ನವದೆಹಲಿ: ಶುಕ್ರವಾರವೂ ಲೋಕಸಭೆಯಲ್ಲಿ ಗಲಾಟೆ ನಡೆದಿದೆ. ಪ್ರತಿಪಕ್ಷಗಳ ಮಾತುಗಳಿಗೆ ಕತ್ತರಿ ಹಾಕುವ ನಿಟ್ಟಿನಲ್ಲಿ ಅವರ ಮೈಕ್‌ಗಳನ್ನು 20 ನಿಮಿಷಗಳ ಕಾಲ ಮ್ಯೂಟ್ ಮಾಡಲಾಗಿತ್ತು ಎಂದು ಕಾಂಗ್ರೆಸ್ ಆರೋಪಿಸಿದ್ದು, ಟ್ವಿಟರ್‌ನಲ್ಲಿ ವಿಡಿಯೋ ಕ್ಲಿಪ್ ಷೇರ್ ಮಾಡಿಕೊಂಡಿದೆ. ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳ ಮೈಕ್‌ಗಳನ್ನು ಮ್ಯೂಟ್ ಮಾಡಲಾಗುತ್ತದೆ. ಆಗ, ಪ್ರತಿಪಕ್ಷಗಳ ಧ್ವನಿ ಕೇಳಿದ್ದನ್ನು ವಿಡಿಯೋದಲ್ಲಿ ಕಾಣಬಹುದು(Parliament Budget Session).
ಕನಿಷ್ಠ 20 ನಿಮಿಷಗಳವರೆಗೂ ಪ್ರತಿಪಕ್ಷಗಳು ಮಾತನಾಡಿದ್ದು ಯಾವುದೂ ಕೇಳಿಸುತ್ತಿರಲಿಲ್ಲ. ಸ್ಪೀಕರ್ ಅವರು ಸೂಚನೆ ಕೊಟ್ಟ ಬಳಿಕವಷ್ಟೇ ಆಡಿಯೋ ಸಕ್ರಿಯವಾಯಿತು. ತಕ್ಷಣವೇ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. ಲೋಕಸಭೆಯಲ್ಲಿ ಯಾಕೆ ಆಡಿಯೋ ಇರಲಿಲ್ಲ ಎಂಬುದಕ್ಕೆ ಸರ್ಕಾರವು ಯಾವುದೇ ವಿವರಣೆಯನ್ನು ನೀಡಲಿಲ್ಲ.
ಕಾಂಗ್ರೆಸ್ ಟ್ವೀಟ್
ಈ ಮೊದಲ ಒಂದೇ ಮೈಕ್ ಆಫ್ ಆಗುತ್ತಿತ್ತು. ಈಗ ಇಡೀ ಕಲಾಪನ್ನೇ ಮ್ಯೂಟ್ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಗೆಳೆಯನಿಗಾಗಿ(ಗೌತಮ್ ಅದಾನಿ) ಇಡೀ ಲೋಕಸಭೆಯನ್ನು ಮ್ಯೂಟ್ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಹಿಂದಿಯಲ್ಲಿ ಟ್ವೀಟ್ ಮಾಡಿದೆ. ಅದಾನಿ-ಹಿಂಡೆನ್‌ಬರ್ಗ್ ವಿಷಯದ ಕುರಿತು ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ(JPC)ಯನ್ನು ರಚಿಸುವಂತೆ ಪ್ರತಿಪಕ್ಷಗಳು ಆಗ್ರಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮೈಕ್ ಮ್ಯೂಟ್ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಸಂಸತ್ತಿನಲ್ಲಿ ರಾಹುಲ್ ಗಾಂಧಿ ಅವರಿಗೆ ಮಾತನಾಡಲು ಅವಕಾಶ ಕೊಡಬಾರದು ಎಂದು ಬಿಜೆಪಿ ನಿರ್ದರಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಭಾರತದಲ್ಲಿ ಪ್ರಜಾಪ್ರಭುತ್ವವು ಅಪಾಯದಲ್ಲಿದೆ ಎಂದು ರಾಹುಲ್ ಗಾಂಧಿ ಅವರು ಲಂಡನ್‌ನಲ್ಲಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಅವರಿಗೆ ಮಾತನಾಡಲು ಅವಕಾಶ ನೀಡಬಾರದು ಎಂದು ಬಿಜೆಪಿ ನಿರ್ಧರಿಸಿದೆ.
ಮೋದಿ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ ಕಾಂಗ್ರೆಸ್
ನೆಹರು ಕುಟುಂಬವನ್ನು ಅವಮಾನಗೊಳಿಸಿದ್ದಾರೆಂದು ಆರೋಪಿಸಿ, ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ಹಕ್ಕು ಚ್ಯುತಿ(Privilege motion) ಮಂಡಿಸಿದ್ದಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಮಾತನಾಡುವಾಗ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ವಿರುದ್ಧ ಅವಮಾನಕಾರಿಯಾಗಿ ಮಾತನಾಡಿದ್ದಾರೆಂದು ಮನವಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಕ್ಷಮೆ ಕೇಳದಿದ್ದರೆ ರಾಹುಲ್ ಗಾಂಧಿಯನ್ನು ಲೋಕಸಭೆಯಿಂದಲೇ ಹೊರ ಹಾಕಲು ಬಿಜೆಪಿ ಪ್ಲ್ಯಾನ್!
ಕಳೆದ ತಿಂಗಳು ನಡೆದ ಸಂಸತ್ ಕಲಾಪದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ರಾಜ್ಯ ಸರ್ಕಾರಗಳನ್ನು ಉರುಳಿಸಲು ಜವಾಹರ್ ಲಾಲ್ ನೆಹರು ಹಾಗೂ ಇಂದಿರಾ ಗಾಂಧಿ ಅವರು ಪದೇ ಪದೇ ಸಂವಿಧಾನದ 356ನೇ ವಿಧಿಯನ್ನು ಬಳಸಿಕೊಂಡಿದ್ದರು. ಅಲ್ಲದೇ, ನೆಹರು ಅಡ್ಡಹೆಸರನ್ನು ಬಳಸಿಕೊಳ್ಳಲು ನಾಚಿಕೆ ಏಕೆ ಪಟ್ಟುಕೊಳ್ಳುತ್ತೀರಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು.