Site icon Vistara News

Nitish Kumar: ಪ್ರತಿಪಕ್ಷಗಳ ಮೈತ್ರಿ; ನಿಮ್ಮ ಜತೆ ಇರುವೆ, ಬಿಹಾರ ಸಿಎಂ ನಿತೀಶ್‌ಗೆ ದಿಲ್ಲಿ ಸಿಎಂ ಕೇಜ್ರಿವಾಲ್ ಭರವಸೆ

Arvind Kejriwal- Nitish Kumar held talks again, for opposition unity

ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ವೇದಿಕೆ ಸಿದ್ಧಪಡಿಸುತ್ತಿರುವ ಪ್ರತಿಪಕ್ಷಗಳು ನಾಯಕರು ಮೈತ್ರಿ ಸಾಧಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ (Nitish Kumar) ಅವರು, ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ, ದಿಲ್ಲಿ ಸಿಎಂ ಹಾಗೂ ಆಮ್ ಆದ್ಮಿ ಪಾರ್ಟಿ ನಾಯಕ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮೊನ್ನೆಯಷ್ಟೇ ಸೋನಿಯಾ ಗಾಂಧಿ ಅವರು ಸಂವಿಧಾನ ರಕ್ಷಣೆಗೆ ಸಮಾನ ಮನಸ್ಕ ಪಕ್ಷಗಳ ಜತಗೆ ಮೈತ್ರಿಗೆ ಕಾಂಗ್ರೆಸ್ ಸಿದ್ಧ ಎಂದು ಹೇಳಿದ್ದರು. ಆ ಬೆನ್ನಲ್ಲೇ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಮತ್ತೊಂದೆಡೆ, ಪ್ರತಿಪಕ್ಷಗಳ ಪ್ರಯತ್ನವನ್ನು ವ್ಯಂಗ್ಯ ಮಾಡಿರುವ ಕೇಂದ್ರ ಸಚಿವ ರಾಮದಾಸ್ ಅಠಾವಳೆ, ಪ್ರತಿಪಕ್ಷಗಳ ನಾಯಕರನ್ನು ಎದುರಿಸಲು ಪ್ರಧಾನಿ ಮೋದಿ ಒಬ್ಬರೆ ಸಾಕು ಎಂದು ಹೇಳಿದ್ದಾರೆ.

ಒಂದೇ ವೇದಿಕೆಯಡಿ ಎಲ್ಲ ಪ್ರತಿಪಕ್ಷಗಳ ನಾಯಕರನ್ನು ಒಂದುಗೂಡಿಸುವ ಪ್ರಯತ್ನವನ್ನು ನಿತೀಶ್ ಕುಮಾರ್ ಅವರು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಇದರಲ್ಲಿ ಭಾಗಿದಾರರು. ಅದು ಯಾವ ರೀತಿ ಮುಂದೆ ತೆಗೆದುಕೊಂಡು ಹೋಗುತ್ತೆ ಎಂದು ಕಾದು ನೋಡಬೇಕು ಎಂದು ನಿತೀಶ್ ಕುಮಾರ್ ಭೇಟಿಯ ಬಳಿಕ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ದೇಶವು ಅತ್ಯಂತ ಕಷ್ಟಕರ ಸಮಯವನ್ನು ಎದುರಿಸುತ್ತಿದೆ. ಸ್ವಾತಂತ್ರ್ಯದ ನಂತರ ಇಂದು ದೇಶದಲ್ಲಿ ಅತ್ಯಂತ ಭ್ರಷ್ಟ ಸರ್ಕಾರವಿದೆ ಎಂದು ನಾನು ಹಲವು ಬಾರಿ ಹೇಳಿದ್ದೇನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಬಿಜೆಪಿಯೊಂದಿಗೆ, ಕೇಂದ್ರವು ಲೆಫ್ಟಿನೆಂಟ್ ಗವರ್ನರ್ ಮೂಲಕ ದೆಹಲಿಯ ಪ್ರಗತಿಯನ್ನು ಹಳಿತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ಆಗಾಗ ಕೇಜ್ರಿವಾಲ್ ಆರೋಪಿಸುತ್ತಿರುತ್ತಾರೆ.

ಪ್ರಧಾನಿ ಮೋದಿ ಒಬ್ಬರೆ ಸಾಕು ಎಂದ ಕೇಂದ್ರ ಸಚಿವ

ಪ್ರತಿಪಕ್ಷಗಳನ್ನು ಒಂದುಗೂಡಿಸುತ್ತಿರುವ ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಪ್ರಯತ್ನವನ್ನು ವ್ಯಂಗ್ಯ ಮಾಡಿರುವ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರು, ಪ್ರತಿಪಕ್ಷಗಳ ನಾಯಕರನ್ನು ಸೋಲಿಸಲು ಪ್ರಧಾನಿ ಮೋದಿ ಒಬ್ಬರೆ ಸಾಕು ಎಂದು ಹೇಳಿದ್ದಾರೆ. ಒಂದು ವೇಳೆ ಪ್ರತಿಪಕ್ಷಗಳು ಒಂದಾಗುವ ಪ್ರಯತ್ನ ಮಾಡುತ್ತಿದ್ದರೆ, ಮಾಡಲಿ. ಈ ಎಲ್ಲ ನಾಯಕರನ್ನು ಎದುರಿಸಲು ಪ್ರಧಾನಿ ಮೋದಿ ಒಬ್ಬರೆ ಸಾಕು. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಎನ್‌ಡಿಎ ಬಹಳ ಗಟ್ಟಿಮುಟ್ಟಾಗಿದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಖರ್ಗೆ, ರಾಹುಲ್ ಗಾಂಧಿ ಭೇಟಿ ಮಾಡಿದ ನಿತೀಶ್

ಕಾಂಗ್ರೆಸ್‌ನ ವರಿಷ್ಠ ನಾಯಕಿ ಸೋನಿಯಾ ಗಾಂಧಿ ಅವರು ಮಂಗಳವಾರವಷ್ಟೇ, ಸಂವಿಧಾನ ರಕ್ಷಣೆಗೆ ಸಮಾನ ಮನಸ್ಕ ಪಕ್ಷಗಳ ಜತೆಗೆ ಕಾಂಗ್ರೆಸ್ ಮೈತ್ರಿಗೆ ಸಿದ್ಧವಿದೆ ಎಂದು ಲೇಖನದ ಮೂಲಕ ಸಂದೇಶ ರವಾನಿಸಿದ್ದಾರೆ. ಅದರ ಭಾಗವಾಗಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್(Nitish Kumar), ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ (Tejeshwi Yadav) ಹಾಗೂ ಜೆಡಿಯು ಮುಖ್ಯಸ್ಥ ರಾಜೀವ್ ರಂಜನ್ ಸಿಂಗ್ ಅವರು ಬುಧವಾರ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ರಾಹುಲ್ ಗಾಂಧಿ (Rahul Gandhi) ಅವರನ್ನು ದಿಲ್ಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.

ಮೂರು ದಿನಗಳ ಕಾಲ ದಿಲ್ಲಿ ಭೇಟಿಗೆ ಆಗಮಿಸಿರುವ ದಿಲ್ಲಿ ಸಿಎಂ ನಿತೀಶ್ ಕುಮಾರ್ ಅವರು ಕಾಂಗ್ರೆಸ್ ಪಕ್ಷ ಹಾಗೂ ಇತರ ರಾಜಕೀಯ ಪಕ್ಷಗಳ ನಡುವಿನ ಮೈತ್ರಿಗೆ ಬೆಸುಗೆ ಹಾಕುವ ಕೆಲಸ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ನಾಯಕರ ಸಭೆಯು ದಿಲ್ಲಿಯ ಮಲ್ಲಿಕಾರ್ಜುನ ಖರ್ಗೆ ಅವರು ನಿವಾಸದಲ್ಲಿ ನಡೆಯಿತು. ಕೇಂದ್ರದಲ್ಲಿ ಬಿಜೆಪಿ ವಿರುದ್ದ ಪ್ರಬಲ ಒಗ್ಗಟ್ಟಿನ ಪ್ರತಿಪಕ್ಷಗಳ ಕೂಟವನ್ನು ರಚಿಸುವುದು ನಿತೀಶ್ ಕುಮಾರ್ ಅವರ ಅಜೆಂಡಾ ಆಗಿದೆ.

ಈ ಮೊದಲು ಲಾಲು ಪ್ರಸಾದ್ ಯಾದವ್ ಅವರನ್ನು ನಿತೀಶ್ ಕುಮಾರ್ ಭೇಟಿ ಮಾಡಿ ಮಾತುಕತೆ ನಡೆಸಿದರು. ಉದ್ಯೋಗಕ್ಕಾಗಿ ಭೂಮಿ ಹಗರಣ ಸಂಬಂಧ ವಿಚಾರಣೆಗೆ ಸಿಬಿಐ ಕರೆದಿರುವ ಹಿನ್ನೆಲೆಯಲ್ಲಿ ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಅವರು ಈಗಾಗಲೇ ದಿಲ್ಲಿಯಲ್ಲೇ ಬೀಡು ಬಿಟ್ಟಿದ್ದಾರೆ.

ಇದನ್ನೂ ಓದಿ: Bihar CM | ಯುಪಿಯಿಂದ ಸ್ಪರ್ಧಿಸಲಿದ್ದಾರೆ ಪಿಎಂ ಅಭ್ಯರ್ಥಿ, ಬಿಹಾರ ಸಿಎಂ ನಿತೀಶ್ ಕುಮಾರ್!

ಬಿಜೆಪಿಯನ್ನು ಎದುರಿಸಲು ಸಮಾನ ಮನಸ್ಕ ಪಕ್ಷಗಳೊಂದಿಗೆ ಒಗ್ಗೂಡಿಸುವ ಪ್ರಯತ್ನದಲ್ಲಿ, ಖರ್ಗೆ ಇತ್ತೀಚೆಗೆ ಹಲವಾರು ವಿರೋಧ ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಅವರು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಸಹ ಸಂಪರ್ಕಿಸಿದ್ದಾರೆ ಮತ್ತು ಮುಂಬರುವ ವಾರಗಳಲ್ಲಿ ಉನ್ನತ ವಿರೋಧ ಪಕ್ಷದ ನಾಯಕರೊಂದಿಗೆ ಸಭೆ ನಡೆಸುವ ಸಾಧ್ಯತೆಯಿದೆ.

Exit mobile version