ಕೋಲ್ಕತ್ತ: ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ವಿಪಕ್ಷಗಳೆಲ್ಲ ಮೈತ್ರಿ ಮಾಡಿಕೊಳ್ಳಬೇಕು ಎಂದು ಪದೇಪದೆ ಹೇಳುತ್ತಿದ್ದವರಲ್ಲಿ ತೃಣಮೂಲ ಕಾಂಗ್ರೆಸ್ ನಾಯಕಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಒಬ್ಬರು. ಆದರೆ ಅವರೀಗ ತಮ್ಮ ಮನಸು ಬದಲಿಸಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಗಳ ಜತೆಗೂ ಮೈತ್ರಿಯಿಲ್ಲ. ನಮ್ಮ ಪಕ್ಷ ಏಕಾಂಗಿಯಾಗಿ, ಜನರ ಬೆಂಬಲದೊಂದಿಗೆ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ.
ಸಿಪಿಎಂ ಮತ್ತು ಕಾಂಗ್ರೆಸ್ ಪಕ್ಷಗಳು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿವೆ. ಇಂಥ ಪಕ್ಷಗಳೊಂದಿಗೆ ನಾವು ಅಪವಿತ್ರ ಮೈತ್ರಿ ಮಾಡಿಕೊಂಡು ಪ್ರಯೋಜನವೇನು? ಬಿಜೆಪಿಯೊಂದಿಗೆ ಒಳ ಹೊಂದಾಣಿಕೆ ಮಾಡಿಕೊಂಡಿರುವ ಕಾಂಗ್ರೆಸ್ ಆಗಲೀ, ಸಿಪಿಎಂ ಆಗಲೀ ಅದೇ ಪಕ್ಷದ ವಿರುದ್ಧ ಹೇಗೆ ಹೋರಾಡುತ್ತವೆ? ಆ ಪಕ್ಷಗಳನ್ನು ಆ್ಯಂಟಿ ಬಿಜೆಪಿ ಎಂದು ಹೇಳುವುದಾದರೂ ಹೇಗೆ?-ಎಂಬಿತ್ಯಾದಿ ಪ್ರಶ್ನೆಗಳನ್ನು ಮಮತಾ ಬ್ಯಾನರ್ಜಿ ಕೇಳಿದ್ದಾರೆ.
ಸರ್ದಿಘಿ ಉಪಚುನಾವಣೆಯಲ್ಲಿ ಟಿಎಂಸಿ ಸೋತು, ಅಲ್ಲಿ ಕಾಂಗ್ರೆಸ್ ಗೆದ್ದಿದೆ. ಮುಸ್ಲಿಂ ಪ್ರಾಬಲ್ಯವಿರುವ ಸರ್ದಿಘಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೈರನ್ ಬಿಸ್ವಾಸ್ ಅವರು ಎಡಪಕ್ಷ ಸಿಪಿಎಂ ಬೆಂಬಲದಿಂದ ಗೆದ್ದಿದ್ದಾರೆ. ಇದನ್ನೇ ಉಲ್ಲೇಖಿಸಿ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಮತ್ತು ಸಿಪಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅದೆರಡೂ ಪಕ್ಷಗಳು ಬಿಜೆಪಿಯಂತೇ ಎಂದು ಜರಿದಿದ್ದಾರೆ. ‘ಕಾಂಗ್ರೆಸ್, ಎಡಪಕ್ಷ, ಬಿಜೆಪಿಗಳೆಲ್ಲ ಸೇರಿ ಸರ್ದಿಘಿಯಲ್ಲಿ ಕಮ್ಯೂನಲ್ ಕಾರ್ಡ್ ಆಟ ಆಡಿವೆ. ಬಿಜೆಪಿ ಬಹಿರಂಗವಾಗಿ ಆಡಿದ್ದರೆ, ಸಿಪಿಎಂ ಮತ್ತು ಕಾಂಗ್ರೆಸ್ಗಳು ಅದನ್ನು ಗುಟ್ಟಾಗಿ ಮಾಡಿವೆ. ಅಂದ ಮೇಲೆ ಬಿಜೆಪಿ ಮತ್ತು ಆ ಎರಡೂ ಪಕ್ಷಗಳಿಗೆ ಏನೂ ವ್ಯತ್ಯಾಸ ಇಲ್ಲದಂತಾಯಿತಲ್ಲ ಎಂದು ದೀದಿ ಹೇಳಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ವಂದೇ ಭಾರತ್ ರೈಲಿಗೆ ಚಾಲನೆ ವೇಳೆ ಜೈ ಶ್ರೀರಾಮ್ ಘೋಷಣೆ; ವೇದಿಕೆ ಏರದೆ ಮೌನವಾಗಿ ಕುಳಿತ ಮಮತಾ ಬ್ಯಾನರ್ಜಿ
‘ನಾವು ಕಾಂಗ್ರೆಸ್ನ ಮಾತನ್ನಾಗಲೀ, ಸಿಪಿಎಂ ಮಾತನ್ನಾಗಲೀ ಕೇಳಬಾರದು, ಆ ಪಕ್ಷಗಳನ್ನು ನಂಬಬಾರದು ಎಂಬ ಪಾಠ ಕಲಿತಿದ್ದೇವೆ. ಬಿಜೆಪಿಯೊಂದಿಗೆ ಸೇರಿ ಕೆಲಸ ಮಾಡುವ ಆ ಪಕ್ಷಗಳನ್ನು ಎಂದಿಗೂ ನಂಬುವುದಿಲ್ಲ. 2024ರಲ್ಲಿ ನಾವು ಜನರೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸುತ್ತೇವೆ. ಯಾವೊಂದು ರಾಜಕೀಯ ಪಕ್ಷದೊಂದಿಗೂ ನಮ್ಮ ಮೈತ್ರಿ ಇಲ್ಲವೇ ಇಲ್ಲ. ಏಕಾಂಗಿ ಸ್ಪರ್ಧೆ’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.