ಪಟನಾ: ಪ್ರತಿಪಕ್ಷಗಳ ವಿರುದ್ಧ, ರಾಜಕೀಯ ಎದುರಾಳಿಗಳ ವಿರುದ್ಧ ಎಲ್ಲ ರಾಜಕಾರಣಿಗಳಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕೂಡ ಟೀಕಿಸುತ್ತಾರೆ. ವ್ಯಂಗ್ಯ, ಆರೋಪ, ವಾಗ್ಬಾಣಗಳ ಮೂಲಕ ಕುಟುಕುತ್ತಾರೆ. ಆದರೆ, ನಿತೀಶ್ ಕುಮಾರ್ (Nitish Kumar) ಅವರು ಬಹುತೇಕ ಸಂದರ್ಭಗಳಲ್ಲಿ ತಾಳ್ಮೆ ಕಳೆದುಕೊಳ್ಳುವುದಿಲ್ಲ. ಆರೋಪ-ಪ್ರತ್ಯಾರೋಪದ ಸಂದರ್ಭದಲ್ಲೂ ಅವರು ಸ್ಥಿಮಿತ ಕಳೆದುಕೊಳ್ಳುವುದಿಲ್ಲ. ಆದರೆ, ಇಂತಹ ನಿತೀಶ್ ಕುಮಾರ್ ಅವರು ಬಿಹಾರ (Bihar) ವಿಧಾನಸಭೆಯಲ್ಲೇ ತಾಳ್ಮೆ ಕಳೆದುಕೊಂಡು, ಆರ್‌ಜೆಡಿ ಶಾಸಕಿಯರ ವಿರುದ್ಧ ಹರಿಹಾಯ್ದಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್ (Viral Video) ಆಗಿದೆ.
ರಾಜ್ಯದಲ್ಲಿ ಮೀಸಲಾತಿ ಕುರಿತು ತಿದ್ದುಪಡಿ ಮಾಡಲಾದ ಕಾನೂನುಗಳನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂದು ವಿಧಾನಸಭೆಯಲ್ಲಿ ಆರ್‌ಜೆಡಿ ಶಾಸಕ-ಶಾಸಕಿಯರು ಆಗ್ರಹಿಸುತ್ತಿದ್ದರು. ಅದರಲ್ಲೂ, ಶಾಸಕಿಯರು ನಿತೀಶ್ ಕುಮಾರ್ ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. ಇದರ ಕುರಿತು ನಿತೀಶ್ ಕುಮಾರ್ ಅವರು ಮಾತನಾಡುತ್ತಿರುವಾಗಲೇ ಶಾಸಕಿಯರು ಘೋಷಣೆ ಕೂಗುತ್ತಿದ್ದರು. ಆಗ ತಾಳ್ಮೆ ಕಳೆದುಕೊಂಡ ಸಿಎಂ, ಆರ್‌ಜೆಡಿ ಶಾಸಕಿ ರೇಖಾ ದೇವಿ ಅವರತ್ತ ನೋಡುತ್ತ, “ನೀವೊಬ್ಬ ಮಹಿಳೆಯಾಗಿದ್ದೀರಿ, ನಿಮಗೆ ಗೊತ್ತಾಗುವುದಿಲ್ಲವೇ” ಎಂಬುದಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"Arey Mahila ho…… Kuch Jaanti nahi ho…" CM Nitish Kumar to RJD MLA Rekha Devi.
— Mohammed Zubair (@zoo_bear) July 24, 2024
Imagine the outrage by Media, BJP and Women Commission, If Nitish Kumar wasn't part of NDA. pic.twitter.com/xWkoR0w5fN
ನಿತೀಶ್ ಕುಮಾರ್ ಅವರು ಮೀಸಲಾತಿ ವಿರೋಧಿಯಾಗಿದ್ದಾರೆ ಎಂದೆಲ್ಲ ಶಾಸಕಿಯರು ಘೋಷಣೆ ಕೂಗುತ್ತಿದ್ದರು. ಇದರಿಂದಾಗಿ ನಿತೀಶ್ ಕುಮಾರ್ ಕೆರಳಿದರು. “ನೀವೊಬ್ಬ ಮಹಿಳೆಯಾಗಿದ್ದೀರಿ. ಬಿಹಾರದಲ್ಲಿ ನಾನು ಮುಖ್ಯಮಂತ್ರಿಯಾದ ಬಳಿಕವೇ ಸರ್ಕಾರದ ಯೋಜನೆಗಳ ಬಾಕಿ ಹಣವು ಹೆಣ್ಣುಮಕ್ಕಳಿಗೆ ಸಿಗುತ್ತಿದೆ ಎಂಬುದು ನಿಮಗೆ ಗೊತ್ತೇ? ನೀವೊಬ್ಬ ಮಹಿಳೆಯಾಗಿಯೂ ಇದರ ಬಗ್ಗೆ ಗೊತ್ತಿಲ್ಲ. ನೀವು ನನಗೆ ಹಾಯ್ ಹಾಯ್ (ಡೌನ್ ಡೌನ್) ಎಂದು ಹೇಳುತ್ತೀರಿ ಎಂದಾದರೆ, ಎಲ್ಲರಿಗೂ ಹಾಯ್ ಹಾಯ್ ಹೇಳಿ” ಎಂದು ಗದರಿದರು.
ನಿತೀಶ್ ಕುಮಾರ್ ಅವರು ರೇಖಾ ದೇವಿ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಲೇ ಪ್ರತಿಪಕ್ಷಗಳ ಸದಸ್ಯರು ಗಲಾಟೆಯನ್ನು ಇನ್ನೂ ಹೆಚ್ಚಿಸಿದರು. ನಿತೀಶ್ ಕುಮಾರ್ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ನಿತೀಶ್ ಕುಮಾರ್ ಅವರು ಶಾಸಕಿ ಮೇಲೆ ಸಿಟ್ಟಾದ ವಿಡಿಯೊ ವೈರಲ್ ಆಗುತ್ತಲೇ, ಬಿಹಾರ ಮುಖ್ಯಮಂತ್ರಿ ವಿರುದ್ಧ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಯಾದವರು ಮೊದಲು ಹೆಣ್ಣುಮಕ್ಕಳಿಗೆ ಗೌರವ ಕೊಡುವುದನ್ನು ಕಲಿಯಬೇಕು ಎಂದೆಲ್ಲ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: Nitish Kumar: ಬಿಹಾರಕ್ಕೆ ವಿಶೇಷ ಸ್ಥಾನಮಾನ ಕೊಡಲ್ಲ ಎಂದ ಮೋದಿ ಸರ್ಕಾರ; ನಿತೀಶ್ ಕುಮಾರ್ ಬಂಡಾಯ ನಿಶ್ಚಿತ?