ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿಯನ್ನು ಸೋಲಿಸುವ ದಿಸೆಯಲ್ಲಿ ಇಂಡಿಯಾ ಒಕ್ಕೂಟ ರಚನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ನಿತೀಶ್ ಕುಮಾರ್ (Nitish Kumar) ಅವರು ಅಚ್ಚರಿಯ ಬೆಳವಣಿಗೆಯಲ್ಲಿ ಇಂಡಿಯಾ ಒಕ್ಕೂಟ ತೊರೆದಿದ್ದಾರೆ. ಎನ್‌ಡಿಎ ಜತೆಗೂಡಿ ಬಿಹಾರದಲ್ಲಿ ಸರ್ಕಾರ ರಚಿಸಿರುವ ನಿತೀಶ್ ಕುಮಾರ್ ಅವರು ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಅಷ್ಟೇ ಅಲ್ಲ, “ಇನ್ನೆಂದೂ ಎನ್‌ಡಿಎ ಮೈತ್ರಿಕೂಟವನ್ನು ತೊರೆಯುವುದಿಲ್ಲ” ಎಂಬುದಾಗಿ ಮೋದಿ ಅವರಿಗೆ ನಿತೀಶ್ ಕುಮಾರ್ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಲೋಕಸಭೆ ಚುನಾವಣೆ, ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟದ ಆಡಳಿತ ಸೇರಿ ನರೇಂದ್ರ ಮೋದಿ ಅವರ ಜತೆ ನಿತೀಶ್ ಕುಮಾರ್ ಅವರು ಹಲವು ರಾಜಕೀಯ ವಿಚಾರಗಳನ್ನು ಚರ್ಚಿಸಿದ್ದಾರೆ ಎನ್ನಲಾಗಿದೆ. ನರೇಂದ್ರ ಮೋದಿ ಅವರಲ್ಲದೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನೂ ನಿತೀಶ್ ಕುಮಾರ್ ಭೇಟಿಯಾಗಿ, ಹಲವು ವಿಷಯಗಳ ಕುರಿತು ಚರ್ಚಸಿದ್ದಾರೆ.
Bihar CM Nitish Kumar meets Prime Minister Narendra Modi in Delhi pic.twitter.com/aILDt0AsIJ
— ANI (@ANI) February 7, 2024
ಇದನ್ನೂ ಓದಿ: INDIA Bloc: ನಿತೀಶ್ ಅವರಿಂದ ನೆರವೇರಿತು ಇಂಡಿಯಾ ಮೈತ್ರಿಕೂಟದ ಅಂತಿಮ ವಿಧಿ ವಿಧಾನ; ಕಾಂಗ್ರೆಸ್ ನಾಯಕ
ಲೋಕಸಭೆ ಚುನಾವಣೆ ಮೇಲೆ ಏನು ಪರಿಣಾಮ?
ನಿತೀಶ್ ಕುಮಾರ್ ಅವರು ಇಂಡಿಯಾ ಒಕ್ಕೂಟವನ್ನು ತೊರೆದಿರುವ ಪರಿಣಾಮವು ಲೋಕಸಭೆ ಚುನಾವಣೆಯಲ್ಲಿಯೇ ಹೆಚ್ಚು ಬೀರಲಿದೆ. ಬಿಹಾರದಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಾಗಲೆಲ್ಲ ಜೆಡಿಯುಗೆ ಹೆಚ್ಚು ಅನುಕೂಲವಾಗಲಿದೆ. ಅದರಲ್ಲೂ, 2019ರ ಲೋಕಸಭೆ ಚುನಾವಣೆ ಫಲಿತಾಂಶವು ಬಿಜೆಪಿ, ಜೆಡಿಯು ಹಾಗೂ ಲೋಕ ಜನ ಶಕ್ತಿ (LJP) ಮೈತ್ರಿ ಪರವಾಗಿತ್ತು. ಹಾಗಾಗಿ, ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೆ ಜೆಡಿಯುಗೆ ಹೆಚ್ಚಿನ ಲಾಭವಾಗುತ್ತದೆ ಎಂಬುದು ನಿತೀಶ್ ಕುಮಾರ್ ಅವರ ಲೆಕ್ಕಾಚಾರವಾಗಿದೆ ಎಂದು ಮೂಲಗಳು ತಿಳಿಸಿವೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಹಾರದ ಒಟ್ಟು 40 ಕ್ಷೇತ್ರಗಳ ಪೈಕಿ ಎನ್‌ಡಿಎ ಒಕ್ಕೂಟದ ಜೆಡಿಯು 17, ಬಿಜೆಪಿ 16 ಹಾಗೂ ಎಲ್‌ಜೆಪಿ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ಒಂದೇ ಕ್ಷೇತ್ರದಲ್ಲಿ ಗೆದ್ದಿತ್ತು.
ನಿತೀಶ್ ಕುಮಾರ್ ಅವರು ಎನ್‌ಡಿಎ ಮೈತ್ರಕೂಟ ಸೇರಿದ ಕಾರಣ ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಿಜೆಪಿ ಮತ್ತಷ್ಟು ಪ್ರಬಲವಾಗಿದೆ. ಬಿಜೆಪಿಯನ್ನು ಶತಾಯ ಗತಾಯ ಸೋಲಿಸಬೇಕು ಎಂಬ ಧ್ಯೇಯದಿಂದ ಅಸ್ತಿತ್ವಕ್ಕೆ ಬಂದಿರುವ ಇಂಡಿಯಾ ಒಕ್ಕೂಟವು ಲೋಕಸಭೆ ಚುನಾವಣೆಯ ಮೊದಲೇ ಛಿದ್ರ ಛಿದ್ರವಾಗಿದೆ. ಈಗಾಗಲೇ ಇಂಡಿಯಾ ಒಕ್ಕೂಟದಿಂದ ಹೊರಬಂದಿರುವ ಮಮತಾ ಬ್ಯಾನರ್ಜಿ ಅವರ ಟಿಎಂಸಿಯು ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದೆ. ಪಂಜಾಬ್‌ನಲ್ಲಿ ಆಪ್ ಕೂಡ ಮೈತ್ರಿ ಇಲ್ಲದೆಯೇ ಸ್ಪರ್ಧಿಸಲು ಮುಂದಾಗಿದೆ. ಇದರ ಬೆನ್ನಲ್ಲೇ, ನಿತೀಶ್ ಕುಮಾರ್ ಅವರು ಕೂಡ ಮೈತ್ರಿಕೂಟಕ್ಕೆ ವಿದಾಯ ಹೇಳಿರುವುದು ಒಕ್ಕೂಟದ ಒಗ್ಗಟ್ಟಿಗೆ ಭಾರಿ ಪೆಟ್ಟು ಬಿದ್ದಂತಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ