ಪಟನಾ: ಸಮಾಜದಲ್ಲಿ ವಿಘಟನೆಗೆ ಕಾರಣವಾಗಬಹುದಾದ ಜಾತಿ ಗಣತಿಯ ಅಗತ್ಯವಿಲ್ಲ ಎಂಬ ಬಿಜೆಪಿಯ ನಿಲುವಿಗೆ ವಿರುದ್ಧವಾಗಿ ಬಿಹಾರದಲ್ಲಿ ಜಾತಿ ಗಣತಿ ನಡೆಸುವುದಾಗಿ ಮುಖ್ಯಮಂತ್ರಿ ಹಾಗೂ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಘೋಷಿಸಿದ್ದಾರೆ. ಜಾತಿ ಗಣತಿ ನಡೆಸಬೇಕು ಎನ್ನುವುದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಪ್ರಮುಖ ಒತ್ತಾಯವಾಗಿದ್ದು, ಈಗ ಈ ಬೇಡಿಕೆಗೆ ಅಸ್ತು ಎಂದು ಹೇಳಿದಂತಾಗಿದೆ. ಈ ಮೂಲಕ ಬಿಹಾರ ರಾಜಕೀಯದಲ್ಲಿ ಮುಂದೆ ಆಗಬಹುದಾದ ರಾಜಕೀಯ ಬದಲಾವಣೆಗಳ ಸಣ್ಣ ಸುಳಿವೊಂದು ಸಿಕ್ಕಿದೆ.
ಮೇ 27ರಂದು ಸರ್ವ ಪಕ್ಷ ಸಭೆಯೊಂದನ್ನು ಕರೆಯುವ ಚಿಂತನೆ ಇದ್ದು, ಅಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ. ʻʻನಾವು ಒಂದು ಸರ್ವ ಪಕ್ಷ ಸಭೆಯನ್ನು ಕರೆಯುತ್ತೇವೆ. ಅಲ್ಲಿ ಜಾತಿಗಣತಿಗೆ ಸಂಬಂಧಿಸಿ ಎಲ್ಲರ ಅಭಿಪ್ರಾಯವನ್ನು ಕ್ರೋಡೀಕರಿಸುತ್ತೇವೆ. ನಂತರ ರಾಜ್ಯ ವಿಧಾನಸಭೆಯಲ್ಲಿ ಪ್ರಸ್ತಾವನೆಯನ್ನು ಮಂಡಿಸಲಾಗುತ್ತದೆ. ನಾವು ಎಲ್ಲ ಪಕ್ಷಗಳಿಗೂ ಮೇ 27ರಂದು ಸರ್ವ ಪಕ್ಷ ಸಭೆ ನಡೆಸುವ ಬಗ್ಗೆ ಮಾಹಿತಿ ನೀಡಿದ್ದೇವೆ. ಕೆಲವು ಪಕ್ಷಗಳು ಇನ್ನೂ ತಮ್ಮ ಅಭಿಪ್ರಾಯ ತಿಳಿಸಿಲ್ಲ. ಅಂತಿಮವಾಗಿ ಒಂದು ತೀರ್ಮಾನ ತೆಗೆದುಕೊಂಡು ಸಂಪುಟದ ಮುಂದೆ ಹೋಗುತ್ತೇವೆ. ಮುಂದೆ ಅದರ ಕೆಲಸಗಳು ನಡೆಯಲಿವೆ.ʼʼ ಎಂದು ಮಾಧ್ಯಮಗಳಿಗೆ ತಿಳಿಸಿದರು.
ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಜಾತಿ ಗಣತಿಗಾಗಿ ಒತ್ತಾಯ ಮಾಡುತ್ತಿದ್ದು, ಒಂದೊಮ್ಮೆ ಆದೇಶ ಮಾಡದೆ ಇದ್ದರೆ ದಿಲ್ಲಿಗೆ ಜಾಥಾ ನಡೆಸುವುದಾಗಿ ಹೇಳಿದ್ದರು. ಈ ನಡುವೆ ನಿತೀಶ್ ಕುಮಾರ್ ಅವರು ತೇಜಸ್ವಿ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಜಾತಿಗಣತಿಗೆ ಸಂಬಂಧಿಸಿದಂತೆ ತೆಗೆದುಕೊಳ್ಳಲಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದರು. ಇದು ಬಿಜೆಪಿಗೆ ಮುಜುಗರ ಉಂಟು ಮಾಡಿತ್ತು.
ಈ ನಡುವೆ, ಜಾತಿ ಗಣತಿಗೆ ಮಿತ್ರ ಪಕ್ಷವಾದ ಬಿಜೆಪಿ ಒಪ್ಪಿಗೆ ನೀಡಿದೆಯೇ ಎಂಬ ಬಗ್ಗೆ ಯಾವುದೇ ಮಾತು ಹೇಳಲು ಡಿಸಿಎಂ ತಾರ್ ಕಿಶೋರ್ ಪ್ರಸಾದ್ ನಿರಾಕರಿಸಿದ್ದಾರೆ. ನಾವು ಈ ವಿಚಾರದ ಬಗ್ಗೆ ಚರ್ಚಿಸಿ, ಎಲ್ಲ ಆಯಾಮಗಳನ್ನು ವಿಶ್ಲೇಷಿಸಿ ನಿರ್ಧಾರ ತೆಗೆಕೊಳ್ಳುವುದಾಗಿ ತಾರ್ ಕಿಶೋರ್ ಪ್ರಸಾದ್ ಹೇಳಿದ್ದಾರೆ. ತಾತ್ವಿಕವಾಗಿ ಬಿಜೆಪಿ ಜಾತಿ ಗಣತಿಯನ್ನು ವಿರೋಧಿಸಿದೆ. ಕೇಂದ್ರ ಸರಕಾರ ಈಗಾಗಲೇ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು, ಇದು ಜನರನ್ನು ಜಾತಿ ಆಧಾರದಲ್ಲಿ ವಿಭಜಿಸುವ ಕೆಲಸವಾಗಲಿದೆ ಎಂದಿದೆ. ಆದರೆ, ಬಿಹಾರದಂತ ರಾಜ್ಯದಲ್ಲಿ ಜಾತಿ ಲೆಕ್ಕಾಚಾರದ ಆಧಾರದ ಮೇಲೆಯೇ ಅಭಿವೃದ್ಧಿ ಕೆಲಸಗಳು ನಡೆಯುತ್ತವೆ. ಸರಿಯಾದ ಗಣತಿ ಸಿಕ್ಕಿದರೆ ನಿರ್ಲಕ್ಷಿತ ಸಮುದಾಯಗಳಿಗೆ ಹೆಚ್ಚಿನ ಬೆಂಬಲ ನೀಡುವ ನೀತಿ ರೂಪಿಸಲು ಅನುಕೂಲ ಎನ್ನುವುದು ಬಿಜೆಪಿ ವಾದ.
ಇದನ್ನೂ ಓದಿ: ಹಿಂದುಳಿದ ವರ್ಗಗಳ ರಾಜಕೀಯ ಪ್ರಾತಿನಿಧ್ಯ ಗುರುತಿಸಲು ನ್ಯಾಯಮೂರ್ತಿ ಭಕ್ತವತ್ಸಲ ಆಯೋಗ ರಚನೆ