ನವದೆಹಲಿ: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ (Citizenship Amendment Act) ಜಾರಿಗೆ ತರಲಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಕಾಯ್ದೆ ಕುರಿತು ಕೇಂದ್ರ ಸರ್ಕಾರ (Central Government) ಅಧಿಸೂಚನೆ ಹೊರಡಿಸಿದೆ. ಇದರ ಬೆನ್ನಲ್ಲೇ, ಸಿಎಎ (CAA) ಜಾರಿ ಕುರಿತು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಇದರ ಮಧ್ಯೆಯೇ, “ಕೇಂದ್ರ ಸರ್ಕಾರವು ರಾಜಿ ಮಾಡಿಕೊಳ್ಳುವುದಿಲ್ಲ. ಯಾವುದೇ ಕಾರಣಕ್ಕೂ ಸಿಎಎ ವಾಪಸ್ ಪಡೆಯಲ್ಲ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ತಿಳಿಸಿದ್ದಾರೆ.
ಎಎನ್‌ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದ ವೇಳೆ ಅಮಿತ್ ಶಾ ಸ್ಪಷ್ಟನೆ ನೀಡಿದರು. “ನಮ್ಮ ದೇಶದ ಪೌರತ್ವ ನೀಡುವುದು ನಮ್ಮ ಸಾರ್ವಭೌಮ ಹಕ್ಕಾಗಿದೆ. ಇದರಲ್ಲಿ ನಾವು ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ. ಯಾವುದೇ ಕಾರಣಕ್ಕೂ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯುವುದಿಲ್ಲ” ಎಂದು ಹೇಳಿದರು. “ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿಎಎ ರದ್ದುಗೊಳಿಸಲಾಗುವುದು” ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಕ್ಕೆ ಉತ್ತರಿಸಿದ ಅಮಿತ್ ಶಾ, “ಕಾಂಗ್ರೆಸ್ ಅಧಿಕಾರಕ್ಕೆ ಬರುವುದೇ ಅನುಮಾನ. ಅದು ಇಂಡಿಯಾ ಒಕ್ಕೂಟದ ನಾಯಕರಿಗೂ ಗೊತ್ತಿದೆ. ಅಷ್ಟಕ್ಕೂ, ಸಿಎಎಅನ್ನು ರದ್ದುಗೊಳಿಸಲು ಕೂಡ ಆಗುವುದಿಲ್ಲ” ಎಂದರು.
'CAA will never be taken back'
— Mr Sinha (Modi's family) (@MrSinha_) March 14, 2024
Clear message by HM Shah. pic.twitter.com/d4YZmOdUzh
ಪೌರತ್ವ ತಿದ್ದುಪಡಿ ಕಾಯ್ದೆ ಎಂದರೇನು?
2014ರ ಡಿಸೆಂಬರ್ 31 ಕ್ಕಿಂತ ಮೊದಲು ನೆರೆಯ ಮುಸ್ಲಿಂ ಬಹುಸಂಖ್ಯಾತ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನದಿಂದ ವಲಸೆ ಬಂದ ಹಿಂದುಗಳು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು, ಜೈನರು ಮತ್ತು ಪಾರ್ಸಿಗಳಿಗೆ ಭಾರತೀಯ ಪೌರತ್ವಕ್ಕೆ ಮಾರ್ಗವನ್ನು ಒದಗಿಸಲು ಸಿಎಎ 1955 ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಸಿಎಎ ಅನುಷ್ಠಾನದ ಬಗ್ಗೆ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ತನ್ನ ಹಿಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಆದರೆ ಅದರ ನಿಯಮಗಳನ್ನು ತಿಳಿಸಲಾಗಿರಲಿಲ್ಲ.
ಇದನ್ನೂ ಓದಿ: Citizenship Amendment Act : ಸಿಎಎ ಜಾರಿಯಿಂದ ಮುಸ್ಲಿಂ ವಲಸಿಗರಿಗೆ ಸಮಸ್ಯೆಯಿದೆಯೇ? ಸರ್ಕಾರ ಹೇಳಿದ್ದೇನು?
ಕಾಯ್ದೆಯ 2019ರ ತಿದ್ದುಪಡಿಯ ಪ್ರಕಾರ ಡಿಸೆಂಬರ್ 31, 2014ರವರೆಗೆ ಭಾರತಕ್ಕೆ ಪ್ರವೇಶಿಸಿದ ಮತ್ತು ತಮ್ಮ ಮೂಲ ದೇಶದಲ್ಲಿ “ಧಾರ್ಮಿಕ ಕಿರುಕುಳ ಅಥವಾ ಭಯ ಅಥವಾ ಧಾರ್ಮಿಕ ಕಿರುಕುಳ” ಅನುಭವಿಸಿದ ವಲಸಿಗರಿಗೆ ಭಾರತೀಯ ಪೌರತ್ವ ಲಭಿಸುತ್ತದೆ. ಸಿಎಎಗೆ 2019ರ ತಿದ್ದುಪಡಿ ಮೂಲಕ ಮೇಲೆ ಹೇಳಿರುವ ದೇಶಗಳ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡುವ ಕಾಯುವಿಕೆಯ ಹನ್ನೆರಡು ವರ್ಷಗಳನ್ನು ಕೇವಲ ಆರು ವರ್ಷಗಳಿಗೆ ಇಳಿಸಲಾಗಿದೆ. ಸಿಎಎ ಕುರಿತ ಗುಪ್ತಚರ ಬ್ಯೂರೋ ವರದಿಯ ಪ್ರಕಾರ, ಕಾಯ್ದೆಯ ನಿಯಮಗಳು ಪ್ರಕಟಗೊಂಡ ತಕ್ಷಣವೇ 30,000 ಕ್ಕೂ ಹೆಚ್ಚು ಫಲಾನುಭವಿಗಳು (ವಲಸಿಗರು) ಇದರ ಲಾಭ ಪಡೆಯುತ್ತಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ