ನವ ದೆಹಲಿ: 8ನೇ ಬಾರಿಗೆ ಮುಖ್ಯಮಂತ್ರಿಯಾಗುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಿತೀಶ್ ಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ಪ್ರಧಾನಿ ನರೇಂದ್ರ ಮೋದಿಗೆ ನೇರವಾಗಿ ಸವಾಲು ಹಾಕಿದರು. ‘ನಾವು ನರೇಂದ್ರ ಮೋದಿಯವರನ್ನು 2024ರ ಚುನಾವಣೆಯಲ್ಲಿ ನೋಡಿಕೊಳ್ಳುತ್ತೇವೆ. ಇನ್ನೊಮ್ಮೆ ಮೋದಿ ಪ್ರಧಾನಿಯಾಗಲು ಬಿಡುವುದಿಲ್ಲ. 2024ರ ಚುನಾವಣೆ, 2014ರಂತೆ ಇರುವುದಿಲ್ಲ. ಪ್ರತಿಪಕ್ಷಗಳನ್ನೆಲ್ಲ ಒಗ್ಗೂಡಿಸುತ್ತೇನೆ. ಪ್ರತಿಪಕ್ಷ ದುರ್ಬಲ ಆಗಲು ಇನ್ನುಮುಂದೆ ಬಿಡುವುದೂ ಇಲ್ಲ. 2014ರಲ್ಲೇನೋ ನರೇಂದ್ರ ಮೋದಿ ಗೆದ್ದರು, ಹಾಗಂತ 2024ರಲ್ಲಿ ಗೆಲ್ಲುವುದು ಅಷ್ಟು ಸುಲಭವೇ? ಎಂದು ಪ್ರಶ್ನಿಸಿದರು. ಹಾಗೇ, ತಾನು 2024ರ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಅಲ್ಲ ಎಂಬುದನ್ನೂ ಸ್ಪಷ್ಟಪಡಿಸಿದರು.
ಪಕ್ಷದ ಎಲ್ಲ ಶಾಸಕರು, ಸಂಸದರು, ಪ್ರಮುಖರ ಆಶಯವೂ ಬಿಜೆಪಿ ತೊರೆಯಬೇಕು ಎಂಬುದೇ ಆಗಿತ್ತು. ಹಾಗಾಗಿಯೇ ಎನ್ಡಿಎ ಒಕ್ಕೂಟ ತೊರೆದೆವು. ನಿತೀಶ್ ಕುಮಾರ್ರನ್ನು ಐದು ಬಾರಿ ಬಿಹಾರದ ಮುಖ್ಯಮಂತ್ರಿ ಮಾಡಿದ್ದೇವೆ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ ನಿಜಕ್ಕೂ ನಾನು ಸಿಎಂ ಹುದ್ದೆಯ ಆಕಾಂಕ್ಷಿ ಆಗಿರಲೇ ಇಲ್ಲ. 2020ರ ಚುನಾವಣೆಯಲ್ಲಿ ಗೆದ್ದಾಗಲೂ ನನಗೆ ಸಿಎಂ ಪೋಸ್ಟ್ ಬೇಕಿರಲಿಲ್ಲ. 2014ರಲ್ಲಿ ಇದ್ದ ಸಮಯ ಈಗಿಲ್ಲ. ಆಗಿದ್ದಂತೆ ನಾವೂ ಈಗಿಲ್ಲ. 2024ರಲ್ಲಿ ನಾನಿರುತ್ತೇನೋ ಇಲ್ಲವೋ ಗೊತ್ತಿಲ್ಲ. ಯಾರ್ಯಾರಿಗೆ ಹೇಗೆ ಬೇಕೋ, ಹಾಗೇ ಮಾತಾಡಿಕೊಳ್ಳಲಿ ಎಂದೂ ನಿತೀಶ್ ಕುಮಾರ್ ಇಂದು ಹೇಳಿದ್ದಾರೆ.
ಬಿಜೆಪಿ ಮೈತ್ರಿ ಕಳಚಿಕೊಂಡ ನಿತೀಶ್ ಕುಮಾರ್ ಆರ್ಜೆಡಿ-ಕಾಂಗ್ರೆಸ್ ಜತೆ ಸೇರಿ, ಮಹಾ ಘಟ್ ಬಂಧನ್ ರಚಿಸಿದ್ದಾರೆ. ಇಂದು ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಮತ್ತು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಇಂದು ಪ್ರಮಾಣ ವಚನ ಸ್ವೀಕಾರಕ್ಕೂ ಪೂರ್ವ ಅವರು ಲಾಲೂ ಪ್ರಸಾದ್ ಯಾದವ್ಗೆ ಫೋನ್ ಕರೆ ಮಾಡಿದ್ದರು. ನಿನ್ನೆ (ಆಗಸ್ಟ್ 9) ರಾಬ್ರಿದೇವಿಯನ್ನೂ ಭೇಟಿಯಾಗಿದ್ದರು. ಶೀಘ್ರದಲ್ಲೇ ಬಿಹಾರ ನೂತನ ಸರ್ಕಾರದ ಸಂಪುಟವೂ ರಚನೆಯಾಗಲಿದೆ.
ಇದನ್ನೂ ಓದಿ: ಪ್ರತಿಪಕ್ಷಗಳಿಗೆ ಮಹಾ ಘಟ್ ಬಂಧನ್ ಸಂಭ್ರಮ; ಬಿಜೆಪಿಯಿಂದ ಬಿಹಾರದಾದ್ಯಂತ ಪ್ರತಿಭಟನೆ