ನವದೆಹಲಿ: ಮ್ಯಾನ್ಮಾರ್‌ನಿಂದ ಬಂದು ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ರೋಹಿಂಗ್ಯಾ ಮುಸ್ಲಿಮರನ್ನು (Rohingya Refugees) ಗಡಿಪಾರು ಮಾಡಲು ಒಂದೆಡೆ ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಮತ್ತೊಂದೆಡೆ, ರೋಹಿಂಗ್ಯಾಗಳಿಗೂ ಫ್ಲ್ಯಾಟ್‌ಗಳನ್ನು ಒದಗಿಸಲಾಗುತ್ತದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಟ್ವೀಟ್ ಮಾಡಿದ್ದಾರೆ. ಇಂತಹ ದ್ವಂದ್ವದ ಕುರಿತು ಭಾರಿ ಟೀಕೆ ವ್ಯಕ್ತವಾದ ಕಾರಣ ಕೇಂದ್ರ ಸರಕಾರ ಸ್ಪಷ್ಟನೆ ನೀಡಿದ್ದು, “ರೋಹಿಂಗ್ಯಾಗಳಿಗೆ ಫ್ಲ್ಯಾಟ್ ನೀಡುವುದಿಲ್ಲ” ಎಂದು ಸ್ಪಷ್ಟಪಡಿಸಿದೆ.
“ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (EWS) ಸೇರಿದವರಿಗಾಗಿ ನವದೆಹಯಲಿಯ ಬಕ್ಕರ್‌ವಾಲಾದಲ್ಲಿ ನಿರ್ಮಿಸಿರುವ ಫ್ಲ್ಯಾಟ್‌ಗಳನ್ನು ರೋಹಿಂಗ್ಯಾ ನಿರಾಶ್ರಿತರಿಗೆ ನೀಡುವ ಕುರಿತು ಕೇಂದ್ರ ಸರಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಅಕ್ರಮವಾಗಿ ನೆಲೆಸಿರುವ ರೋಹಿಂಗ್ಯಾಗಳು ದಿಗ್ಬಂಧನ ಕೇಂದ್ರದಲ್ಲಿಯೇ ಉಳಿಯಲಿದ್ದಾರೆ” ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.
ಇದಕ್ಕೂ ಮೊದಲು ಹರ್ದೀಪ್ ಸಿಂಗ್ ಪುರಿ ಅವರು ರೋಹಿಂಗ್ಯಾಗಳಿಗೆ ಫ್ಲ್ಯಾಟ್ ನೀಡುವ ಕುರಿತು ಟ್ವೀಟ್ ಮಾಡಿದ್ದರು. “ಭಾರತವು ಯಾವಾಗಲೂ ನಿರಾಶ್ರಿತರಿಗೆ ಆಶ್ರಯ ನೀಡಿದೆ. ನಿರಾಶ್ರಿತರ ಬಗೆಗಿನ ವಿಶ್ವಸಂಸ್ಥೆ ಒಪ್ಪಂದವನ್ನು ನಾವು ಗೌರವಿಸುತ್ತೇವೆ. ಈ ದಿಸೆಯಲ್ಲಿಯೇ ರೋಹಿಂಗ್ಯಾಗಳಿಗೂ ಫ್ಲ್ಯಾಟ್ ನೀಡುವ ಐತಿಹಾಸಿಕ ತೀರ್ಮಾನ ತೆಗೆದುಕೊಳ್ಳಲಾಗಿದೆ” ಎಂದು ಸಚಿವ ಹೇಳಿದ್ದರು.
ಹರ್ದೀಪ್ ಸಿಂಗ್ ಪುರಿ ಅವರು ಟ್ವೀಟ್ ಮಾಡುತ್ತಲೇ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಯಿತು. ವಿಶ್ವ ಹಿಂದೂ ಪರಿಷತ್ (VHP) ಅಂತೂ ಕೇಂದ್ರದ ಅಸಮಾಧಾನ ವ್ಯಕ್ತಪಡಿಸಿತು. “ರೋಹಿಂಗ್ಯಾ ಮುಸ್ಲಿಮರಿಗೆ ಆಶ್ರಯ ನೀಡುವ ಕುರಿತು ಕೇಂದ್ರ ಸರಕಾರ ತೆಗೆದುಕೊಂಡಿರುವ ತೀರ್ಮಾನ ಹಿಂಪಡೆದು, ಅವರನ್ನು ಗಡಿಪಾರು ಮಾಡಬೇಕು” ಎಂದು ಒತ್ತಾಯಿಸಿತು. ಇದಾದ ಬಳಿಕ ಕೇಂದ್ರ ಸರಕಾರ ಸ್ಪಷ್ಟನೆ ನೀಡಿ, ಫ್ಲ್ಯಾಟ್ ನೀಡುವ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿತು.
ಇದನ್ನೂ ಓದಿ | Illegal Bangla Immigrants | ಕಾಫಿನಾಡಲ್ಲಿ ನಾಲ್ವರು ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ