹೊಟ್ಟೆ ಉರಿತಂದಿದೆ. ನಾನು ಬಿಹಾರಕ್ಕೆ ಬರುತ್ತಿರುವುದೇ ಅಶಾಂತಿ ಸೃಷ್ಟಿಸಲು ಎಂದು ಅವರು ಹೇಳಿದ್ದರು. ಆದರೆ ವಾಸ್ತವದಲ್ಲಿ ಅಶಾಂತಿಯನ್ನು ಹುಟ್ಟುಹಾಕುವುದು ಅವರ ಮೂಲ ಉದ್ದೇಶ. ಯಾರೂ ಭಯ ಪಡಬೇಕಿಲ್ಲ, ಗಡಿ ಜಿಲ್ಲೆಗಳು, ರಾಜ್ಯಗಳೆಲ್ಲ ಭಾರತದ ಒಂದು ಭಾಗವೇ ಆಗಿದೆ. ನರೇಂದ್ರ ಮೋದಿ ಆಡಳಿತದಲ್ಲಿ ಎಲ್ಲವೂ ಸುರಕ್ಷಿತವೇ ಎಂದು ಹೇಳುವ ಸಲುವಾಗಿಯೇ ನಾನಿಲ್ಲಿ ಬಂದಿದ್ದೇನೆ’ ಎಂದು ಅಮಿತ್ ಶಾ ತಿಳಿಸಿದರು.
ಹಾಗೇ, ‘ನಿತೀಶ್ ಕುಮಾರ್ಗೆ ಮುಖ್ಯಮಂತ್ರಿ ಹುದ್ದೆ ಕೊಡುವುದಾಗಿ ಪ್ರಧಾನಿ ಮೋದಿ ಭರವಸೆ ಕೊಟ್ಟಿದ್ದರು. ಅದರಂತೆ ನಡೆದುಕೊಂಡು, ಸಿಎಂ ಪೋಸ್ಟ್ ಕೊಟ್ಟಿದ್ದೇವೆ. ಆದರೆ ಈಗ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ, ನಿತೀಶ್ ಕುಮಾರ್ ಅವರು ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟು ನಮ್ಮ ನಂಬಿಕೆಗೇ ದ್ರೋಹ ಮಾಡಿದರು. ಬಿಹಾರದ ಜನರಿಗೆ ನೀವೇನೆಂದು ಗೊತ್ತಾಗಿದೆ. ಅವರೇ ಉತ್ತರ ಕೊಡುತ್ತಾರೆ ಎಂದು ಹೇಳಿದರು.
ಬಿಹಾರದಲ್ಲಿ ಬಿಜೆಪಿ ಮೈತ್ರಿ ಕಳೆದುಕೊಂಡ ಬಳಿಕ ಜೆಡಿಯು ಪಕ್ಷ ಆರ್ಜೆಡಿ ಮತ್ತು ಕಾಂಗ್ರೆಸ್ ಜತೆ ಸೇರಿ ಮಹಾ ಘಟ್ ಬಂಧನ್ ಸರ್ಕಾರವನ್ನು ರಚನೆ ಮಾಡಿದೆ. ಇದೀಗ ನಿತೀಶ್ ಕುಮಾರ್ ಬಿಜೆಪಿ ವಿರುದ್ಧ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಈ ಮಧ್ಯೆ ಅಮಿತ್ ಶಾ ಇಂದು ಬಿಹಾರಕ್ಕೆ ಭೇಟಿ ಕೊಟ್ಟಿದ್ದಾರೆ. ಇಂದು ಇಲ್ಲಿಯೇ ತಂಗಿ, ನಾಳೆಯೂ ಇಲ್ಲಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇಂದು ಸಂಜೆ 4ಗಂಟೆಗೆ ಅವರು ಕಿಶನ್ಗಂಜ್ನಲ್ಲಿ ಬಿಹಾರ ಬಿಜೆಪಿಯ ಎಲ್ಲ ಸಂಸದರು, ಶಾಸಕರು, ಎಮ್ಎಲ್ಸಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಇದನ್ನೂ ಓದಿ: ಇದು ಬಿಹಾರದ ಜನತೆಗೆ ಬಗೆದ ದ್ರೋಹ: ಮುರಿದ ಜೆಡಿಯು ಮೈತ್ರಿಗೆ ಬಿಜೆಪಿ ಮೊದಲ ಪ್ರತಿಕ್ರಿಯೆ