ನವದೆಹಲಿ: ಜನಪ್ರತಿನಿಧಿಗಳ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹೆಚ್ಚಿನ ನಿರ್ಬಂಧ ಪ್ರಕರಣ ಕುರಿತು ಸುಪ್ರೀಂ ಕೋರ್ಟ್ (Supreme Court) 4:1 ಅನುಪಾತದಲ್ಲಿ ತೀರ್ಪು ಪ್ರಕಟಿಸಿದೆ. ಐವರು ನ್ಯಾಯಮೂರ್ತಿಗಳಿದ್ದ ಪೀಠದಲ್ಲಿ ಪೈಕಿ ಜಸ್ಟೀಸ್ ಬಿ.ವಿ. ನಾಗರತ್ನ ಅವರು ಮಾತ್ರ ಭಿನ್ನ ತೀರ್ಪು ನೀಡಿದ್ದಾರೆ. ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ, ”ಸಾರ್ವಜನಿಕ ಜೀವನದಲ್ಲಿರುವ ಜನಪ್ರತಿನಿಧಿಗಳಿಗೆ ಹೆಚ್ಚಿನ ನಿರ್ಬಂಧ ವಿಧಿಸಲು ಸಾಧ್ಯವಿಲ್ಲ. ಸಂವಿಧಾನದ ಆರ್ಟಿಕಲ್ 19(2) ಸೂಚಿಸಿದ ನಿರ್ಬಂಧಗಳಷ್ಟೇ ಅನ್ವಯವಾಗುತ್ತವೆ” ಎಂದು ತಿಳಿಸಿದೆ.
ಜಸ್ಟೀಸ್ ವಿ ರಾಮಸುಬ್ರಮಣಿಯನ್ ಅವರು, ”ಸಚಿವರೊಬ್ಬರು ನೀಡುವ ಹೇಳಿಕೆಯನ್ನು ಇಡೀ ಸರ್ಕಾರಕ್ಕೆ ಅನ್ವಯಿಸಿ ಹೇಳಲಾಗದು. ಸಾಮೂಹಿಕ ಹೊಣೆಗಾರಿಕೆಯ ತತ್ವಗಳನ್ನು ಅನ್ವಯಿಸುತ್ತಿದ್ದರೂ ಯಾವುದೇ ಸಚಿವರು ನೀಡಿದ ಹೇಳಿಕೆಯನ್ನು ಸರ್ಕಾರಕ್ಕೆ ವಿಕೃತವಾಗಿ ಆರೋಪಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
”ನಾಗರಿಕರ ಹಕ್ಕುಗಳಿಗೆ ಹೊಂದಿಕೆಯಾಗದ ಸಚಿವರು ನೀಡಿದ ಹೇಳಿಕೆಯು ಸಾಂವಿಧಾನಿಕ ಅಪರಾಧ ಎನಿಸಿಕೊಳ್ಳುವುದಿಲ್ಲ. ಆದರೆ, ಅದು ಸಾರ್ವಜನಿಕ ಅಧಿಕಾರಿಯಿಂದ ಲೋಪ ಅಥವಾ ಅಪರಾಧಕ್ಕೆ ಕಾರಣವಾದರೆ ಅದು ಸಾಂವಿಧಾನಿಕ ಅಪರಾಧ ಎಂದು ಪರಿಗಣಿಸಬಹುದು,” ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ, ಸುಪ್ರೀಂ ಕೋರ್ಟ್, ಸಂವಿಧಾನದ ಆರ್ಟಿಕಲ್ 19(2)ರ ಅಡಿ, ನಾಗರಿಕರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಸಂಬಂಧ ವಿಧಿಸಲಾಗಿರುವ ನಿರ್ಬಂಧಗಳನ್ನು ಹೊರತುಪಡಿಸಿ, ಸಾರ್ವಜನಿಕ ಜೀವನದಲ್ಲಿರುವ ಜನಪ್ರತಿನಿಧಿಗಳಿಗೆ ಹೆಚ್ಚಿನ ನಿರ್ಬಂಧಗಳನ್ನು ಹೇರಲು ಸಾಧ್ಯವಿಲ್ಲ ಎಂದು ಹೇಳಿದೆ.
ಭಿನ್ನ ತೀರ್ಪು ನೀಡಿದ ಜಸ್ಟೀಸ್ ನಾಗರತ್ನ
ನೋಟು ಅಮಾನ್ಯತೆ ಕುರಿತು ಭಿನ್ನ ತೀರ್ಪು ನೀಡಿದ್ದ ಜಸ್ಟೀಸ್ ಬಿ ವಿ ನಾಗರತ್ನ ಅವರು ಈ ಪ್ರಕರಣದಲ್ಲೂ ಭಿನ್ನ ತೀರ್ಪು ನೀಡಿ ಗಮನ ಸೆಳೆದಿದ್ದಾರೆ. ”ನಮ್ಮಂಥ(ಭಾರತ) ದೇಶದಲ್ಲಿ ಸರ್ಕಾರಕ್ಕೆ ಸಂಬಂಧಿಸಿದಂತೆ ಜಾಗೃತಿ ಮತ್ತು ಮಾಹಿತಿಯನ್ನು ಪಡೆದುಕೊಳ್ಳಲು ನಾಗರಿಕರಿಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಅವಶ್ಯವಾಗಿಬೇಕು. ದ್ವೇಷ ಭಾಷಣಗಳು ಸಮಾಜವನ್ನು ಅಸಮಾನವಾಗಿಸುವುದರ ಮೂಲಕ ಮೂಲಭೂತ ಮೌಲ್ಯಗಳ ಮೇಲೆ ಹೊಡೆತ ನೀಡುತ್ತವೆ. ವಿವಿಧ ಹಿನ್ನೆಲೆಯ ನಾಗರಿಕರ ಮೇಲೆ ಆಕ್ರಮಣ ಮಾಡುತ್ತದೆ. ವಿಶೇಷವಾಗಿ ನಮ್ಮಂತಹ ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಘನತೆಯನ್ನು ಎತ್ತಿಹಿಡಿಯುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಧರ್ಮ, ಜಾತಿ ಮತ್ತು ಮಹಿಳೆಯರ ಘನತೆಯನ್ನು ದ್ವೇಷ ಭಾಷಣಗಳು ಹಾಳು ಮಾಡಬಾರದು,” ಎಂದು ಅವರು ಹೇಳಿದರು.
”ಒಂದು ವೇಳೆ ಸಚಿವರ ಹೇಳಿಕೆಯು ಸರ್ಕಾರದ ವಿಚಾರಗಳನ್ನು ಒಳಗೊಂಡಿದ್ದರೆ, ಅದು ಸರ್ಕಾರದ ನಿಲುವನ್ನೇ ಪ್ರದರ್ಶಿಸಿದಂತಾಗುತ್ತದೆ. ಹಾಗಾಗಿ, ಸಚಿವರ ಅವಹೇಳನಕಾರಿ ಹೇಳಿಕೆಯು ಮತ್ತು ಅದರ ಸಾಮೂಹಿಕ ಜವಾಬ್ದಾರಿಯನ್ನು ಸರ್ಕಾರದ ಮೇಲೆ ಹೊರಿಸಬಹುದು. ಆದರೆ, ವಾಕ್ ಸ್ವಾತಂತ್ರ್ಯ ಸಂಬಂಧ ಈಗಿರುವುದಕ್ಕಿಂತ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲು ಸಾಧ್ಯವಿಲ್ಲ. ಹೆಚ್ಚಿನ ನಿರ್ಬಂಧ ಸಂಬಂಧ ಕಾನೂನು ರೂಪಿಸುವುದು ಸಂಸತ್ತಿನ ಕೆಲಸವಾಗಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಜನಪ್ರತಿನಿಧಿಗಳ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚಿನ ನಿರ್ಬಂಧ ಹೇರಬೇಕೇ ಬೇಡ್ವೇ ಎಂಬ ಕುರಿತು ತೀರ್ಪು ಪ್ರಕಟಿಸಿದ ಐವರು ಪೀಠದ ನೇತೃತ್ವವನ್ನು ಜಸ್ಟೀಸ್ ಎಸ್ ಎ ನಜೀರ್ ವಹಿಸಿದ್ದರು. ಜಸ್ಟೀಸ್ ಬಿ ಆರ್ ಗವಾಯಿ, ಜಸ್ಟೀಸ್ ಎ ಎಸ್ ಬೋಪಣ್ಣ, ಜಸ್ಟೀಸ್ ರಾಮಸುಬ್ರಮಣಿಯನ್ ಹಾಗೂ ಜಸ್ಟೀಸ್ ಬಿ ವಿ ನಾಗರತ್ನ ಅವರು ಪೀಠದಲ್ಲಿದ್ದ ಇತರ ನ್ಯಾಯಮೂರ್ತಿಗಳಾಗಿದ್ದರು.
ಇದನ್ನೂ ಓದಿ | Supreme Court | ಪ್ರಧಾನಿ ವಿರುದ್ಧ ಎಲೆಕ್ಷನ್ ಕಮಿಷನರ್ ಕ್ರಮ ಕೈಗೊಳ್ಳುತ್ತಾರೆಯೇ? ಆ ಶಕ್ತಿ ಇದೆಯೇ? ಎಂದ ಸುಪ್ರೀಂ ಕೋರ್ಟ್