Site icon Vistara News

2024ರ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಅಲ್ಲ ಎನ್ನುತ್ತಲೇ ಬಹುದೊಡ್ಡ ಭರವಸೆಯೊಂದನ್ನು ನೀಡಿದ ನಿತೀಶ್ ಕುಮಾರ್​ !

bihar cm nitish kumar

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಅವರಿಂದು ದೇಶದ ಜನರಿಗೆ ಬಹುದೊಡ್ಡ ಭರವಸೆ ಕೊಟ್ಟಿದ್ದಾರೆ. ಎನ್​ಡಿಎ ಒಕ್ಕೂಟದಿಂದ ಹೊರಬಿದ್ದು ಬಿಹಾರದಲ್ಲಿ ಆರ್​ಜೆಡಿಯೊಂದಿಗೆ ಮೈತ್ರಿ ರಚಿಸಿಕೊಂಡು ಮಹಾ ಘಟ್​ಬಂಧನ್​ ಸರ್ಕಾರ ರಚನೆ ಮಾಡಿರುವ ನಿತೀಶ್​ ಕುಮಾರ್​ ಸದ್ಯ ಬಿಹಾರದ ಮೇಲೆ ಮಾತ್ರ ಗಮನಹರಿಸುತ್ತಿಲ್ಲ. 2024ರ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟು, ಪ್ರತಿಪಕ್ಷಗಳನ್ನೆಲ್ಲ ಒಟ್ಟಾಗಿಸುವ ಕೆಲಸದಲ್ಲಿ ತೊಡಗಿದ್ದಾರೆ. ‘2024ರ ಚುನಾವಣೆಯಲ್ಲಿ ನೀವು ಪ್ರಧಾನಿ ಅಭ್ಯರ್ಥಿಯಾ ಎಂದು ಎಷ್ಟೇ ಬಾರಿ ಕೇಳಿದರೂ, ಅಲ್ಲ ಎಂದೇ ನಿತೀಶ್ ಕುಮಾರ್​ ಉತ್ತರ ನೀಡುತ್ತಿದ್ದರೂ, ಅವರ ವರ್ತನೆ ತದ್ವಿರುದ್ಧವಾಗಿದೆ. ನಿತೀಶ್ ಪ್ರಧಾನಿ ಹುದ್ದೆ ಆಕಾಂಕ್ಷಿ ಎಂಬುದನ್ನು ಸಾರಿ ಹೇಳುತ್ತಿದೆ’.

ಅದೇನೇ ಇದ್ದರೂ ಅವರು ಈಗ ನೀಡಿರುವ ಭರವಸೆ ಅಚ್ಚರಿಗೆ ಕಾರಣವಾಗಿದೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ನಿತೀಶ್​ ಕುಮಾರ್​, ‘2024ರಲ್ಲಿ ಕೇಂದ್ರದಲ್ಲಿ ನಾವು ಅಂದರೆ ಪ್ರತಿಪಕ್ಷಗಳ ಮೈತ್ರಿ ಸರ್ಕಾರ ರಚನೆಯಾದರೆ ದೇಶದ ಎಲ್ಲ ಹಿಂದುಳಿದ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡುತ್ತೇವೆ. ನಾನಿಲ್ಲಿ ಕೇವಲ ಬಿಹಾರದ ಬಗ್ಗೆ ಮಾತನಾಡುತ್ತಿಲ್ಲ. ಯಾವೆಲ್ಲ ರಾಜ್ಯಗಳು ಹಿಂದುಳಿದಿದ್ದಾವೋ ಅವಕ್ಕೆಲ್ಲ ವಿಶೇಷ ಸ್ಥಾನಮಾನ ಕೊಡುತ್ತೇವೆ’ ಎಂದು ತಿಳಿಸಿದ್ದಾರೆ. ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ನಿತೀಶ್​ ಕುಮಾರ್​ 2007ರಿಂದಲೂ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ. ಆಗಿನ ಕಾಂಗ್ರೆಸ್ ಸರ್ಕಾರವಿದ್ದಾಗಂತೂ ಸಿಕ್ಕಿರಲಿಲ್ಲ, ಆದರೆ 2014ರಲ್ಲಿ ಬಿಜೆಪಿ ಸರ್ಕಾರವೇ ಬಂದಿತ್ತು. ಮೈತ್ರಿಯಲ್ಲಿ ಇದ್ದುಕೊಂಡೇ ಇದೊಂದು ಬೇಡಿಕೆಯನ್ನು ಸದಾ ಕೇಂದ್ರ ಬಿಜೆಪಿ ಸರ್ಕಾರದ ಮುಂದೆ ಇಡುತ್ತಿದ್ದರು. ಆದರೆ ಅದು ನೆರವೇರಿಲ್ಲ.

ವಿಶೇಷ ಸ್ಥಾನಮಾನಕ್ಕೇನು ಮಾನದಂಡ?
ಯಾವ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂಬುದನ್ನು ನಿರ್ಧರಿಸುವುದು ರಾಷ್ಟ್ರೀಯ ಅಭಿವೃದ್ಧಿ ಮಂಡಳಿ (National Development Council). ಈ ಅಭಿವೃದ್ಧಿ ಮಂಡಳಿಯಲ್ಲಿ ಪ್ರಧಾನಮಂತ್ರಿಗಳು, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ಮತ್ತು ಯೋಜನಾ ಆಯೋಗದ ಸದಸ್ಯರು ಇರುತ್ತಾರೆ. ಹಾಗೇ, ಯಾವುದೇ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ಸುಮ್ಮನೆ ನೀಡಲು ಆಗುವುದಿಲ್ಲ. ಅದರದ್ದೇ ಆದ ಮಾನದಂಡಗಳಿದ್ದು, ಅದನ್ನು ಪಾಲಿಸಬೇಕಾಗುತ್ತದೆ ಮತ್ತು ಅದರ ಅನ್ವಯವೇ ಸ್ಪೆಶಲ್​ ಸ್ಟೇಟಸ್​ ಕೊಡಬೇಕಾಗುತ್ತದೆ.

ಪೂರ್ತಿಯಾಗಿ ಗುಡ್ಡಗಾಡು ಅಥವಾ ಕಠಿಣವಾದ ಭೂಪ್ರದೇಶವನ್ನು ಹೊಂದಿರುವ, ಕಡಿಮೆ ಜನಸಾಂದ್ರತೆಯನ್ನು ಹೊಂದಿದ್ದು, ದೊಡ್ಡ ಸಂಖ್ಯೆಯಲ್ಲಿ ಬುಡಕಟ್ಟು ಸಮುದಾಯವೇ ಇರುವ, ನೆರೆ ದೇಶಗಳೊಂದಿಗೆ ಗಡಿ ಹಂಚಿಕೊಂಡು, ಸೂಕ್ಷ್ಮ ಪ್ರದೇಶವನ್ನು ಹೊಂದಿರುವ, ಆರ್ಥಿಕವಾಗಿ ಮತ್ತು ಮೂಲಸೌಕರ್ಯದಲ್ಲಿ ತೀರ ಹಿಂದುಳಿದಿರುವ ರಾಜ್ಯಗಳಿಗೆ ವಿಶೇಷ ಸ್ಥಾನಮಾನವನ್ನು ಕೊಡಬಹುದು. ಇಷ್ಟು ಮಾನದಂಡಗಳ ಜತೆ ಇನ್ನೂ ಹತ್ತು-ಹಲವು ಸಂಗತಿಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದ ಬಳಿಕವಷ್ಟೇ ಸ್ಪೆಶಲ್ ಸ್ಟೇಟಸ್​ ಕೊಡಬೇಕಾಗುತ್ತದೆ.

ವಿಶೇಷ ಸ್ಥಾನಮಾನದಿಂದೇನು ಪ್ರಯೋಜನ?
1. ಹೀಗೆ ವಿಶೇಷ ಸ್ಥಾನಮಾನ ಹೊಂದಿದ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಯಾವುದೇ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕು ಎಂದಾಗ ಅದರ ಶೇ.90ರಷ್ಟು ವೆಚ್ಚವನ್ನು ಕೇಂದ್ರವೇ ಭರಿಸುತ್ತದೆ ಮತ್ತು ಶೇ.10ರಷ್ಟರ ಸಾಲವನ್ನು ರಾಜ್ಯಕ್ಕೆ ನೀಡಿದರೂ, ಶೂನ್ಯ ಬಡ್ಡಿದರ ಇರುತ್ತದೆ.
2. ಕೇಂದ್ರ ಸರ್ಕಾರದ ನಿಧಿಗಳಲ್ಲಿ ಮೊದಲ ಆದ್ಯತೆ ಸಿಗುತ್ತದೆ.
3. ಸ್ಪೆಶಲ್​ ಸ್ಟೇಟಸ್​​ ಹೊಂದಿರುವ ರಾಜ್ಯಗಳಲ್ಲಿ ಅಬಕಾರಿ ಸುಂಕದ ಮೇಲೆ ರಿಯಾಯಿತಿ ಇರುತ್ತದೆ
4. ಕೇಂದ್ರ ಸರ್ಕಾರದ ಒಟ್ಟಾರೆ ಬಜೆಟ್​ನ ಶೇ.30ರಷ್ಟು ಈ ವಿಶೇಷ ಸ್ಥಾನಮಾನದ ರಾಜ್ಯದ ಪಾಲಾಗುತ್ತದೆ.
5. ಸಾಲ ವಿನಿಮಯ, ಸಾಲ ವಿನಾಯಿತಿಯಂಥ ಸೌಲಭ್ಯಗಳು ಈ ರಾಜ್ಯಗಳಿಗೆ ದೊರೆಯುತ್ತವೆ.

ಇದನ್ನೂ ಓದಿ: ರಾಹುಲ್​ ಗಾಂಧಿ ಭೇಟಿ ಮಾಡಿದ ನಿತೀಶ್​ ಕುಮಾರ್​; ಲೋಕಸಭೆ ಚುನಾವಣೆ ಪೂರ್ವ ಒಗ್ಗಟ್ಟಿನ ಮಂತ್ರ

Exit mobile version