Site icon Vistara News

No Confidence Motion: ಮಣಿಪುರ ನಮ್ಮ ಅವಿಭಾಜ್ಯ ಅಂಗ ಎಂದ ಮೋದಿ; ಅವಿಶ್ವಾಸ ನಿರ್ಣಯ ಗೆದ್ದ ಪ್ರಧಾನಿ

Narendra Modi In Lok Sabha

No Confidence Motion: Manipur our jigar ka tukda, country stands with the state; Says Narendra Modi

ನವದೆಹಲಿ: ಮಣಿಪುರ ಹಿಂಸಾಚಾರದ ಕುರಿತು ಲೋಕಸಭೆಯಲ್ಲಿ ಮಾತನಾಡಿದ ನರೇಂದ್ರ ಮೋದಿ, ಮಣಿಪುರದಲ್ಲಿ ಶಾಂತಿ ಸ್ಥಾಪನೆ ಹಾಗೂ ಅಭಿವೃದ್ಧಿಗೆ ನಾವು ಬದ್ಧ ಎಂದು ಹೇಳಿದರು. “ಮಣಿಪುರವು ನಮ್ಮ ಅವಿಭಾಜ್ಯ ಅಂಗವಾಗಿದೆ. ಮಣಿಪುರದ ವಿಷಯದಲ್ಲಿ ನಾವು ನಿರ್ಲಕ್ಷ್ಯ ವಹಿಸಲು ಸಾಧ್ಯವೇ ಇಲ್ಲ. ಮಣಿಪುರ ಜನರ ರಕ್ಷಣೆಯೇ ನಮ್ಮ ಆದ್ಯತೆ” ಎಂದು ಹೇಳಿದರು. ಮತ್ತೊಂದೆಡೆ, ಮೋದಿ ಸುದೀರ್ಘ ಭಾಷಣದ ಬಳಿಕ ಅವಿಶ್ವಾಸ ಗೊತ್ತುವಳಿಯಲ್ಲಿ ಕೇಂದ್ರ ಸರ್ಕಾರ (No Confidence Motion) ಗೆಲುವು ಸಾಧಿಸಿತು. ಅವಿಶ್ವಾಸ ನಿರ್ಣಯವನ್ನು ಧ್ವನಿಮತಕ್ಕೆ ಹಾಕಲಾಯಿತು. ಈ ನಿರ್ಣಯದಲ್ಲಿ ಪ್ರತಿಪಕ್ಷಗಳಿಗೆ ಸೋಲಾದರೆ, ಆಡಳಿತ ಪಕ್ಷ ಗೆಲುವು ಸಾಧಿಸಿತು. ಪ್ರತಿಪಕ್ಷಗಳ ಸಭಾತ್ಯಾಗದ ನಡುವೆ ಮೋದಿ ಯೋಜನೆಗಳ ಬಗ್ಗೆ ಮಾತನಾಡಿದರು. ಕೊನೆಗೆ ಅವಿಶ್ವಾಸ ನಿರ್ಣಯ ಗೆದ್ದರು.

ಮಣಿಪುರ ಹಿಂಸಾಚಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದು, ಅವಿಶ್ವಾಸ ಗೊತ್ತುವಳಿ ಮಂಡಿಸಿದ ಬಳಿಕ ಮೋದಿ ಮಣಿಪುರದ ಕುರಿತು ಮಾತನಾಡಿದರು. “ಮಣಿಪುರದಲ್ಲಿ ನಮ್ಮ ಮಾತೆಯರ ಗೌರವಕ್ಕೆ ಧಕ್ಕೆಯಾಗಿದೆ. ಹಿಂಸೆಯ ಘಟನೆಗಳು ನಡೆದಿವೆ. ಕಳೆದ ಆರು ವರ್ಷದಿಂದ ಮಣಿಪುರದಲ್ಲಿ ಬಿಜೆಪಿ ಸರ್ಕಾರವಿದೆ. ಇದುವರೆಗೆ ಶಾಂತಿ ಸ್ಥಾಪನೆಗೆ ಹಲವು ರೀತಿಯಲ್ಲಿ ಪ್ರಯತ್ನಿಸಲಾಗುವುದು” ಎಂದು ಹೇಳಿದರು.

ರಾಜಕೀಯ ಬೇಡ ಎಂದು ಮನವಿ

“ಮಣಿಪುರದಲ್ಲಿ ನಡೆದ ಘಟನೆಗಳ ಬಗ್ಗೆ ನಮಗೆ ಖಂಡಿತವಾಗಿಯೂ ದುಃಖವಾಗಿದೆ. ಆದರೆ, ಎಲ್ಲರೂ ಕೂಡಿ ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ಶ್ರಮಿಸೋಣ. ಯಾರೂ ಮಣಿಪುರದ ಮಣ್ಣನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳಬಾರದು ಎಂದು ಮನವಿ ಮಾಡುತ್ತೇನೆ. ಮಣಿಪುರದ ಏಳಿಗೆಗೆ ನಾವು ಇನ್ನಿಲ್ಲದಂತೆ ಶ್ರಮಿಸಿದ್ದೇವೆ. ಮುಂದೆಯೂ ಅದೇ ರೀತಿಯಲ್ಲಿ ಮುನ್ನಡೆಯುತ್ತೇವೆ. ಇದುವರೆಗೆ ದೇಶದ ಅಭಿವೃದ್ಧಿ ಸೇರಿ ಹಲವು ವಿಷಯಗಳ ಕುರಿತು ಮಾತನಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದ” ಎಂದು ಹೇಳುತ್ತ ಮೋದಿ ಅವರು ಭಾಷಣ ಮುಗಿಸಿದರು.

ಇದನ್ನೂ ಓದಿ: No Confidence Motion: ಮಣಿಪುರಕ್ಕೆ ಮೋದಿ ಶಾಂತಿಯ ‘ಗ್ಯಾರಂಟಿ’; ಲೋಕಸಭೆಯಿಂದಲೇ ಎದ್ದು ಹೋದ ಪ್ರತಿಪಕ್ಷಗಳು

ಇದಕ್ಕೂ ಮೊದಲು ಮೋದಿ ಅವರು ಪ್ರತಿಪಕ್ಷಗಳನ್ನು ಟೀಕಿಸಿದರು. ಇಂಡಿಯಾ ಒಕ್ಕೂಟ, ಭ್ರಷ್ಟಾಚಾರ, ದುರಾಡಳಿತ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಟೀಕಿಸಿದರು. ಮೋದಿ ಭಾಷಣದುದ್ದಕ್ಕೂ ಕಾಂಗ್ರೆಸ್‌ ನಾಯಕರು ಮಣಿಪುರ, ಮಣಿಪುರ ಎಂದು ಘೋಷಿಸಿದರು. ಇದೇ ವೇಳೆ ಪ್ರತಿಪಕ್ಷಗಳ ಹಲವು ನಾಯಕರು ಸಭಾತ್ಯಾಗ ಮಾಡಿ ಪ್ರತಿಭಟನೆ ವ್ಯಕ್ತಪಡಿಸಿದರು.

Exit mobile version