Site icon Vistara News

Floor Test | ಸಿಬಿಐ ದಾಳಿ, ಅಡೆತಡೆಯ ಮಧ್ಯೆ ವಿಶ್ವಾಸಮತ ಗೆದ್ದ ನಿತೀಶ್‌ ಕುಮಾರ್‌!

Nitish

ಪಟನಾ: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕರಿಗೆ ಸಂಬಂಧಿಸಿದ ನಿವಾಸಗಳ ಮೇಲೆ ಸಿಬಿಐ ದಾಳಿಯ ಮಧ್ಯೆಯೂ ಆರ್‌ಜೆಡಿ ಜತೆಗೂಡಿ ಮತ್ತೆ ಮಹಾಘಟಬಂಧನ್‌ ರಚಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ವಿಶ್ವಾಸಮತ ಸಾಬೀತುಪಡಿಸುವಲ್ಲಿ (Floor Test) ಯಶಸ್ವಿಯಾಗಿದ್ದಾರೆ. ಆ ಮೂಲಕ ಬಿಹಾರ ರಾಜಕೀಯದಲ್ಲಿ ತಮ್ಮ ಎದುರು ಬಿಜೆಪಿಯ ಪ್ರಾಬಲ್ಯ, ತಂತ್ರ, ಪಟ್ಟುಗಳು ನಡೆಯುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಂಡು, ಆರ್‌ಜೆಡಿ, ಕಾಂಗ್ರೆಸ್‌ ಜತೆಗೂಡಿ ಮತ್ತೆ ಮಹಾಘಟಬಂಧನ್‌ ರಚಿಸಿದ ನಿತೀಶ್‌ ಕುಮಾರ್‌ ಅವರು ಕೆಲ ದಿನಗಳ ಹಿಂದಷ್ಟೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದಾದ ಬಳಿಕ ಅವರು ಬುಧವಾರ ವಿಶ್ವಾಸಮತ ಸಾಬೀತುಪಡಿಸುವ ಮುನ್ನವೇ ಆರ್‌ಜೆಡಿ ನಾಯಕರ ನಿವಾಸಗಳ ಮೇಲೆ ಸಿಬಿಐ ದಾಳಿ ನಡೆಸಿತು. ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರಿಗೆ ಸಂಬಂಧಿಸಿದ ಮಾಲ್‌ ಮೇಲೆಯೂ ದಾಳಿ ನಡೆಸಲಾಯಿತು. ಅದರೆ, ಇದಾವುದಕ್ಕೂ ಜಗ್ಗದ ನಿತೀಶ್‌ ಕುಮಾಋ ಅವರು ವಿಶ್ವಾಸಮತ ಸಾಬೀತುಪಡಿಸಿದ್ದಾರೆ. ಅತ್ತ, ಬಿಜೆಪಿಯು ಸದನ ಬಿಟ್ಟು ಹೊರನಡೆಯುವ ಮೂಲಕ ಅಸಮಾಧಾನ ಹೊರಹಾಕಿದೆ.

ವಿಶ್ವಾಸಮತ ಗೆದ್ದ ಬಳಿಕ ಮಾತನಾಡಿದ ನಿತೀಶ್‌ ಕುಮಾರ್‌, “ನನಗೆ ಬಿಹಾರದ ಜನರ ಏಳಿಗೆಗಾಗಿ ಹಲವು ವೈಯಕ್ತಿಕ ಗುರಿಗಳಿವೆ. ಕೇಂದ್ರ ಸರಕಾರಕ್ಕೆ ತನ್ನ ಕೆಲಸವೇ ಶ್ರೇಷ್ಠ, ಅದನ್ನೇ ಜನ ಮೆಚ್ಚಿಕೊಳ್ಳಬೇಕು, ಅದೇ ಹೈಲೈಟ್‌ ಆಗಬೇಕು ಎಂಬ ಉದ್ದೇಶವಿದೆ. ಹಾಗಾಗಿ, ಬಿಜೆಪಿಯು ಬಿಹಾರಕ್ಕೆ ಹೆಚ್ಚಿನ ಸೌಲಭ್ಯ ನೀಡಲಿಲ್ಲ. ರಾಜ್ಯ ಸರಕಾರದ ಯೋಜನೆಗಳ ಶ್ರೇಯಸ್ಸನ್ನೂ ಕೇಂದ್ರ ಸರಕಾರ ಪಡೆಯಲು ಯತ್ನಿಸಿದೆ. ಆದರೆ, ನಮಗೆ ಜನರ ಪರವಾಗಿ ಕೆಲಸ ಮಾಡಿದ ಹಾಗೂ ಮಾಡುವ ತೃಪ್ತಿಯಿದೆ” ಎಂದು ಹೇಳಿದರು.

ಇದನ್ನೂ ಓದಿ | CBI Raids | ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್​ಗೆ ಸೇರಿದ ಮಾಲ್​ ಮೇಲೆ ಸಿಬಿಐ ದಾಳಿ

Exit mobile version