ಲಕ್ನೋ, ಉತ್ತರ ಪ್ರದೇಶ: ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಸಮಗ್ರ ಕೂಟ (India Bloc)ದ ಮುಂಬೈ ಸಭೆಯ ಒಂದು ದಿನ ಮುಂಚೆಯೇ ಉತ್ತರ ಪ್ರದೇಶದ ಬಹುಜನ ಸಮಾಜ ಪಾರ್ಟಿ(BSP) ಮುಖ್ಯಸ್ಥೆ ಮಾಯಾವತಿ (BSP Leader Mayawati) ಅವರು ಮೈತ್ರಿ ಸುದ್ದಿಯನ್ನು ನಿರಾಕರಿಸಿದ್ದಾರೆ. ಮಾಯಾವತಿ ಕೂಡ ಇಂಡಿಯಾ ಕೂಟವನ್ನು ಸೇರಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ಈ ಸುದ್ದಿಯನ್ನು ಅವರು ತಳ್ಳಿ ಹಾಕಿದ್ದಾರೆ. ತಾವು ಯಾವುದೇ ಇಂಡಿಯಾ ಆಗಲಿ ಎನ್‌ಡಿಎ (NDA) ಜತೆ ಹೆಜ್ಜೆ ಹಾಕುವುದಿಲ್ಲ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಏಕಾಂಗಿಯಾಗಿ ಸ್ಪರ್ಧೆಸಲಿದೆ ಎಂದು ಮಾಯಾವತಿ ಹೇಳಿದ್ದಾರೆ(INDIA Bloc Meeting:).
ಎನ್‌ಡಿಎ ಮತ್ತು ಇಂಡಿಯಾ ಕೂಟ ರಾಜಿ ಮಾಡಿಕೊಂಡಿರುವ ಕೂಟಗಳು ಬಡ ವಿರೋಧಿ, ಜಾತಿವಾದಿ, ಕೋಮುವಾದಿ ಹಾಗೂ ಶ್ರೀಮಂತರ ಪರವಾಗಿವೆ. ಇದು ಬಿಎಸ್‌ಪಿ ಪಕ್ಷದ ನೀತಿಯ ವಿರುದ್ಧವಾಗಿದೆ. ಹಾಗಾಗಿ, ಈ ಎರಡೂ ಕೂಟಗಳ ಜತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಅವರು ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಮುಂಬರುವ ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ತೆಲಂಗಾಣ ರಾಜ್ಯ ವಿಧಾನಸಭೆ ಚುನಾವಣೆ ಹಾಗೂ 2024ರ ಲೋಕಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಅವರು ತಿಳಿಸಿದ್ದಾರೆ.
ಇಂಡಿಯಾ ಕೂಟದ ಸಭೆ ನಾಳೆ
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಶತಾಯ ಗತಾಯ ಸೋಲಿಸಲು ಪ್ರತಿಪಕ್ಷಗಳು ಒಗ್ಗೂಡಿ ರಚಿಸಿರುವ ಇಂಡಿಯಾ ಒಕ್ಕೂಟದ ತೃತೀಯ ಸಭೆಯು (I.N.D.I.A Meeting) ಗುರುವಾರದಿಂದ (ಆಗಸ್ಟ್ 31) ಆರಂಭವಾಗಲಿದ್ದು, ಎರಡು ದಿನ ಮುಂಬೈನ ಗ್ರ್ಯಾಂಡ್ ಹಯಾತ್ (Grand Hyatt) ಹೋಟೆಲ್‌ನಲ್ಲಿ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆ ಕೂಡ ಕೈಗೊಳ್ಳಲಾಗಿದೆ. ಇನ್ನು ಸಭೆಯ ಪ್ರಮುಖ ಅಜೆಂಡಾ ಕುರಿತು ಈಗಾಗಲೇ ಚರ್ಚೆಗಳು ಶುರುವಾಗಿವೆ.
ಈ ಸುದ್ದಿಯನ್ನೂ ಓದಿ: Lok Sabha Election: ಇಂದೇ ಎಲೆಕ್ಷನ್ ನಡೆದ್ರೆ ಎನ್‌ಡಿಎಗೆ ಅಧಿಕಾರ, ‘ಇಂಡಿಯಾ ಕೂಟ’ಕ್ಕೆ ಸೋಲು! ಯಾರಿಗೆ ಎಷ್ಟು ಸೀಟು?
ಗ್ರ್ಯಾಂಡ್ ಹಯಾತ್ ಹೋಟೆಲ್‌ನಲ್ಲಿ ಗುರುವಾರ ಹಾಗೂ ಶುಕ್ರವಾರ ಒಕ್ಕೂಟದ ಸಭೆ ನಡೆಯಲಿದ್ದು, ಮುಂಬರುವ ಲೋಕಸಭೆ ಚುನಾವಣೆ ವೇಳೆ ಸ್ಪರ್ಧಿಸಲು ಆಯಾ 26 ಪಕ್ಷಗಳಿಗೆ ಸೀಟು ಹಂಚಿಕೆ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ. ಹಾಗೆಯೇ, ಇಂಡಿಯಾ ಒಕ್ಕೂಟದ ಹೊಸ ಲೋಗೊವನ್ನು ಕೂಡ ಅನಾವರಣ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಒಕ್ಕೂಟದಿಂದ ಪ್ರಧಾನಿ ಅಭ್ಯರ್ಥಿಯ ಕುರಿತು ಯಾವುದೇ ಚರ್ಚೆ ನಡೆಯುವುದಿಲ್ಲ ಎನ್ನಲಾಗಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.