Site icon Vistara News

No Confidence Motion: 2024ರಲ್ಲೂ ಪ್ರತಿಪಕ್ಷಗಳಿಗೆ ನಿದ್ದೆ ಇಲ್ಲ; ಸಂಸತ್ತಿನಿಂದಲೇ ಚುನಾವಣೆ ಪ್ರಚಾರ ಆರಂಭಿಸಿದ ಮೋದಿ

Narendra Modi In Lok Sabha

Narendra Modi In Lok Sabha On No Confidence Motion

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯ ಕುರಿತು ಹಲವು ಬಾರಿ ಸಂಸತ್ತಿನಲ್ಲಿ ಪ್ರಸ್ತಾಪಿಸಿದ ಮೋದಿ, 2024ರ ಸಾರ್ವತ್ರಿಕ ಚುನಾವಣೆಗೆ ಸಂಸತ್ತಿನಿಂದಲೇ ರಣಕಹಳೆ ಊದಿದರು. ಅವಿಶ್ವಾಸ ಗೊತ್ತುವಳಿ ಕುರಿತು (No Confidence Motion) ಮಾತನಾಡಿದ ಮೋದಿ, “2024ರ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಯೇ ಗೆಲ್ಲುತ್ತದೆ. 2028ರಲ್ಲೂ ಪ್ರತಿಪಕ್ಷವೇ ಅವಿಶ್ವಾಸ ಗೊತ್ತುವಳಿ ಮಂಡಿಸುವಂತಾಗಲಿ” ಎಂದು ಹೇಳಿದರು.

“ಪ್ರತಿಬಾರಿಯೂ ಒಂದೇ ಉತ್ಪನ್ನವನ್ನು ಕಾಂಗ್ರೆಸ್‌ ಉಡಾವಣೆ ಮಾಡುತ್ತದೆ. ಆದರೆ, ಉಡಾವಣೆ ಮಾಡಿದಾಗಲೂ ಉತ್ಪನ್ನವು ವಿಫಲವಾಗುತ್ತದೆ. ಆದರೆ, ಜನರನ್ನು ದೂಷಿಸಲಾಗುತ್ತದೆ” ಎಂದು ಪರೋಕ್ಷವಾಗಿ ರಾಹುಲ್‌ ಗಾಂಧಿ ಅವರಿಗೆ ಟೀಕಿಸಿದರು. “ದೇಶದ ಜನರು ಪರಿವಾರವಾದವನ್ನು ಕಿತ್ತೆಸೆದಿದ್ದಾರೆ. ರಾವಣನ ಅಹಂಕಾರ ತೋರಿದವರನ್ನು 40 ಕ್ಷೇತ್ರಗಳಿಗೆ ಇಳಿಸಿದ್ದಾರೆ” ಎಂದು ಛೇಡಿಸಿದರು.

ಮೋದಿ ಭಾಷಣವನ್ನು ಲೈವ್‌ ನೋಡಿ

ಬಡವರ ಮಗ ಪ್ರಧಾನಿಯಾಗಿದ್ದೇ ಕೋಪಕ್ಕೆ ಕಾರಣ

“ಪ್ರತಿಪಕ್ಷಗಳಿಗೆ ನನ್ನನ್ನು ಕಂಡರೆ ಆಗುವುದಿಲ್ಲ. ಅದೇ ಕಾರಣಕ್ಕಾಗಿ ನಾನು ಒಂದು ಗ್ಲಾಸ್‌ ನೀರು ಕುಡಿದರೂ ಅವರು ಟೀಕಿಸುತ್ತಾರೆ. ಬಡವರ ಮನೆತನದ ವ್ಯಕ್ತಿಯೊಬ್ಬ ಬಂದು, ಜನರ ಬೆಂಬಲ ಗಳಿಸಿ ಪ್ರಧಾನಿ ಹುದ್ದೆಯಲ್ಲಿ ಕುಳಿತಿರುವುದು ಕುಟುಂಬ ರಾಜಕಾರಣಿಗಳಿಗೆ ಸಹಿಸಲು ಆಗುತ್ತಿಲ್ಲ. ಬಡವರ ಮಗನೊಬ್ಬ ಅವರ ನಿದ್ದೆ ಕೆಡಿಸಿದ್ದಾನಲ್ಲ ಎಂಬ ಚಿಂತೆ ಅವರನ್ನು ಕಾಡುತ್ತಿದೆ. ಹಾಗಾಗಿ, ಅವರಿಗೆ ರಾತ್ರಿ ನಿದ್ದೆ ಬರುತ್ತಿಲ್ಲ. 2024ರ ಚುನಾವಣೆ ಬಳಿಕವೂ ಪ್ರತಿಪಕ್ಷಗಳಿಗೆ ನಿದ್ದೆ ಬರುವುದಿಲ್ಲ” ಎಂದು ಹೇಳುವ ಮೂಲಕ ಮುಂದಿನ ಚುನಾವಣೆಯಲ್ಲೂ ನಮ್ಮದೇ ಗೆಲುವು ಎಂಬ ಸಂದೇಶ ರವಾನಿಸಿದರು.

ಇದನ್ನೂ ಓದಿ: No Confidence Motion: I.N.D.I.Aದಲ್ಲೂ N.D.A ಇದೆ, ಯುಪಿಎಗೆ ಶ್ರಾದ್ಧ ಮಾಡಲಾಗಿದೆ; ಸಂಸತ್ತಲ್ಲಿ ಮೋದಿ ಮಾತಿನೇಟು

ಭಾರತ ದಿವಾಳಿ ಆಗುವುದರ ಗ್ಯಾರಂಟಿ

“ಕೆಲ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌, ದೂರದೃಷ್ಟಿ ಇಲ್ಲದ ಯೋಜನೆಗಳನ್ನು ರೂಪಿಸುತ್ತಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು ಎಂಬ ಕಾರಣದಿಂದಲೇ ಇಲ್ಲಸಲ್ಲದ ತಂತ್ರ ರೂಪಿಸುತ್ತಿದೆ. ಇದು ದೇಶವನ್ನು ದಿವಾಳಿ ಮಾಡಲು ಕಾಂಗ್ರೆಸ್‌ ಗ್ಯಾರಂಟಿ ನೀಡುತ್ತಿದೆ. ತುಷ್ಟೀಕರಣ, ಭ್ರಷ್ಟಾಚಾರ, ಅಭಿವೃದ್ಧಿಯ ಕುಂಠಿತಗೊಳಿಸಲು ಇಂತಹ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ, ದೇಶವನ್ನು ವಿಶ್ವದಲ್ಲೇ ಮೂರನೇ ಬಲಿಷ್ಠ ಆರ್ಥಿಕ ರಾಷ್ಟ್ರವಾಗಿ ರೂಪಿಸುವುದು ನಮ್ಮ ಗ್ಯಾರಂಟಿ” ಎಂದು ಕಾಂಗ್ರೆಸ್‌ನ ಉಚಿತ ಯೋಜನೆಗಳಿಗೆ ಟೀಕಿಸಿದರು.

Exit mobile version