Site icon Vistara News

Nitish Kumar: ಬಿಹಾರದಲ್ಲಿ ಬಿಜೆಪಿ ಮೈತ್ರಿಕೂಟದ ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣ ವಚನ

Nitish Kumar

Bihar CM Nitish Kumar admitted to Patna Medanta Hospital as health deteriorated suddenly

ನವದೆಹಲಿ: ಬಿಹಾರದಲ್ಲಿ (Bihar Politics) ಬಿಜೆಪಿ ನೇತೃತ್ವದ ಮೈತ್ರಿಕೂಟದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ (Nitish Kumar) ಅವರು ಭಾನುವಾರ ಸಾಯಂಕಾಲ ಪ್ರಮಾಣ ವಚನ ಸ್ವೀಕರಿಸಿದರು. ಇವರ ಜತೆಗೆ, ಬಿಹಾರ ರಾಜ್ಯ ಬಿಜೆಪಿ (BJP Party ಘಟಕದ ಅಧ್ಯಕ್ಷ ಸಾಮ್ರಾಟ್ ಚೌಧರಿ (Samrat Chaudhary) ಅವರು ಅಧಿಕಾರ ಸ್ವೀಕರಿಸಿದ್ದಾರೆ.

ಭಾನುವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿಜೆಪಿ ಶಾಸಕರು ಜೆಡಿಯು ಬೆಂಬಲದೊಂದಿಗೆ ಎನ್‌ಡಿಎ ಸರ್ಕಾರ ರಚಿಸಲು ಒಪ್ಪಿಗೆ ನೀಡಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಸಾಮ್ರಾಟ್ ಚೌಧರಿ ಅವರನ್ನು ರಾಜ್ಯ ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಕ ಮಾಡಲಾಗಿದೆ. ವಿಜಯ್ ಸಿನ್ಹಾ ಅವರನ್ನು ಉಪ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಬಿಹಾರ ಬಿಜೆಪಿ ಉಸ್ತುವಾರಿಯಾಗಿರುವ ವಿಜಯ್ ಥಾವಡೆ ಅವರು ಹೇಳಿದ್ದಾರೆ.

ಎನ್‌ಡಿಎ ಸರ್ಕಾರದಲ್ಲಿ ಚೌಧರಿ ಮತ್ತು ಸಿನ್ಹಾ ಅವರು ಬಿಜೆಪಿಯ ಉಪಮುಖ್ಯಂತ್ರಿಳಾಗುವುದು ಬಹುತೇಕ ಖಚಿತ ಎಂದು ಬಿಜೆಪಿಯ ಹಿರಿಯ ನಾಯಕ ತಾರಕಿಶೋರ್ ಪ್ರಸಾದ್ ಅವರು ಹೇಳಿದ್ದಾರೆ. ನಿತಿನ್ ನಬಿನ್, ಶಹನವಾಜ್ ಹುಸೇನ್, ರಮಪ್ರೀತ್ ಪಾಸ್ವಾನ್, ನೀರಜ್ ಸಿಂಗ್ ಬಬ್ಲೂ ಸೇರಿದಂತೆ ಇನ್ನು ಕೆಲವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಭಾನುವಾರ ಬೆಳಗ್ಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಿತೀಶ್‌ ಕುಮಾರ್

ಬಿಹಾರದಲ್ಲಿ ಕೊನೆಗೂ ಎಲ್ಲ ಊಹಾಪೋಹಗಳಿಗೆ ನಿತೀಶ್‌ ಕುಮಾರ್‌ (Nitish Kumar) ಅವರು ಇತಿಶ್ರೀ ಹಾಡಿದ್ದಾರೆ. ಆರ್‌ಜೆಡಿ ಜತೆಗಿನ ಮೈತ್ರಿ (JDU RJD Alliance) ಮುರಿದುಕೊಂಡ ನಿತೀಶ್‌ ಕುಮಾರ್‌ ಅವರು ರಾಜಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ (Bihar Politics) ನೀಡಿದ್ದಾರೆ. ಇದರೊಂದಿಗೆ ಬಿಹಾರದಲ್ಲಿ ಮಹಾಘಟಬಂಧನದಿಂದ ಹೊರಬಂದಿರುವ ನಿತೀಶ್‌ ಕುಮಾರ್‌ ಅವರು ತಮ್ಮ ದೀರ್ಘಕಾಲದ ಮೈತ್ರಿಯಾದ ಎನ್‌ಡಿಎ ಜತೆ ಮತ್ತೆ ಕೈಜೋಡಿಸಿದ್ದಾರೆ. ಭಾನುವಾರ ಸಂಜೆ 5 ಗಂಟೆಗೆ ಬಿಜೆಪಿ ಬೆಂಬಲದೊಂದಿಗೆ 9ನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿತೀಶ್‌ ಕುಮಾರ್‌ ಅವರು ಎನ್‌ಡಿಎ ಜತೆ ಕೈಜೋಡಿಸುತ್ತಿರುವುದು ಪ್ರಾಮುಖ್ಯತೆ ಪಡೆದಿದೆ. ಆರ್‌ಜೆಡಿ ಜತೆಗಿನ ಮೈತ್ರಿ ಮಾತ್ರವಲ್ಲ, ಇಂಡಿಯಾ ಒಕ್ಕೂಟದಿಂದಲೂ ನಿತೀಶ್‌ ಕುಮಾರ್‌ ಅವರು ಹೊರಬಂದಿದ್ದಾರೆ. ಈಗಾಗಲೇ ಆರ್‌ಜೆಡಿ ಸಚಿವರನ್ನು ವಜಾಗೊಳಿಸಿರುವ ನಿತೀಶ್‌ ಕುಮಾರ್‌ ಅವರು, ಬಿಜೆಪಿ ಶಾಸಕರಿಗೆ ಮಂತ್ರಿಗಿರಿ ನೀಡಲಿದ್ದಾರೆ.

ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ನಿತೀಶ್‌ ಕುಮಾರ್‌, “ರಾಜ್ಯದ ಜನರ ಹಿತದೃಷ್ಟಿಯಿಂದ ಆರ್‌ಜೆಡಿ ಜತೆಗಿನ ಮೈತ್ರಿ ಮುರಿದುಕೊಂಡು ರಾಜೀನಾಮೆ ನೀಡಿದ್ದೇನೆ. ಶಾಸಕರ ಅಭಿಪ್ರಾಯ ಪಡೆದ ಬಳಿಕವೇ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಇಂಡಿಯಾ ಒಕ್ಕೂಟದಿಂದಲೂ ನಾನು ಹೊರಬಂದಿದ್ದೇನೆ. ಮೈತ್ರಿಯಲ್ಲಿ ಒಗ್ಗಟ್ಟು ಮೂಡದ ಕಾರಣ ಹೊರಬಂದಿದ್ದೇನೆ” ಎಂದು ತಿಳಿಸಿದ್ದಾರೆ.

ಬಿಹಾರದಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಾಗಲೆಲ್ಲ ಜೆಡಿಯುಗೆ ಹೆಚ್ಚು ಅನುಕೂಲವಾಗಲಿದೆ. ಅದರಲ್ಲೂ, 2019ರ ಲೋಕಸಭೆ ಚುನಾವಣೆ ಫಲಿತಾಂಶವು ಬಿಜೆಪಿ, ಜೆಡಿಯು ಹಾಗೂ ಲೋಕ ಜನ ಶಕ್ತಿ (LJP) ಮೈತ್ರಿ ಪರವಾಗಿತ್ತು. ಹಾಗಾಗಿ, ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೆ ಜೆಡಿಯುಗೆ ಹೆಚ್ಚಿನ ಲಾಭವಾಗುತ್ತದೆ ಎಂಬುದು ನಿತೀಶ್‌ ಕುಮಾರ್‌ ಅವರ ಲೆಕ್ಕಾಚಾರವಾಗಿದೆ ಎಂದು ಮೂಲಗಳು ತಿಳಿಸಿವೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಹಾರದ ಒಟ್ಟು 40 ಕ್ಷೇತ್ರಗಳ ಪೈಕಿ ಎನ್‌ಡಿಎ ಒಕ್ಕೂಟದ ಜೆಡಿಯು 17, ಬಿಜೆಪಿ 16 ಹಾಗೂ ಎಲ್‌ಜೆಪಿ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್‌ ಒಂದೇ ಕ್ಷೇತ್ರದಲ್ಲಿ ಗೆದ್ದಿತ್ತು.

ಈ ಸುದ್ದಿಯನ್ನೂ ಓದಿ: Nitish Kumar: ಬಹುಮತ ಇಲ್ಲ, ಜಾತಿ ಬಲವಿಲ್ಲ; ಆದರೂ ನಿತೀಶ್‌ ಏಕೆ ಬಿಹಾರದಲ್ಲಿ ಕಿಂಗ್?

Exit mobile version