ಪಟನಾ: ಬಿಹಾರದಲ್ಲಿ ಸಾರಾಯಿ ನಿಷೇಧಗೊಳಿಸಿದ್ದರೂ ಕಳ್ಳಬಟ್ಟಿ ಸೇವಿಸಿ ಮೃತಪಡುತ್ತಿರುವ ಪ್ರಕರಣಗಳು ಜಾಸ್ತಿಯಾಗಿವೆ. ಸರನ್ ಜಿಲ್ಲೆಯಲ್ಲಿ ಕಳ್ಳಬಟ್ಟಿ (Bihar Hooch Tragedy) ಸೇವಿಸಿ ಮೃತಪಟ್ಟವರ ಸಂಖ್ಯೆ ೬೦ ದಾಟಿದೆ. ಇದರ ಬೆನ್ನಲ್ಲೇ ಸಿವಾನ್ ಜಿಲ್ಲೆಯಲ್ಲೂ ಕಳ್ಳಬಟ್ಟಿ ದುರಂತ ಸಂಭವಿಸಿದ್ದು, ನಾಲ್ವರು ಕೊನೆಯುಸಿರೆಳೆದಿದ್ದಾರೆ. ಹಾಗಾಗಿ, ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ. ಪರಿಸ್ಥಿತಿ ಹೀಗಿರುವಾಗಲೇ ಕಳ್ಳಬಟ್ಟಿ ಪ್ರಕರಣಗಳ ಕುರಿತು ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾತನಾಡಿದ್ದು, “ರಾಜ್ಯದಲ್ಲಿ ಕಳ್ಳಬಟ್ಟಿ ಸೇವಿಸಿ ಮೃತಪಟ್ಟರೆ, ಅವರ ಕುಟುಂಬಸ್ಥರಿಗೆ ಪರಿಹಾರ ನೀಡುವುದಿಲ್ಲ” ಎಂದು ಮಹತ್ವದ ಘೋಷಣೆ ಮಾಡಿದ್ದಾರೆ.
“ರಾಜ್ಯದಲ್ಲಿ ಜನರ ಆರೋಗ್ಯ ದೃಷ್ಟಿಯಿಂದ ೨೦೧೬ರಲ್ಲಿಯೇ ರಾಜ್ಯ ಸರ್ಕಾರವು ಮದ್ಯದ ಮಾರಾಟ ಹಾಗೂ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೀಗಿದ್ದರೂ ಜನ ಅಡ್ಡ ಮಾರ್ಗ ಹಿಡಿದಿದ್ದಾರೆ. ಕಳ್ಳಬಟ್ಟಿ ಸೇವನೆ ಮಾಡುತ್ತಿದ್ದಾರೆ. ಆದರೆ, ಕಳ್ಳಬಟ್ಟಿ ಸೇವಿಸುವವರ ಮೇಲೆ ಸರ್ಕಾರದ ಕಾಳಜಿ ಇಲ್ಲ. ಕಳ್ಳಬಟ್ಟಿ ಸೇವಿಸಿ ಮೃತಪಟ್ಟವರ ಕುಟುಂಬಸ್ಥರಿಗೆ ಪರಿಹಾರ ನೀಡುವ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
“ಕಳ್ಳಬಟ್ಟಿ ಸೇವನೆ ಮಾಡಬಾರದು ಎಂದು ಹೇಳುತ್ತಲೇ ಬಂದಿದ್ದೇವೆ. ಇದನ್ನು ಕುಡಿದರೆ ಸಾವು ನಿಶ್ಚಿತ ಎಂಬ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ. ಕಳ್ಳಬಟ್ಟಿ ಸೇವಿಸುವವರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದನ್ನು ತಿಳಿಸಲಾಗುತ್ತಿದೆ. ಹೀಗಿದ್ದರೂ ಕುಡಿಯುವವರ ವಿಷಯದಲ್ಲಿ ಸರ್ಕಾರಕ್ಕೆ ಯಾವುದೇ ಮುಲಾಜು, ಕಾಳಜಿ, ಮಮಕಾರ ಇಲ್ಲ” ಎಂದಿದ್ದಾರೆ.
ಇದನ್ನೂ ಓದಿ | Bihar Hooch Tragedy | ಬಿಹಾರದಲ್ಲಿ ಮತ್ತೊಂದು ಕಳ್ಳಬಟ್ಟಿ ದುರಂತಕ್ಕೆ 4 ಬಲಿ, ಕುಡಿದವರು ಸಾಯ್ತಾರೆ ಎಂದ ನಿತೀಶ್